ADVERTISEMENT

ಮೊದಲ ಓದು: ಕರಾವಳಿಯ ಸುತ್ತಾಟ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 23:30 IST
Last Updated 23 ಆಗಸ್ಟ್ 2025, 23:30 IST
ಅದೆಲ್ಲಾ ಬಿಟ್ಟು
ಅದೆಲ್ಲಾ ಬಿಟ್ಟು   

ಲೇಖಕ ಶ್ರೀನಿವಾಸ ಜೋಕಟ್ಟೆ ಅವರು ನಾಲ್ಕು ದಶಕಗಳಿಂದ ಕಥೆಗಳನ್ನು ಬರೆಯುತ್ತಿದ್ದಾರೆ. ನಿಯಮಿತವಾಗಿ ಬೇರೆ ಬೇರೆ ಪತ್ರಿಕೆ, ವಿಶೇಷಾಂಕಗಳಿಗೆ ಬರೆದ ಕಥೆಗಳು ‘ಅದೆಲ್ಲಾ ಬಿಟ್ಟು’ ಸಂಕಲನದಲ್ಲಿ ಇವೆ. ಇಲ್ಲಿನ ಕಥೆಗಳಲ್ಲಿ ಮಂಗಳೂರಿನಿಂದ ಮುಂಬೈವರೆಗಿನ ಪಯಣದ ಅನುಭವ ದಟ್ಟವಾಗಿ ಕಾಣಿಸುತ್ತದೆ. ಕರಾವಳಿ ಬದುಕು ಮತ್ತು ವಲಸಿಗನ ಭಾವ ಸಂವೇದನೆ ಇಲ್ಲಿ ಹರಳುಗಟ್ಟಿದೆ. ಜೀವನ ಒಂದೇ ಊರಲ್ಲಿ ನೆಲೆ ನಿಲ್ಲಲು ಆಗುವುದಿಲ್ಲ. ಹುಟ್ಟಿ ಬೆಳೆದ ಮನೆ ಮಾರುವ ಅನಿವಾರ್ಯತೆ ಉಂಟು ಮಾಡುವ ವೇದನೆ ಕೂಡ ಕಾಣಸಿಗುತ್ತಿದೆ. ಬಹುತೇಕ ಕಥೆಗಳಲ್ಲಿ ‘ಮತ್ಸ್ಯಗಂಧ’ವಿದೆ. 

ಮಂಗಳೂರು ಬಳಿಯ ಸುರತ್ಕಲಿನಿಂದ ಮುಂಬೈಗೆ ಬಸ್ಸಿನಲ್ಲಿ ಹೊರಟರೆ ಉಡುಪಿ, ಸಾಲಿಗ್ರಾಮ ಕೋಟಗಳ ದರ್ಶನ ಮಾಡಿಸುತ್ತಿತ್ತು. ಕೊಂಕಣ ರೈಲು ಆರಂಭವಾದ ನಂತರ ಮತ್ಸ್ಯಗಂಧ ರೈಲಿನಲ್ಲಿ ನಿರೂಪಕನಿಗೆ ಸಾಲಿಗ್ರಾಮದ ಆಂಜನೇಯ ದೇವಸ್ಥಾನ, ಕೋಟ ಹೈಸ್ಕೂಲ್‌... ಕಾಣುತ್ತಿರಲಿಲ್ಲ. ಆ ಕೊರತೆ ನೀಗಬೇಕೆಂದರೆ ಯಶೋಧಕ್ಕನ ಮನೆಗೆ ಬರಬೇಕಿತ್ತು. ಅಚ್ಚರಿ ಮೂಡಿಸಲು ಆ ಮನೆಗೆ ದಿಢೀರೆಂದು ಒಮ್ಮೆ ಆತ ಭೇಟಿ ನೀಡುತ್ತಾನೆ. ಅಲ್ಲಿ ಯಶೋಧಕ್ಕ ಇಲ್ಲ. ಅವರು ಮನೆ ಮಾರಿ ಪೂನಾವನ್ನು ಸೇರಿದ್ದಾರೆ. ಲ್ಯಾಂಡ್‌ ಲೈನ್‌ ಫೋನ್‌ ಫಜೀತಿ, ಅದಕ್ಕೆ ನೆರೆಹೊರೆಯ ಮನೆಗಳಿಗೆ ಕರೆ ಮಾಡುವುದು ಅಲ್ಲಿ ಆದ ಆಕರ್ಷಣೆ ‘ಅದೆಲ್ಲಾ ಬಿಟ್ಟು’ ಕಥೆಯಲ್ಲಿ ಭಾರವಾದ ನೆನಪಾಗಿ ಕಾಡುತ್ತವೆ. 

ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಮಂಗಳೂರಿನಲ್ಲಿ ಹಿಂದಿ ಆವರಿಸಿರುವ ಬಗ್ಗೆ ‘ಕನಸಿನ ಬೀಜ ಹಸಿರಾಗಿ ಚಿಗುರೊಡೆದು’ ಕಥೆಯಲ್ಲಿ ಗಿರೀಶ ವಿಷಾದದಿಂದಲೇ ನುಡಿಯುತ್ತಾನೆ. ಇಲ್ಲೂ ಆಸ್ತಿ ಮಾರುವ ವಿಷಯ ಬಂದಾಗ ‘ಅಮ್ಮಾ, ಅನ್ಯಧರ್ಮದವರಿಗೆ ಮಾರಬೇಡಿ ಅವರು ಮನೆ ಖರೀದಿಸಿದರೆ ಮೊದಲಿಗೆ ನಿಮ್ಮ ತುಳಸೀ ಕಟ್ಟೆಯನ್ನು ಒಡೆದು ಹಾಕಬಹುದು...’ ಮಂಗಳೂರು ನಗರದ ಬಸ್ಸಿನಲ್ಲಿ ‘ಕಿಸೆಗಳ್ಳರಿದ್ದಾರೆ ಎಚ್ಚರಿಕೆ’ ಎಂಬ ಬರಹ ಸಮುದಾಯದಲ್ಲಿ ಅಪರಿಚಿತರ ಪ್ರಮಾಣ ಹೆಚ್ಚುತ್ತಲೇ ಇದ್ದು, ಪರಸ್ಪರರ ಬಗ್ಗೆ ಶಂಕೆ, ಅನುಮಾನದಲ್ಲಿ ಕಾಲ ನೂಕುತ್ತಿರುವ ವಾಸ್ತವವನ್ನು ಧ್ವನಿಸುತ್ತದೆ.  

ADVERTISEMENT

ಅದೆಲ್ಲಾ ಬಿಟ್ಟು

ಲೇ: ಶ್ರೀನಿವಾಸ ಜೋಕಟ್ಟೆ

ಪ್ರ: ಸಾಹಿತ್ಯ ಸುಗ್ಗಿ

ಸಂ: 9740066842

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.