book
ಎಪ್ಪತ್ತೈದು ವರ್ಷಗಳ ಹಿಂದೆ, ವೀಣಾ ಶಾಂತೇಶ್ವರ, ವೈದೇಹಿಯರು ಹತ್ತು ವರ್ಷದ ಹುಡುಗಿಯರು. ಅಡಿಗ, ರಾಮಚಂದ್ರ ಶರ್ಮ, ಅನಂತಮೂರ್ತಿ ಮುಂತಾದವರ ರಾಜ್ಯಭಾರ ಮೊದಲಾಗಿತ್ತು. ಆಗ, ಹತ್ತೊಂಬತ್ತರ ತರುಣಿ. ಸಂವೇದನಶೀಲ ಇಂದ್ರಿಯಗಳು, ಮನಸ್ಸು, ಹೃದಯ ಪಡೆದವಳು. ಹಲವು ನಗರಗಳಲ್ಲಿ ಬೆಳೆದು ಕರ್ನಾಟಕದಲ್ಲಿ ಅಪರೂಪವಾದ ಸಮಾಜ, ಸಂಸ್ಕೃತಿಗಳಿಗೆ ತೆರೆದುಕೊಂಡವಳು. ಬಿ.ಎಂ.ಶ್ರೀ.ಯವರ ಮೊಮ್ಮಗಳು. ಕೇವಲ ಮೂರು ವರ್ಷದಲ್ಲಿ ಹತ್ತೋ ಹನ್ನೆರಡೋ ಕಥೆ ಬರೆದಳು. ಹೆಣ್ಣು-ಗಂಡುಗಳ ಚಲನಶೀಲ ಅಂತರಂಗಕ್ಕೆ ಭಾಷೆ-ಕನ್ನಡಿ ಹಿಡಿದಳು. ಅರಳುವ ಹೂವು, ಮತ್ತು ಅದನ್ನು ನಲುಗಿಸುವ ಹುಳ ಎರಡರ ಬಗ್ಗೆಯೂ ಬರೆದಳು. ಹೂವಿನ ಎರಡೂ ಸ್ಥಿತಿಗಳನ್ನು ಅನುಭವಿಸಿದಳು. ಅವಳ ಹೃದಯ, ಅನುರಕ್ತಿ-ವಿರಕ್ತಿಗಳ ‘ಸಂಗಮ’. ಪುರುಷ ಪ್ರಧಾನ ಸಮಾಜದಲ್ಲಿ ನಲುಗಿದ ಈ ಹೆಣ್ಣು ಒಟ್ಟು ‘ಮನುಷ್ಯ ಸನ್ನಿವೇಶ’ದ ಅರ್ಥವನ್ನು ಅರಸುತ್ತಾ ಬರವಣಿಗೆಗೆ, ಅಷ್ಟೇಕೆ ‘ಈ’ ಜೀವನಕ್ಕೆ ವಿದಾಯ ಹೇಳಿ ಬುದ್ಧನಂತೆ ಕಣ್ಮರೆಯಾದರು. ಆ ಕೆಲವು ಕಥೆಗಳು ಅಂದಿನ, ಇಂದಿನ, ಎಂದಿನ ಕಲಾವಿದರಿಗೆ ಮಾದರಿಯಾಗಿ ಉಳಿದಿವೆ.
ಆ ಹುಡುಗಿ ಈಗ ತೊಂಬತ್ತೊಂದರ ಹರೆಯದ, ಕಣ್ಣಲ್ಲಿ ತಿಳಿವಳಿಕೆ ಮಿನುಗುತ್ತಿರುವ ಚುರುಕು-ಚುಟುಕು ಮಾತುಗಳ ಹಿರಿಯರು. ‘ವಯಸ್ಸಾಗಿರುವ ದೇಹವೂ ನಾನಲ್ಲ, ಮನಸ್ಸೂ ನಾನಲ್ಲ,’ ನಾನು ಬೇರೆ ಎನ್ನಬಲ್ಲವರು. ಆ ಕಾಲದ ನೆನಪುಗಳಿನ್ನೂ ಮಸುಳಿಸಿಲ್ಲ. ಇವರು ರಾಜಲಕ್ಷ್ಮಿ ಎನ್. ರಾವ್. ಮಚಲೀಪಟ್ಟಣ-ಉತ್ತರಕಾಶಿಗಳ ಆಶ್ರಮಜೀವನವನ್ನು ಮೈಸೂರಿನಲ್ಲಿ ಮುಂದುವರಿಸಿದ್ದಾರೆ. ನಾವು-ನೀವು, ಅವರನ್ನು ಓದಬೇಕು. ಲೋಕವನ್ನು-ಭಾಷೆಯನ್ನು ಕಾಣುವ, ಒಳಗೊಳ್ಳುವ, ಬರೆಹದಲ್ಲಿ ಕಟ್ಟುವ ಬಗೆಗಳನ್ನು ಕಾಣಬೇಕು.
ಈ ಪುಸ್ತಕದಲ್ಲಿ ‘ಸಂಗಮ’(1956) ಸಂಕಲನದಲ್ಲಿದ್ದ ಹನ್ನೆರಡು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಐದು ಕಥೆಗಳು, ಬಹುಮಟ್ಟಿಗೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಬಂದ ಹನ್ನೆರಡು ಇಂಗ್ಲಿಷ್ ಕಥೆಗಳು, ಎರಡು ಮುಖ್ಯವಾದ ‘ಬೆಳಕಿಂಡಿ’ ಲೇಖನಗಳು ಇಷ್ಟೇ ಅವರ ಬರವಣಿಗೆ. ಆದರೆ ಅದೇ ಒಂದು ಜಗತ್ತು. ಸಂಪಾದಕರಾದ ಚಂದನ್ ಗೌಡ ಮೂರು ಕಥೆಗಳನ್ನು ಇಂಗ್ಲಿಷ್ ಗೆ ಅನುವಾದಿಸಿದ್ದಾರೆ.
ದೀರ್ಘವಾದ ವಿಮರ್ಶೆಗೆ ಎಡೆಯಿಲ್ಲ. ಕೆಲವು ಅನಿಸಿಕೆಗಳು: ಹೆಣ್ಣು-ಗಂಡು, ಮನುಷ್ಯ-ಲೋಕ-ಪ್ರಕೃತಿ ಸಂಬಂಧದ ‘ಹೊರಗು’ ಮತ್ತು ‘ಘಟನೆ’ಗಳಿಗಿಂತ, ಅಂತರಂಗದ ಒಳ-ಚಲನೆಗಳು ಹಾಗೂ ಆ ಚಲನೆಗೆ ಕಾರಣವಾಗುವ ಒತ್ತಾಯಗಳು ಇಲ್ಲಿ ಮುಖ್ಯ. ಇವು ನಿರೂಪಿತ ‘ಕಥೆ’ಗಳಲ್ಲ. ಬದಲಾಗಿ ಒಂದು ಇನ್ನೊಂದನ್ನು ಬೆಳೆಸುವ ಚಿತ್ರಸಮುದಾಯ. ಖಚಿತವಾದ ‘ಫೆಮಿನಿಸ್ಟ್’ ತಿಳಿವಳಿಕೆಯು ಹೆಣ್ಣುಗಂಡುಗಳನ್ನು ದ್ವೇಷವಿರದೆ ಗ್ರಹಿಸುತ್ತದೆ. ಈ ಕೆಲಸದಲ್ಲಿ ಹೃದಯ, ಬುದ್ಧಿ ಮತ್ತು ವಿವೇಕ ಮೂರೂ ಇವೆ. ಕೇವಲ ಅನುಭವಗಳಲ್ಲ, ಅವುಗಳನ್ನು ಕುರಿತ ‘ಒಳಸರಿದ’ ರೂಪಕನಿಷ್ಠ ಚಿಂತನೆಯಿದೆ. ಇಲ್ಲಿನ ಜಾಣೆಯರಿಗೆ ತಮ್ಮ ಹಂಬಲ, ಶಕ್ತಿ, ಪ್ರೇಮ-ಕಾಮಗಳು ಗೊತ್ತು. ಅವನ್ನು ಬಳಸಿಕೊಳ್ಳುವ ಗಂಡುಹುನ್ನಾರಗಳು ಗೊತ್ತು. ಇದೇ ಉಪಾಯಗಳು, ತಮ್ಮ ‘ಸರ್ವೈವಲ್’ ಸಾಧನಗಳೆಂದೂ ಗೊತ್ತು. ಇಲ್ಲಿ ನಡೆಯುವುದು ‘ವೈಯಕ್ತಿಕ ನರಕ’ಗಳ ಮುಖಾಮುಖಿ. ಇಲ್ಲಿ ಸಾಮಾಜಿಕ ಒತ್ತಡಗಳಿಗೆ, ಶರಣಾಗುವ, ಎದುರಾಗುವ, ಪಲಾಯನ ಮಾಡುವ ಮನುಷ್ಯರು ಇಡಿಕಿರಿದಿದ್ದಾರೆ. ‘ಆವೇ ಮರಿಯಾ’, ಸಂಬಂಧಗಳನ್ನು ಬಿಡಿಸುವ-ಹಿಡಿಸುವ, ಕನಸು-ನನಸು-ಆಧ್ಯಾತ್ಮ-ಸಂಗೀತಗಳ ಸಂಕೀರ್ಣ ಕೂಡು ಬಿಂದು. ಟೋನಿ ಮಾಡಿದ ಆಯ್ಕೆ ಅಂತಹ ಅನೇಕರ ಆಯ್ಕೆ ಆಗುವುದಿಲ್ಲ. ‘ಫೀಡ್ರ’ದಂತಹ ಹಲವು ಕಥೆಗಳ ಅಪರಾಧೀಭಾವದ ಉರುಳು ಗೊತ್ತಾಗುವುದು ಕೊರಗಾಗಿ, ವಾದವಾಗಿ ಅಲ್ಲ, ಕಲಾತ್ಮಕ ಕಟ್ಟೋಣಗಳಾಗಿ. ಈ ಕಥೆಗಳು ಸ್ತ್ರೀವಾದವು ‘ಒಳಜಲ’ವಾಗಿ ಹರಿಯುವ ಅತ್ಯುತ್ತಮ ಮೂಲಮಾದರಿಗಳು. ನವ್ಯರಲ್ಲಿ ಸಹಜವಾಗಿದ್ದ ಸ್ವಾತಂತ್ರ‍್ಯಾನಂತರದ ನಿರಾಶೆಯನ್ನು ವರ್ಗವ್ಯತ್ಯಾಸಗಳಲ್ಲಿ ಗ್ರಹಿಸುವ ಒಳ್ಳೆಯ ಕಥೆಗಳು ರಾಜಲಕ್ಷ್ಮಿಯವರ ಪ್ರಧಾನ ಆಸಕ್ತಿಯಲ್ಲ. ಮಧ್ಯಮವರ್ಗದ ವಿದ್ಯಾವಂತರ ಜೀವನದ ಮೂಲಕವೇ ಎಲ್ಲರಿಗೂ ಮುಖ್ಯವೆನಿಸುವ ಶಕ್ತಿ ಈ ಕಥೆಗಳಿಗಿದೆ.
ಈ ಕಥೆಗಳ ವಿಶಿಷ್ಟತೆ ಅವುಗಳ ಕಲೆಗಾರಿಕೆ ಮತ್ತು ನಿರೂಪಣೆಯಲ್ಲಿದೆ. ಇವರದು ಸೂಕ್ಷ್ಮವಾದ ಇಂದ್ರಿಯಗ್ರಹಿಕೆ ಹಾಗೂ ಕಲ್ಪನಾಶಕ್ತಿಗಳ ‘ಸಂಗಮ’. ವಸ್ತುಗಳನ್ನು, ವಸ್ತುಲೋಕದ ಸಂಯೋಜನೆಗಳನ್ನು ನಿಶಿತ-ಖಚಿತವಾದ ಭಾಷೆಯ ಮೂಲಕ ಗ್ರಹಿಸುತ್ತಾರೆ. ಕತ್ತಲು-ಬೆಳಕು-ಕಪ್ಪು-ಕೆಂಪು-ಕಡಲು- ಮುಗಿಲು-‘ವಸ್ತು’ಗಳ ಮೂಲಕ ಮನೋವ್ಯಾಪಾರಗಳ ತಳಮಳಗಳನ್ನು ಬಿಡಿಸಿಡುವ ವ್ಯವಧಾನ ಅಸಮಾನವಾದುದು. ಯಾರೋ ಕುಡಿದ ‘ಟೀ ಕಪ್’ ತಳದಲ್ಲಿ ಇರುವ ಚರಟದ ವಿನ್ಯಾಸದಲ್ಲಿ ಒಂದು ಹೆಣ್ಣು ಪಾತ್ರವು ಹೃದಯ, ಭ್ರೂಣ, ಮತ್ತು ರಕ್ತಕಣಗಳನ್ನು ಕಾಣುತ್ತದೆ. ಕಪ್ಪನ್ನು ಅಲ್ಲಾಡಿಸಿದಾಗ ಒಂದು ಹನಿ ಚಹಾ ಇದೆಲ್ಲವನ್ನೂ ಮುಳುಗಿಸಿ ಬಿಡುತ್ತದೆ. ಈ ಕತೆಗಳಲ್ಲಿ ಇಂತಹ ನೂರಾರು ವಸ್ತುಪ್ರತಿರೂಪಗಳಿವೆ. ಇನ್ನೊಂದು ನಿದರ್ಶನ: ‘ಅವನನ್ನು ಮೊದಲ ಸಲ ಭೇಟಿಯಾದಾಗ ನನಗೆ ಹದಿನೆಂಟು ವರ್ಷ. ಅವನಿಂದ ದೂರವಾದಾಗ ಸರಿಯಾಗಿ ನೂರ ಹದಿನೆಂಟು ವರ್ಷ.’
ಇವರ ಹಿರಿಯ ಬಂಧುಗಳಾದ ತ್ರಿವೇಣಿಯವರ ಬರೆಹಗಳಿಗೆ ಹೋಲಿಸಿದರೆ ಎಷ್ಟೊಂದು ವ್ಯತ್ಯಾಸ!
ಅಖಿಲ-ಭಾರತ ಸಂದರ್ಭದಲ್ಲಿಯೂ ಪಥಪ್ರವರ್ತಕವಾದ, ಮುಖ್ಯವಾದ ಈ ಇಂಗ್ಲಿಷ್ ಕಥೆಗಳ ಪ್ರತ್ಯೇಕ ಓದಿನ ಅಗತ್ಯವಿದೆ. ಅವು ಮಹಿಳೆಯರ ಮನಃಪಟಲದ ತಲ್ಲಣ-ಬಿಡುಗಡೆಗಳ ದ್ವಿಭಾಷಿಕ, ಕಲಾತ್ಮಕ ಹೆಜ್ಜೆಗುರುತುಗಳು. ಸಾಹಿತ್ಯಲೋಕವು ಇಂತಹ ಲೇಖಕಿಯನ್ನು ಮರೆತುಬಿಟ್ಟಿತ್ತು. ‘ಔಟ್ ಆಫ್ ಮೈಂಡ್’ ಆಗಲು ‘ಔಟ್ ಆಫ್ ಸೈಟ್’ ಆಗುವ ಅಗತ್ಯವೇನೂ ಇಲ್ಲ.
ಬೇರೊಂದು ಅಧ್ಯಯನಕ್ಷೇತ್ರದಲ್ಲಿ ಪರಿಣಿತರಾದ ಚಂದನ್ ಗೌಡರು, ಲೇಖಕಿಯನ್ನು ಹುಡುಕಿ, ಸಂದರ್ಶನ ಮಾಡಿ, ಹೊಸ ಕಥೆಗಳನ್ನು ಅರಸಿ, ಅಚ್ಚುಕಟ್ಟಾಗಿ ಸಂಪಾದನೆ ಮಾಡಿ ಹೊರತಂದಿದ್ದಾರೆ. ಇಲ್ಲಿ, ಸಾಹಿತ್ಯ ಸಂಶೋಧನೆ, ಸಾಹಿತ್ಯ ವಿಮರ್ಶೆ ಮತ್ತು ಗ್ರಂಥಸಂಪಾದನೆಗಳು ಒಗ್ಗೂಡಿವೆ. ಅವರ ಕಾಳಜಿ-ಶ್ರಮಗಳಿಗೆ ಕನ್ನಡಲೋಕ ಕೃತಜ್ಞವಾಗಿರಬೇಕು.
ಸಂಗಮ ಕಥೆಗಳು
ಲೇ: ರಾಜಲಕ್ಷ್ಮೀ ಎನ್.ರಾವ್
ಸಂ: ಚಂದನ್ ಗೌಡ
ಪ್ರ: ಸಂಕಥನ
ಸಂ: 9019529494
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.