ADVERTISEMENT

ಭಾಷಾ ರಾಜಕೀಯಕ್ಕೂ ಶತಮಾನಗಳ ಇತಿಹಾಸ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 19:30 IST
Last Updated 20 ಏಪ್ರಿಲ್ 2019, 19:30 IST
   

ಕರ್ನಾಟಕ– ಬಹುತ್ವದ ಆಯಾಮಗಳು

ಲೇ: ಷ. ಶೆಟ್ಟರ್

ಪ್ರಕಾಶನ:ಅಭಿನವ

ADVERTISEMENT

ಬೆಲೆ: ರೂ 75

ಪುಟ: 92

ಫೋನ್‌: 9448804905

ಕ್ರಿ.ಶ. 400ರ ಸಮಯದಲ್ಲಾಗಲೇ ಕನ್ನಡ ಲಿಪಿ ಬಳಕೆಯಲ್ಲಿತ್ತು. ಆದರೆ ಇದನ್ನು ಒಪ್ಪಲು ತಮಿಳು ಶಾಸನ ತಜ್ಞರು ಸಿದ್ಧವಿರಲಿಲ್ಲ. ಅಷ್ಟೇ ಅಲ್ಲ ಬ್ರಾಹ್ಮೀ ನಂತರ ಕೆಳದಖ್ಖಣದಲ್ಲಿ (ಕರ್ನಾಟಕ– ಆಂಧ್ರದಲ್ಲಿ) ಬಳಕೆಗೆ ಬಂದ ಲಿಪಿಯನ್ನು ಅಂದಿನ ಶಾಸನ ತಜ್ಞರು ತಮಗೆ ತೋಚಿದ ಹೆಸರುಗಳಿಂದ ಗುರುತಿಸಿದರೇ ಹೊರತು ಕನ್ನಡ ಲಿಪಿ ಎನ್ನಲಿಲ್ಲ. ಭಾಷಾ ರಾಜಕೀಯಕ್ಕೆ ಸಾಕ್ಷಿಯಾಗುವ ಇಂತಹ ಅಪರೂಪದ ಸಂಗತಿಗಳಿರುವ ಪುಸ್ತಕ ಇದು. ಸಾಕ್ಷ್ಯಾಧಾರಗಳನ್ನು ಒದಗಿಸಿ ನಿರೂಪಿಸಬಲ್ಲ ನಾಡಿನ ಇತಿಹಾಸದ ಇಂತಹ ಹಲವು ತುಣುಕುಗಳು ಇಲ್ಲಿವೆ. ಇತಿಹಾಸಕಾರ, ಭಾಷಾ ಚರಿತ್ರಕಾರರಾಗಿ ಯಾವುದನ್ನೂ ಇದೇ ಕೊನೆ ಎಂಬಂತೆ ಸಾಧಿಸದ ಷ. ಶೆಟ್ಟರ್ ನಿಲುವು ಹೊಸ ಹೊಳಹು ನೀಡುತ್ತದೆ. ಮತ್ತೇನೊ ವಿವರ ಹುಡುಕಿ ಹೊರಡಲು ಓದುಗರನ್ನೂ ಇತಿಹಾಸಪ್ರಿಯ ಆಸಕ್ತರನ್ನೂ ಪ್ರೇರೇಪಿಸುವಂತಿದೆ. ಇದು ಹೌದೆನಿಸುವ ಇನ್ನಷ್ಟು ವಿವರಗಳು ಹೀಗಿವೆ.

ಬಳ್ಳಾರಿ ಜನತೆಗೊಂದು ಘನತೆಯ ಪುರಾತನತೆ ಇದೆ. ತೆಕ್ಕಲಕೋಟೆಯಲ್ಲಿ ದೊರೆತ ಅಸ್ಥಿಪಂಜರಗಳು ನಮ್ಮ ಪೂರ್ವಜರು ಪ್ರೋಟೋ ಆಸ್ಟ್ರೋಲಾಯ್ಡ್ ಮತ್ತು ಮೆಡಿಟರೇನಿಯನ್ ಸಂಯುಕ್ತ ಜನಾಂಗಗಳಿಗೆ ಸೇರಿದವರೆಂಬುದನ್ನು ತೋರಿಸಿಕೊಟ್ಟಿವೆ. ಕ್ರಿ.ಪೂ. 200ಕ್ಕೂ ಹಿಂದೆ ಇಲ್ಲಿದ್ದ ಕೃಷಿ ಜೀವನದ ಕುರುಹುಗಳ ಕುರಿತು ಹಲವು ಉತ್ಖನನಗಳು ಹೇಳುತ್ತವೆ.

ಕಲೆಯ ಇತಿಹಾಸದಲ್ಲಿ ಕಂಡು ಬರುವ ಮೂರು ಪ್ರಧಾನ ವಾಸ್ತು ಶೈಲಿಯ ದೇವಾಲಯಗಳಿಗೆ ತಾವು ಒದಗಿಸಿದ ಗರಿಮೆ ಬಳ್ಳಾರಿ ಜಿಲ್ಲೆಯದು. ಬಾದಾಮಿ ಚಾಳುಕ್ಯರ ಕಾಲದ ಉಸುಗು ಕಲ್ಲಿನ ದೇವಾಲಯ ಸಂಡೂರಿನ ಕುಮಾರಸ್ವಾಮಿ ಬೆಟ್ಟದಲ್ಲಿ ನಿರಮಾಣವಾಗಿರುವುದು ಒಂದು ವಿಸ್ಮಯವೇ. ಕಲ್ಯಾಣ ಬಾಗಳಿ, ಹಿರೇ ಹಡಗಲಿ, ಹೂವಿನ ಹಡಗಲಿ, ಕುರುಗೋಡು, ಕುರವತ್ತಿ, ಉಜ್ಜೈನಿ ಮುಂತಾದೆಡೆ ಇರುವ ಚಾಳುಕ್ಯರ ವಾಸ್ತುಶೈಲಿಯಲ್ಲಿರುವ ಬಳಪದ ಕಲ್ಲಿನ ಕರಿಕಂದು ಬಣ್ಣದ ಕಟ್ಟಡಗಳು ಕೂಡ ವಿಶಿಷ್ಟ. ವಿಭಜನಾ ಪೂರ್ವದ ಧಾರವಾಡ ಜಿಲ್ಲೆ ಬಿಟ್ಟರೆ ಕರ್ನಾಟಕದ ಬೇರಾವ ಜಿಲ್ಲೆಗಳಲ್ಲೂ ಇವು ಸಿಗುವುದಿಲ್ಲ. ಕಗ್ಗಲ್ಲಿನಲ್ಲಿ ನಿರ್ಮಿಸಿರುವ ವಿಜಯನಗರ ದೇವಾಲಯಗಳು ಇನ್ನೊಂದು ಬಗೆಯ ವಾಸ್ತುಶೈಲಿ. ಮೊದಲಿನದು ಹೊರತುಪಡಿಸಿದರೆ ಉಳಿದೆರಡು ಶೈಲಿಗಳ ಪರಿಚಯಕ್ಕೆ ಬಳ್ಳಾರಿ ಜಿಲ್ಲೆಗೇ ಬರಬೇಕು!

ಬೇರೆ ಬೇರೆ ಸಂದರ್ಭಗಳಲ್ಲಿ ಅವರು ಮಾಡಿದ ಭಾಷಣಗಳ ಮುದ್ರಿತ ರೂಪ ಮತ್ತು ಮೊದಲ ಸಹಸ್ರಮಾನದ ಕನ್ನಡ ಶಾಸನಗಳ ಮೊದಲ ಸಂಪುಟಕ್ಕೆ ಬರೆದ ಮುನ್ನುಡಿ ಇಲ್ಲಿನ ನಾಲ್ಕು ಅಧ್ಯಾಯಗಳಡಿ ಒಂದೆಡೆ ದಾಖಲಾಗಿದೆ. ಹಳಗನ್ನಡ ಸಾಹಿತ್ಯದ ಸೊಗಡು, ನಾಡು– ನುಡಿಯ ಹೆಮ್ಮೆ ಅರಿಯಬಯಸುವವರಿಗೆಲ್ಲ ಹಿಗ್ಗು ತರುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.