ಹವೇಲಿ ದೊರೆಸಾನಿ
ಕಥೆಯೆಂದರೆ ಕಥೆಗಳೇ. ಇಲ್ಲಿ ಸರಳವಾಗಿ ಕಥೆ ಕಟ್ಟುತ್ತ ಹೋಗುವ ಕಥೆಗಾರರು ನಮ್ಮೊಳಗಿನ ಅಂತಃಕರಣವನ್ನು ತಟ್ಟುತ್ತಲೇ ಅಂತಃಸಾಕ್ಷಿಯನ್ನು ಬಡಿದೆಬ್ಬಿಸುತ್ತಾರೆ. ನಗರದ ಪಾತ್ರಗಳ ಟೊಳ್ಳುತನ ಮತ್ತು ಗ್ರಾಮೀಣ ಜನರೊಳಗಿನ ಗಟ್ಟಿತನ ಅಲ್ಲಲ್ಲೆ ಒರೆಗೆ ಹಚ್ಚುತ್ತಲೇ ನಾಗರಿಕರು ಎನಿಸಿಕೊಂಡವರು ಅದೆಷ್ಟು ಸ್ವಕೇಂದ್ರಿತ ವ್ಯವಸ್ಥೆಯಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಹೇಳುತ್ತ ಹೋಗುತ್ತಾರೆ.
ಅನ್ಪಡ ಕಂಟೆವ್ವ (ಅನಕ್ಷರಸ್ಥ ಕಂಟೆವ್ವ) ಕಥೆಯ ಕಂಟೆವ್ವನ ಔದಾರ್ಯ, ಗ್ರೀನ್ ರೂಮ್ ಕಥೆಯ ಪಾತ್ರಗಳು, ಕಥೆಯೊಳಗೊಂದು ಕತೆಯಾಗಿ, ಆ ಹನ್ನೆರಡು ಗಂಟೆಗಳು ಕಥೆಯಲ್ಲಿ ಸಾಂಗತ್ಯ ಗಟ್ಟಿಗೊಳ್ಳುವ ಕಥನ ಇವೆಲ್ಲವೂ ಮನುಷ್ಯ ಸಹಜವಾಗಿ ಬದುಕುವ ಅಗತ್ಯವನ್ನು ಹೇಳುತ್ತಹೋಗುತ್ತವೆ. ಮಾನವೀಯ ಮೌಲ್ಯಗಳೊಂದಿಗೆ ಬದುಕುವುದು ಅದೆಷ್ಟು ಸುಲಭ. ಆದರೆ ಬದುಕನ್ನು ಅದೆಷ್ಟು ಕ್ಲಿಷ್ಟಕರವಾಗಿಸಿಕೊಂಡಿದ್ದೇವೆ ಎನ್ನುವುದನ್ನೂ ಸರಳವಾಗಿ ಕಥೆಗಾರರು ನಿರೂಪಿಸುತ್ತ ಹೋಗಿದ್ದಾರೆ. ತಾವು ಕಂಡ, ಕೆಲವು ಕಡೆ ಉಂಡ ದುಃಖವೂ ಸುತ್ತಲಿನ ಕಥೆಗಳನ್ನೇ ಕಥೆಗಳಾಗಿಸುತ್ತ ಓದುಗರನ್ನು ಸೆಳೆದಿಡುತ್ತದೆ ಹವೇಲಿ ದೊರೆಸಾನಿ ಕಥಾ ಸಂಕಲನ.
ಉತ್ತರ ಕರ್ನಾಟಕದ ಭಾಷೆಯು ಕಥಾ ಸೊಗಡನ್ನು ಹೆಚ್ಚಿಸಿ ಸಹಜಕ್ಕೆ ಹತ್ತಿರವಾಗಿಸಿದೆ. ಆದರೆ ರಾಜ್ಯದ ಎಲ್ಲ ಭಾಗದವರೂ ಓದುವಂಥ ಸರಳತನ ಈ ಭಾಷೆಯಲ್ಲಿದೆ. ಕಥೆ, ಸಂಗತಿಗಳನ್ನು ದಾಖಲಿಸುವುದಷ್ಟೇ ಅಲ್ಲ, ಭಾವೋತ್ಪತ್ತಿಯ ರಸಮಯ ಓದು ಈ ಪುಸ್ತಕದ್ದು.
ಹವೇಲಿ ದೊರೆಸಾನಿ
ಲೇ: ಮಲ್ಲಿಕಾರ್ಜುನ ಶೆಲ್ಲಿಕೇರಿ
ಪ್ರ: ಅಮೂಲ್ಯ ಪ್ರಕಾಶನ
ಸಂ: 94486 76770
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.