ನಿಗೂಢ ಕಾಡಿನಲ್ಲಿ ಹೆಸರೇ ಇರದ ಅದೆಷ್ಟು ಕಾಲ್ದಾರಿಗಳು. ಈ ಕಾಲ್ದಾರಿಗಳನ್ನೆಲ್ಲ ದಾಟಿ ಅಲ್ಲಿಯೇ ಇದ್ದ ಕಾಡ ಹೂವಿನ ಘಮವನ್ನು ಆಸ್ವಾದಿಸುವುದು ಒಂದು ಬಗೆಯ ಚಂದದ ಅನುಭವ. ಹಸಿರ ಸಾಲಿನಲ್ಲಿ ಸಣ್ಣ ಸಣ್ಣ ತೊರೆಗಳ ಜಾಡು ಹಿಡಿದು ಪ್ರಕೃತಿಯನ್ನು ಆಸ್ವಾದಿಸುವಂತೆ ಭಾಸವಾಗುತ್ತದೆ ಪ್ರಸಾದ ಶೆಣೈ ಆರ್.ಕೆ. ಅವರ ಕಥೆಗಳು.
ಇಲ್ಲಿ ಕರಾವಳಿ ಸಂಸ್ಖೃತಿಯ ಜತೆಗೆ ಪ್ರಕೃತಿಯ ದಟ್ಟ ವಿವರಗಳಿವೆ. ಪಶ್ಚಿಮ ಘಟ್ಟ ಸಾಲುಗಳ ಮಧ್ಯೆ ಹಂಚಿ ಹೋದ ಊರುಗಳು, ಅಲ್ಲಿರುವ ಪಾತ್ರಗಳೆಲ್ಲವೂ ಹಸಿರ ಸಾಲಿನ ಮಧ್ಯೆ ಜಿನುಗುವ ಮಳೆಯಲ್ಲಿ ತಣ್ಣಗೆ ಹಾದು ಹೋದಂತೆ ಭಾಸವಾಗುತ್ತವೆ.
ಮಳೆಗಾಲದಲ್ಲಿ ಮಣ್ಣಿನಡಿಯಲ್ಲಿ ಗುಡುಗು ಮಿಂಚಿಗೆ ಮೂಡುವ ಲಾಂಬು ಅಂದರೆ ಅಣಬೆಗಳು ಇಲ್ಲಿ ಪ್ರೀತಿಯ ರೂಪಕಗಳಾಗಿವೆ. ಸೇಸಿಯನ್ನು ಅಗಾಧವಾಗಿ ಪ್ರೀತಿಸುವ ನಿಚ್ಚುವಿಗೆ ಮಳೆಗಾಲದಲ್ಲಿ ನಾಲ್ಕು ಕಾಸು ಸಂಪಾದಿಸಲು ಅವಕಾಶ ಮಾಡಿಕೊಡುವ ಅಣಬೆಗಳ ರುಚಿಯ ಘಮಲು ಸೇಸಿಯ ಪ್ರೀತಿಯ ಅಮಲು ಎರಡೂ ಒಂದೇ ಆಗಿಯೂ ಕಾಣುತ್ತದೆ. ಹಳ್ಳಿಯ ಸೊಗಡಷ್ಟೆ ಅಲ್ಲದೇ ಪೇಟೆಯಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದರಲ್ಲಿ ಎಲ್ಲ ನಗರ ಸೌಕರ್ಯಗಳ ನಡುವೆ ಬದುಕುವ ಪುಟ್ಟ ಕುಟುಂಬವು ಹೇಗೆ ಪ್ರಕೃತಿಯಿಂದ ದೂರ ಉಳಿದಿದೆ ಮತ್ತು ಪ್ರಕೃತಿಯಿಂದ ದೂರ ಉಳಿದಷ್ಟು ಮನುಷ್ಯ ಮನಸ್ಸಿನ ಮೇಲೆ ಬೀರುವ ಪರಿಣಾಮ ಎಂಥದ್ದು ಎಂಬುದನ್ನು ಬಹಳ ಸೂಕ್ಷ್ಮವಾಗಿ ಕಥೆಗಾರ ಇಲ್ಲಿ ಹೇಳಿದ್ದಾರೆ. ಮಕ್ಕಳ ಲೋಕದಲ್ಲಿ ಅಪರಿಚಿತತೆ ಎಂಬುದು ಕ್ಷಣಿಕವಾದದ್ದು. ಯಾವ ಕ್ಷಣದಲ್ಲಾದರೂ ಮಕ್ಕಳು ಅಪರಿಚಿತತೆಯ ಗೆರೆಯನ್ನು ದಾಟಿ, ಪರಸ್ಪರ ಬೆರೆಯಬಲ್ಲರು ಎಂಬುದನ್ನು ‘ಕಿತ್ತಳೆ ಪೆಪ್ಪರ್‌ಮೆಂಟ್’ ಕಥೆ ಹೇಳುತ್ತದೆ. ಪ್ರಸಾದ್ ಅವರ ಕಥೆಗಳಲ್ಲಿ ಕಾಡು, ಮರ,ಗಿಡ, ಬಳ್ಳಿ, ಹೂವು ಜತೆಗೆ ಮಳೆ ಹೀಗೆ ಪ್ರಕೃತಿಯೇ ಮೈತಳೆದಿದೆ.
ಪುಸ್ತಕದ ಹೆಸರು: ನೇರಳೆ ಐಸ್‌ಕ್ರೀಂ ಲೇ: ಪ್ರಸಾದ ಶೆಣೈ ಆರ್.ಕೆ.ಪ್ರ: ವೀರಲೋಕ ಸಂ:ಪುಟಗಳು : 184ದರ: 225
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.