ADVERTISEMENT

ಪುಸ್ತಕ ವಿಮರ್ಶೆ | ‘ತುಂಟ’ ಕವಿಯ ಜೀವನಮಥನ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 19:31 IST
Last Updated 4 ಫೆಬ್ರುವರಿ 2023, 19:31 IST
ಮನಸೇ... ಕೃತಿಯ ಮುಖಪುಟ
ಮನಸೇ... ಕೃತಿಯ ಮುಖಪುಟ   

‘ತುಂಟ’ ಕವಿಯ ಜೀವನಾನುಭವ ಮಥನ ಮಾಡಿದೆ ಈ ಕೃತಿ. ಬರಿಯ ಅನುಭವವಲ್ಲ. ಅನುಭಾವದ ಛಾಯೆಯೂ ಅಲ್ಲಿ ಕಾಣಿಸಿದೆ. ಉದಾಹರಣೆಗೆ ‘ಬದುಕು ರೂಪುಗೊಳ್ಳುವ ಬಗೆ’ ಲೇಖನದಲ್ಲಿ ‘ತ್ರಿಕಾಲ ಜ್ಞಾನಿಯಾದ ಗೀತಾಚಾರ್ಯನಿಗೇ (ಶ್ರೀಕೃಷ್ಣ) ಯಾವ ದುರಂತವನ್ನೂ ತಪ್ಪಿಸಲಾಗಲಿಲ್ಲ. ಯಾದವರೆಲ್ಲಾ ತಮ್ಮ ತಮ್ಮಲ್ಲೇ ಕಾದಾಡಿಕೊಂಡು ಸತ್ತಾಗ ಭ್ರಮ ನಿರಸನಗೊಳ್ಳುತ್ತಾನೆ. ಸಾಮಾನ್ಯ ಬೇಡನ ಬಾಣದಿಂದ ಅವನ ಸಾವು ಸಂಭವಿಸುತ್ತದೆ...’ ಎನ್ನುವ ವಿಶ್ಲೇಷಣೆ.

ಭವಿಷ್ಯ ಪೂರ್ವನಿಶ್ಚಿತವಾದದ್ದು ಎಂಬ ಚಿಂತನೆಯನ್ನು ಮೇಲಿನ ಸಾಲುಗಳ ಮೂಲಕ ಚರ್ಚೆಗೆ ಒಳಪಡಿಸಿದ್ದಾರೆ ಲೇಖಕ. ನಮ್ಮ ಅಂತರಾತ್ಮಕ್ಕೆ ನಿಷ್ಠರಾದರೆ ಬೇರೆಯವರಿಗೆ ಅಪ್ರಾಮಾಣಿಕರಾಗಲು ಸಾಧ್ಯವೇ ಇಲ್ಲ ಎಂದು ‘ಅಂತರಂಗಕ್ಕೊಂದು ಒಳ್ಳೆಯತನದ ಬೆಳಕು’ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮರುಗುವ ಮೇಷ್ಟ್ರು, ಮೊದಲ ಬರಹವು ‘ಸುಧಾ’ದಲ್ಲಿ ಪ್ರಕಟವಾದಾಗಿನ ಸಂಭ್ರಮವನ್ನು ನೆನಪಿಸಿದ್ದಾರೆ. ಕಾಮಕುತೂಹಲದ ವಿವರಣೆಯಲ್ಲಿ ಕೊನೆಯ ಸಾಲು (ಲೇಖನ: ಲಿಬಿಡೋ ಬಿಡುವುದಿಲ್ಲ) ಆಸಕ್ತಿದಾಯಕವಾಗಿದೆ. ತೀರಾ ಸಡಿಲ ಬಿಟ್ಟರೆ ತಂತಿ ಮಿಡಿಯುವುದಿಲ್ಲ. ತೀರಾ ಬಿಗಿ ಮಾಡಿದರೆ ತಂತಿ ಹರಿದು ಹೋದೀತು. ವೀಣೆಯನ್ನು ಹದವರಿತು ಶ್ರುತಿ ಮಾಡುವ ವಿದ್ಯೆಯನ್ನು ಪೋಷಕರು ಕಲಿಯಬೇಕಾದದ್ದು ಇಂದಿನ ಅಗತ್ಯ ಎಂದಿದ್ದಾರೆ.

ತುಂಟ ಕಣ್ಣುಗಳು ಜೀವನವನ್ನೊಮ್ಮೆ ಹಿಂತಿರುಗಿ ನೋಡಿವೆ. ಹಾಗಾಗಿ ಈ ಕೃತಿ ನಿಜ ಅರ್ಥದ ಮನಸ್ಸಿನ ಮಾತಾಗಿದೆ. ಹಿರಿದಾದ ಅರ್ಥವನ್ನೂ ಅಂತರಾಳದಲ್ಲಿ ಇರಿಸಿಕೊಂಡಿದೆ.

ADVERTISEMENT

***

ಕೃತಿ: ಮನಸೇ ನನ್ನ ಮನಸೇ
ಲೇ: ಬಿ.ಆರ್‌. ಲಕ್ಷ್ಮಣರಾವ್‌
ಪ್ರ: ಸಪ್ನ ಬುಕ್‌ ಹೌಸ್‌
ಸಂ: 080– 40114455

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.