ADVERTISEMENT

ಮುನ್ನೆಲೆಯಲ್ಲಿ ಮಾತೃಪ್ರಧಾನ ಸ್ಮೃತಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 19:30 IST
Last Updated 9 ಮೇ 2020, 19:30 IST
ಲಚುಮಿ ಅತ್ತೆ
ಲಚುಮಿ ಅತ್ತೆ   

ಲಂಬಾಣಿ ಸಮುದಾಯದ ಅನೂಹ್ಯವಾದ ಲೋಕವೊಂದು ಈ ಕೃತಿಯಲ್ಲಿ ಅನಾವರಣಗೊಂಡಿದೆ.ಲಂಬಾಣಿ ತಾಂಡ್ಯದಲ್ಲಿನ ದಟ್ಟ ಅನುಭವಗಳನ್ನು, ಬಹುಸಂಸ್ಕೃತಿಯ ಆಳದಲ್ಲಿ ಬಹುವಾಗಿ ಕಾಡಿದ ಮತ್ತು ವಿಸ್ಮಯವಾಗಿ ಕಂಡಿದ್ದನ್ನೇ ಲೇಖಕರು ಕಥನವಾಗಿಸಿದ್ದಾರೆ. ಈ ಜನಸಮುದಾಯದ ಸಂಪ್ರದಾಯ, ಅವರ ನೋವು, ಹತಾಶೆ, ಕ್ರೌರ್ಯ, ಅಸಹಾಯಕತೆಗಳು ಪ್ರತಿ ಕಥೆಯಲ್ಲೂ ಹಾಸುಹೊಕ್ಕಾಗಿವೆ.

ಈ ಸಮುದಾಯದ ಪಿತೃಪ್ರಧಾನ ವ್ಯವಸ್ಥೆಯಲ್ಲಿನ ಕ್ರೂರಮುಖಗಳನ್ನು ತೆರೆದಿಡುವ ಜತೆಗೆ ಒಡಲೊಳಗೆ ಅಂತರ್ಗತವಾಗಿರುವ ಮಾತೃಪ್ರಧಾನ ಸ್ಮೃತಿಯನ್ನು ಮುನ್ನೆಲೆಗೆ ತಂದು ನಿಲ್ಲಿಸಿದ್ದಾರೆ ಲೇಖಕರು. ಇದಕ್ಕೆಈ ಕಥಾಸಂಕಲನದಲ್ಲಿನ ‘ಲಚುಮಿ ಅತ್ತೆ’ಯ ಕಥೆ ಸಾಕ್ಷಿಗುಡ್ಡೆಯಂತೆ ಇದೆ. ಪತಿ ಮನೆಯ ಜವಾಬ್ದಾರಿ ಬಿಟ್ಟು, ಸೆರೆಯ ನಶೆಯಲ್ಲಿ ಬಿದ್ದಿದ್ದರೆ ಲಕ್ಷ್ಮಿ ಸಂಸಾರದ ನೊಗ ಹೊರುತ್ತಾಳೆ. ಈ ಕಥೆಯಲ್ಲಿ ಬರುವ ಇನ್ನೊಂದು ಪ್ರಮುಖ ಪಾತ್ರ ಲಕ್ಷ್ಮಿಯ ಮಗಳು ಸುಶೀಲಾ ದುರಂತ ಸಾವು ಬಿಟ್ಟುಬಿಡದೆ ಕಾಡುತ್ತದೆ.

‘ಚೆಲ್ವಿ’ ಮತ್ತು ‘ಹುತ್ತವ ಬಡಿದೊಡೆ’ಕಥೆಗಳು ವಿವಾಹ ಬಾಹಿರ ಸಂಬಂಧದ ಇನ್ನೊಂದು ಆಯಾಮವನ್ನು ತೆರೆದು ತೋರಿಸುತ್ತವೆ. ಹಾಗೆಯೇ ‘ಮನೆ ಮನೆ ದೇವರು’ ಕಥೆಯಲ್ಲಿನ ಕಥಾನಾಯಕ ಕಾಲದ ಮಹಿಮೆಯಲ್ಲಿ ಮೆದುವಾಗುವುದನ್ನು ಕಾಣುತ್ತೇವೆ.

ADVERTISEMENT

‘ಬದುಕು ಹುಡುಕುತ್ತಾ’ ಕಥೆ ಓದುವಾಗ ಎದೆಯಲ್ಲಿ ಒಂದು ನಿಟ್ಟುಸಿರು ಗೊತ್ತಿಲ್ಲದಂತೆ ಸುಳಿದುಬಿಡುತ್ತದೆ. ಲೇಖಕ ಕಥೆಗಳಲ್ಲಿ ಪದ ಪಾಂಡಿತ್ಯದ ಪ್ರದರ್ಶನಕ್ಕಿಳಿಯದೆ, ಸಮುದಾಯದೊಳಗಿನ ಆಡುಭಾಷೆಯನ್ನೇ ಕಥನಶೈಲಿಯಾಗಿ ಬಳಸಿರುವುದು, ನೇರ ನಿರೂಪಣೆಯ ತಂತ್ರ ಅನುಸರಿಸಿರುವುದು ವಿಶೇಷವಾಗಿ ಕಾಣಿಸಿದರೂ, ಓದುವಾಗ ನಿರೂಪಣೆ ಸ್ವಲ್ಪ ಜಾಳು ಜಾಳು ಎನಿಸುವುದು ಉಂಟು.

ಗ್ರಾಮ್ಯ ಭಾಷೆಯ ಪದಗಳನ್ನು ಉದ್ದಿಶ್ಯವಾಗಿ ಸೇರಿಸುವ ಕಸರತ್ತು ಮಾಡದೆ, ಸಂದರ್ಭೋಚಿತವಾಗಿ ಬಳಕೆ ಮಾಡಿರುವುದರಿಂದ ಪ್ರತಿ ಕಥೆಗೂ ಪ್ರಾದೇಶಿಕ ಸೊಗಡು ದಕ್ಕಿದೆ. ಉದಾಹರಣೆಗೆ ಫಿರ‍್ತಿ, ಖ್ಯಾಲ, ಒರತಿ, ಗೋಳೆ, ಸೈರ‍್ಯಾ, ಗರ್ಕಾಗಿ ಇಂತಹಲಂಬಾಣಿ ಭಾಷೆಯ ಪದಸಂಪತ್ತಿನ ಸೊಗಡನ್ನು ಓದುಗರು ಆಸ್ವಾದಿಸಬಹುದು. ತಾಂಡ್ಯದ ಜನರ ಆಡುಭಾಷೆಯ ನುಡಿಗಟ್ಟುಗಳನ್ನು ಎಲ್ಲ ಕಥೆಗಳಲ್ಲಿ ಹೇರಳವಾಗಿ ಬಳಸಿದ್ದರೂ ಓದಗರೊಂದಿಗಿನ ಸಂವಾದಕ್ಕೆ ಅರ್ಥಾತ್‌ ಓದಿನ ಓಘಕ್ಕೆ ಎಲ್ಲಿಯೂ ಅವು ತೊಡಕೆನಿಸುವುದಿಲ್ಲ. ಈ ಕಥಾಸಂಕಲನದಲ್ಲಿ ಒಂಬತ್ತು ಕಥೆಗಳಿವೆ. ಎಲ್ಲ ಕಥೆಗಳೂ ಸರಾಗವಾಗಿ ಓದಿಸಿಕೊಳ್ಳುತ್ತವೆ.

ಲಚುಮಿ ಅತ್ತೆ (ಕಥಾ ಸಂಕಲನ)
ಲೇ: ಪ್ರೊ. ಕೃಷ್ಣ ನಾಯಕ
ಪ್ರ: ಸಿದ್ಧಲಿಂಗೇಶ್ವರ ಪ್ರಕಾಶನ, ಕಲಬುರಗಿ
ಮೊ: 94481 24431

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.