ADVERTISEMENT

ಪುಸ್ತಕ ವಿಮರ್ಶೆ: ಬಾಂಗ್ಲಾದ ಹಕ್ಕಿಗಳು ಇಲ್ಲಿ ಹಾರುವುದಿಲ್ಲ

ಸುಶೀಲಾ ಡೋಣೂರ
Published 27 ಆಗಸ್ಟ್ 2022, 19:30 IST
Last Updated 27 ಆಗಸ್ಟ್ 2022, 19:30 IST
ಬಾಂಗ್ಲಾದ ಹಕ್ಕಿಗಳು
ಬಾಂಗ್ಲಾದ ಹಕ್ಕಿಗಳು   

‘ಬಾಂಗ್ಲಾದ ಹಕ್ಕಿಗಳು’– ಇದು ಅಮರೇಶ ಗಿಣಿವಾರ ಅವರ ಎಂಟು ಕತೆಗಳ ಪುಟ್ಟ ಕಥಾಸಂಕಲನ. ಹೆಸರೇ ಸೂಚಿಸುವಂತೆ ವಲಸಿಗರ ಭಾವಬುತ್ತಿಯನ್ನು ಬಿಚ್ಚಿಡುವ ‘ಬಾಂಗ್ಲಾದ ಹಕ್ಕಿಗಳು’ ಕತೆಯ ಮೂಲಕ ಇಲ್ಲಿನ ಕಥಾಲೋಕ ಬಿಚ್ಚಿಕೊಳ್ಳುತ್ತದೆ. ಅಷ್ಟೆ ಅಲ್ಲ, ಉಳಿದೆಲ್ಲಾ ಕತೆಗಳನ್ನು ಓದಿ ಮುಗಿಸಿದ ಮೇಲೂ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದುಕೊಳ್ಳುವುದು ಇದೇ ಕತೆ. ಎಲ್ಲಿಂದಲೊ ಬಂದು ಇಲ್ಲಿ ಸೇರಿಕೊಳ್ಳುವ ಈ ವಲಸೆ ಹಕ್ಕಿಗಳು ಹಾರುವುದಿಲ್ಲ. ಇಲ್ಲಿ ಸಿಗುವ ಸಣ್ಣಸಣ್ಣ ನೆಮ್ಮದಿ, ಚಿಕ್ಕಪುಟ್ಟ ಖುಷಿ, ಬೂದಿ ಮುಚ್ಚಿದ ಕೆಂಡದಂತಿರುವ ತಣ್ಣನೆಯ ಕ್ರೌರ್ಯ, ಸದಾ ಉಳ್ಳವರನ್ನೇ ಕಾಯುವ ವ್ಯವಸ್ಥೆ... ಇವೆಲ್ಲವುಗಳೊಂದಿಗೆ ಹೊಂದಿಕೊಂಡು, ತಮ್ಮ ಬಾಳನ್ನೂ, ಮನಸ್ಸನ್ನೂ ಅದಕ್ಕೆ ಒಗ್ಗಿಸುತ್ತ ಬದುಕಿ ಬಿಡುತ್ತವೆ ಎನ್ನುವ ಸಂಗತಿಯನ್ನು ಇಲ್ಲಿನ ಪ್ರತೀ ಕತೆ ಧ್ವನಿಸುತ್ತದೆ.

ಇದು ಅಮರೇಶರ ಎರಡನೇ ಕಥಾಸಂಕಲನ. ಮೊದಲ ಕಥಾಸಂಕಲನದಲ್ಲಿ ಕಾಣಸಿಗುವ ಹುಡುಕಾಟ, ಭಾವತೀವ್ರತೆ, ಆಕ್ರೋಶ ಓದುಗನನ್ನು ಇಲ್ಲಿಯೂ ತಟ್ಟುತ್ತವೆ. ಅನೇಕ ಕತೆಗಳಲ್ಲಿ ಸಮಾಜದ ಬಗ್ಗೆ, ವ್ಯವಸ್ಥೆಯ ಬಗ್ಗೆ ಲೇವಡಿ ಇದೆ. ಔದ್ಯೋಗೀಕರಣದಂತಹ ಬದಲಾವಣೆಗಳು ಬಡವರ, ಹಳ್ಳಿಗರ ಬದುಕನ್ನು ಹೇಗೆಲ್ಲಾ ಬದಲಿಸಬಲ್ಲವು ಎಂಬುದಕ್ಕೆ ಇಲ್ಲಿ ಸಾಕಷ್ಟು ನಿದರ್ಶನಗಳು ಸಿಕ್ಕುತ್ತವೆ. ‘ಹಸಿಬೆ’, ‘ಸುರಳಿ’, ‘ಸಣ್ಣಜಾಗ’ ಸೇರಿದಂತೆ ಅನೇಕ ಕತೆಗಳಲ್ಲಿ ಮನುಷ್ಯನ ಸಣ್ಣತನ, ಹಪಹಪಿ, ವಾಂಛೆಗಳು ಹೇಗೆಲ್ಲಾ ಇನ್ನೊಬ್ಬರ ಬದುಕನ್ನು ಬಲಿ ಪಡೆಯುತ್ತವೆ ಎನ್ನುವುದನ್ನು ಹೇಳಲು ಪ್ರಯತ್ನಿಸುತ್ತವೆ. ಕನ್ನಡದ ಮಟ್ಟಿಗೆ ಬಹುತೇಕ ಹೊಸದೇ ಎನ್ನುವಂತಹ ಬದುಕುಗಳು ಈ ಕತೆಗಳಲ್ಲಿ ಅನಾವರಣಗೊಂಡಿವೆ.

ಕಥಾವಸ್ತುವಿನ ಆಯ್ಕೆಯಂತೆಯೇ ಅವರು ಕತೆ ಹೇಳುವ ಶೈಲಿಯೂ ವಿಶಿಷ್ಟ. ಅಮರೇಶರ ಕಥನದ ತಂತ್ರಗಾರಿಕೆಯಲ್ಲಿ ಸೊಗಸಾಗಿದೆಯಾದರೂ ಭಾಷೆಯ ವಿಚಾರಕ್ಕೆ ಬಂದಾಗ ಅಲ್ಲಲ್ಲಿ ನಿಂತು ಹೋಗುವಂತಾಗುತ್ತದೆ.

ADVERTISEMENT

ಇತ್ತೀಚೆಗೆ ಕತೆಗಳನ್ನು ಹೇಳುವ ಶೈಲಿ, ಭಾಷೆ ಹಾಗೂ ತಂತ್ರಗಳಲ್ಲಿ ಭಾರೀ ಬದಲಾವಣೆ ಆಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಹೊಸ ಪೀಳಿಗೆ ಅಜ್ಜ ನೆಟ್ಟ ಆಲದ ಮರವೇ ಅಂತಿಮವಲ್ಲ ಎನ್ನುವ ನಿಲುವಿಗೆ ಬಂದಿದೆ. ಕತೆಗಳೆಂದರೆ ಹೀಗೇ ಇರಬೇಕು ಎನ್ನುವ ಸಿದ್ಧಸೂತ್ರಗಳನ್ನು ಮುರಿದು ಮುಂದಡಿ ಇಡುತ್ತಿದೆ. ಗಿಣಿವಾರ ಕೂಡ ಈ ಸಾಲಿಗೆ ನಿಲ್ಲುವ ಕತೆಗಾರ. ಮಾತ್ರವಲ್ಲ, ಕತೆ ಹೇಳುವ ಹೊಸ ದಾರಿಯಲ್ಲಿ ನಿರ್ಭಿಡೆಯ ಹೆಜ್ಜೆಯನ್ನೂ ಇಡುತ್ತಿರುವ ಬರಹಗಾರ.

ಕೃತಿ: ಬಾಂಗ್ಲಾದ ಹಕ್ಕಿಗಳು

ಲೇ: ಅಮರೇಶ ಗಿಣಿವಾರ

ಪ್ರ: ಅರವಿಂದ್‌ ಪ್ರಕಾಶನ, ಸಿಂಧನೂರು

ಪುಟ: 80

ಬೆಲೆ:90

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.