ADVERTISEMENT

ಮೊದಲ ಓದು: ಜೀವನದ ವಾಸ್ತವಾಂಶಗಳ ಸಾರುವ ಕಥೆಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 20:37 IST
Last Updated 1 ನವೆಂಬರ್ 2025, 20:37 IST
ಎಂ.ಟಿ.ವಾಸುದೇವನ್ ನಾಯರ್‌ 
ಎಂ.ಟಿ.ವಾಸುದೇವನ್ ನಾಯರ್‌    

ಹಹಹ

ಮಲಯಾಳದ ಖ್ಯಾತ ಕಥೆಗಾರ ಎಂ.ಟಿ.ವಾಸುದೇವನ್ ನಾಯರ್ ಅವರ ಕಥೆಗಳನ್ನು ಮೋಹನ ಕುಂಟಾರ್ ಕನ್ನಡದ ಓದುಗರಿಗೆ ಈ ಪುಸ್ತಕದ ಮೂಲಕ ಪರಿಚಯಿಸಿದ್ದಾರೆ. ಜೀವನದ ವಾಸ್ತವಾಂಶಗಳನ್ನು ಸಾರುವ ಇಲ್ಲಿನ ಕಥೆಗಳು, ಸಮಾಜದ ಸಂಕೀರ್ಣತೆಯನ್ನು ಸೊಗಸಾಗಿ ಬಿಚ್ಚಿಡುತ್ತವೆ. ಇಲ್ಲಿನ ಪ್ರತಿಯೊಂದು ಕಥೆಗಳಲ್ಲಿ ಭಿನ್ನ ವಸ್ತುಗಳಿದ್ದರೂ ಅವೆಲ್ಲವೂ ಬದುಕಿಗೆ ಸಂಬಂಧಿಸಿದ್ದೇ ಆಗಿವೆ. ಇಲ್ಲಿನ ಕಥೆಗಳಲ್ಲಿ ಇರುವ ಸಾರ ಕಥೆಗಾರ ಸಮಾಜವನ್ನು ಆಳವಾಗಿ ಗ್ರಹಿಸಿದುದರ ಪ್ರತೀಕ. ಸೈದ್ಧಾಂತಿಕ ನಿಲುವುಗಳಿಗೆ ಅತೀತವಾಗಿ ಬದುಕಿನ ವಾಸ್ತವತೆಯನ್ನು, ಸಮಾಜದ ಕೊಂಕುಗಳನ್ನು, ಸಮಾಜದ ಭಿನ್ನ ಜನರ ವ್ಯಕ್ತಿತ್ವಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಸುಖ, ದುಃಖ, ಅಸಹಾಯಕತೆ, ವ್ಯಾಕುಲತೆ, ಕ್ಲೇಶ, ನೋವು, ಭಾವೋದ್ವೇಗ ಮುಂತಾದವುಗಳ ಚಿತ್ರಣ ಓದುಗರ ಹೃದಯ ವೀಣೆಯನ್ನು ಮೀಟುತ್ತದೆ. ಕಡಿಮೆ ಪದಗಳ ಮೂಲಕ ವಿಷಯದ ಬಗ್ಗೆ ಭಾವ ತೀವ್ರತೆಯನ್ನು ಮೂಡಿಸಿ, ಯೋಚನೆಗೆ ಹಚ್ಚುವ ಕಥೆಗಾರರ ಶೈಲಿ ಭಿನ್ನವಾದುದು. ಕಥೆಗಾರರ ಆಶಯಕ್ಕೆ ಚ್ಯುತಿಯಾಗದಂತೆ ಕನ್ನಡದ ಓದುಗರಿಗೆ ತಲುಪಿಸಿದ ಅನುವಾದಕರ ಪ್ರಯತ್ನವೂ ಕಡಿಮೆಯೇನಲ್ಲ.

ಚಲನಚಿತ್ರಗಳಲ್ಲಿಯೂ ವಾಸುದೇವನ್ ಅವರು ಕೆಲಸ ಮಾಡಿದ್ದರಿಂದ ಕಥೆಗಳು ಕಣ್ಣ ಮುಂದೆ ನಡೆಯವಂತೆ ಭಾಸವಾಗುತ್ತದೆ. ಕೇರಳದ ದೃಶ್ಯಗಳು, ಗ್ರಾಮೀಣ ಜನಜೀವನ, ಹಳ್ಳಿಯ ಸೊಗಡು ದೃಶ್ಯವಾಗಿ ಸಾಗುತ್ತದೆ. ಕುಟುಂಬ
ವೊಂದರಲ್ಲಿ ನಡೆಯಬಹುದಾದ ಘಟನೆಗಳನ್ನೇ ವಸ್ತುವಾಗಿ ತೆಗೆದುಕೊಂಡಿರುವುದರಿಂದ, ಕುಟುಂಬದಲ್ಲಿ ಉಂಟಾಗುವ ತಲ್ಲಣಗಳು, ಕಟ್ಟುಪಾಡುಗಳ ಚಿತ್ರಣವಿದೆ. ಹದಿಹರೆಯದವರ ತಲ್ಲಣಗಳು, ಭಾವ ಪ್ರಕಟಣೆಯ ತೀವ್ರತೆಗಳು ಸಹಜವೆಂಬಂತೆ ಮೂಡಿಬಂದಿದೆ. ಶಿಕ್ಷಕ ವಿದ್ಯಾರ್ಥಿ ನಡುವಿನ ಸಂಬಂಧ, ತುಂಬು ಕುಟುಂಬಗಳು ವಿಘಟನೆಗೊಂಡು ಸಣ್ಣ ಕುಟುಂಬಗಳಾಗಿ ಮಾರ್ಪಾಡಾಗುವ ಚಿತ್ರಣಗಳೂ ಇಲ್ಲಿಯ ಕಥೆಯ ವಸ್ತುಗಳೇ. ಪಾತ್ರವನ್ನು ನಕಾರಾತ್ಮಕವಾಗಿ, ವ್ಯಕ್ತಿಯನ್ನು ದುಷ್ಟ ಎಂದು ಚಿತ್ರಿಸುವುದನ್ನು ಆದಷ್ಟು ತಪ್ಪಿಸಿದ್ದಾರೆ. ಸಂಬಂಧಗಳ ಸೂಕ್ಷ್ಮಗಳನ್ನು ನಾಜೂಕಾಗಿ ದಾಖಲಿಸಿದ್ದು, ಓದುಗನ ಒಳಮನಸ್ಸು ತಟ್ಟುತ್ತದೆ. ಕನ್ನಡದ ಓದುಗರಿಗೆ ಎಂ.ಟಿ.ವಾಸುದೇವನ್‌ ನಾಯರ್‌ ಅವರ ಸಾಹಿತ್ಯ ಹಾಗೂ ಬದುಕನ್ನೂ ಪುಸ್ತಕದಲ್ಲಿ ಪರಿಚಯಿಸಲಾಗಿದೆ.

ADVERTISEMENT

ಎಂ.ಟಿ ವಾಸುದೇವನ್ ನಾಯರ್ ಕಥೆಗಳು
ಮೂಲ: ಮಲಯಾಳ

ಕನ್ನಡಕ್ಕೆ: ಮೋಹನ ಕುಂಟಾರ್‌

ಪ್ರ:ಯಾಜಿ, ಹೊಸಪೇಟೆ

ಮೊ: 70196 37741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.