
ಚೀಮನಹಳ್ಳಿ ರಮೇಶಬಾಬು ಅವರ ಮೂರನೇ ಕಥಾಸಂಕಲನ ‘ಮಹಾತ್ಮೆ’. ಇದರಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ. ಗ್ರಾಮೀಣ ಮತ್ತು ಆಧುನಿಕ ಬದುಕಿನ ವಿಶಿಷ್ಟ ಮತ್ತು ವಿಭಿನ್ನ ರೀತಿಯ ಪಾತ್ರಗಳ ಮೂಲಕ ಈ ಸಂಕಲನದ ಕಥೆಗಳು ಗಮನಸೆಳೆಯುತ್ತವೆ.
ಈ ಕಥಾ ಸಂಕಲನದಲ್ಲಿರುವ ಮಹಾತ್ಮೆ ಕಥೆಯು ಕಥಾನಾಯಕನ ಪಾತ್ರದ ಆಯ್ಕೆಯಿಂದಲೇ ಗಮನ ಸೆಳೆಯುತ್ತದೆ. ಮೇಲ್ನೋಟಕ್ಕೆ ಶನಿ ಮಹಾತ್ಮೆ ಹೇಳುವವನ ಪುರಾಣದಂತೆ ಕಾಣುವ ಕಥೆಯು, ಗ್ರಾಮೀಣ ಭಾಗದ ಜೀವನ, ಬದಲಾಗುತ್ತಿರುವ ಜೀವನ ಶೈಲಿ, ಸಂಸ್ಕೃತಿ, ಸಂಪ್ರದಾಯ, ಪುರುಷ ಪ್ರಧಾನ ಸಮಾಜದ ಅಹಮಿಕೆ, ಜೀವನದ ಕುರಿತ ಜಿಜ್ಞಾಸೆ, ಆಸೆ - ದುರಾಸೆ, ನಂಬಿಕೆಗಳನ್ನು ಸರಳವಾಗಿ ಕಟ್ಟಿಕೊಟ್ಟಿದೆ. ಮಹಾತ್ಮೆ ಕಥೆಯ ಕಥಾನಾಯಕ ಗಂಗಿರೆಡ್ಡಿಯಂತವರು ಪ್ರತಿ ಹಳ್ಳಿಗಳಲ್ಲೂ ಇನ್ನೂ ಜೀವಂತವಾಗಿದ್ದಾರೆ. ಹಾಗಾಗಿ, ಕಥೆಯು ವಾಸ್ತವ ಬದುಕಿನ ಚಿತ್ರಣದಂತೆ ತೋರುತ್ತದೆ.
ಇನ್ನೊಂದು ಪ್ರಮುಖ ಕಥೆ ‘ಸಾವಯವ’. ತಿನ್ನುವ ಅನ್ನವು ಹುಳುವಿನ ರೀತಿ ಕಾಣಿಸಿಕೊಳ್ಳಲು ಶುರುವಾದಾಗ, ಕಥಾನಾಯಕ ಪರಮೇಶಿ ಪಡುವ ಪಡಿಪಾಟಲುಗಳೇ ಈ ಕಥೆ. ಆದರೆ, ಅದರ ಹೊರಗೂ ಮತ್ತೇನನ್ನೋ ಓದುಗನಿಗೆ ಮುಟ್ಟಿಸಲು ಪ್ರಯತ್ನಿಸಿದ್ದಾರೆ. ಕಥಾವಸ್ತುವಿನ ಆಯ್ಕೆಯಿಂದಲೂ ಈ ಕಥೆ ಗಮನ ಸೆಳೆಯುತ್ತದೆ.
ಬೇಟೆ, ಸಾವು, ಹುಡುಕಾಟ, ಕೇರಿಗಳು ಕಥೆಗಳು ವಿಭಿನ್ನ ರೀತಿಯ ಜಿಜ್ಞಾಸೆಯಿಂದ ಕೂಡಿವೆ. ಸಾಮಾನ್ಯ ಮನುಷ್ಯನ ಆಲೋಚನಾ ಲಹರಿಯೊಳಗಿನ ತಾಕಲಾಟಗಳು ಇಲ್ಲಿ ಕಥೆಗಳಾಗಿವೆ. ಮನುಷ್ಯನ ಒಳಗಿನ ಸಂಕಟ, ತೊಳಲಾಟ, ನೋವು, ಹತಾಶೆ, ಆಕ್ರೋಶ, ಸಂತಸಗಳು ಈ ಸಂಕಲನದ ಕಥೆಗಳ ಸಾಮಾನ್ಯ ಅಂಶವಾಗಿದೆ.
ಇಲ್ಲಿನ ಕಥೆಗಳು ಸರಳ ನಿರೂಪಣೆಯಿಂದ ಕೂಡಿವೆ. ಕೆಲವು ಕಥೆಗಳಲ್ಲಿ ಅಗತ್ಯವಿರುವಲ್ಲಿ ತೆಲುಗು ಮಿಶ್ರಿತ ಕನ್ನಡವನ್ನು ಬಳಕೆ ಮಾಡಿಕೊಂಡಿರುವುದು, ಕಥೆಗಳಿಗೆ ಗ್ರಾಮೀಣ ಸೊಗಡು ನೀಡಿರುವ ಜೊತೆಗೆ ಓದುಗನಿಗೂ ನೈಜತೆಯ ಅನುಭವ ನೀಡುತ್ತದೆ.
ಮಹಾತ್ಮೆ ( ಕಥಾಸಂಕಲನ)
ಲೇ: ಚೀಮನಹಳ್ಳಿ ರಮೇಶಬಾಬು ಪ್ರ: ಅನಿಮ ಪುಸ್ತಕ
ಮೊ: 9845875423
Cut-off box - ಮಹಾತ್ಮೆ ( ಕಥಾಸಂಕಲನ) ಲೇ: ಚೀಮನಹಳ್ಳಿ ರಮೇಶಬಾಬು ಪ್ರ: ಅನಿಮ ಪುಸ್ತಕ ಮೊ: 9845875423
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.