ADVERTISEMENT

ಕಣ್ಣೀರು, ಕೃತಜ್ಞತೆ ಮತ್ತು ನಿಟ್ಟುಸಿರು

ಚ.ಹ.ರಘುನಾಥ
Published 25 ಏಪ್ರಿಲ್ 2020, 19:30 IST
Last Updated 25 ಏಪ್ರಿಲ್ 2020, 19:30 IST
ನೂರ್‌ ಇನಾಯತ್‌ ಖಾನ್‌
ನೂರ್‌ ಇನಾಯತ್‌ ಖಾನ್‌   

ಚಿಕ್ಕ ವಯಸ್ಸಿನಲ್ಲೇ ಮಹತ್ವವಾದುದನ್ನು ಸಾಧಿಸಿ, ಇನ್ನಷ್ಟು ನಿರೀಕ್ಷೆಗಳನ್ನು ಉಳಿಸಿಹೋದ ಪ್ರತಿಭಾವಂತರ ಪರಂಪರೆಯಲ್ಲಿ ನೆನಪಿಸಿಕೊಳ್ಳಬಹುದಾದ ಹೆಸರು ನೂರ್‌ ಇನಾಯತ್‌ ಖಾನ್‌. ಸಂಗೀತ ಪರಂಪರೆಯ ಕುಟುಂಬದ ಈ ಹೆಣ್ಣುಮಗಳು, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಗೂಢಚಾರಿಣಿಯಾಗಿ ನಿರ್ವಹಿಸಿದ ಪಾತ್ರ ಅವಿಸ್ಮರಣೀಯವಾದುದು. ಯುದ್ಧದ ಯಜ್ಞಕುಂಡಕ್ಕೆ ಬಲಿಯಾದ ಈ ಧೀರೆ ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ದೇಶಗಳ ಗೌರವ–ಕೃತಜ್ಞತೆಗೆ ಪಾತ್ರಳಾಗಿದ್ದಾಳೆ ಎನ್ನುವುದು ಆಕೆಯ ಸಾಧನೆಯ ಮಹತ್ವವನ್ನು ಹೇಳುವಂತಿದೆ.

ನೂರ್‌ಳನ್ನು ಕೇಂದ್ರವಾಗಿರಿಸಿಕೊಂಡಿರುವ ಈ ಪುಸ್ತಕದಲ್ಲಿ ಗಮನಿಸಲೇಬೇಕಾದ ಮತ್ತೆರಡು ವ್ಯಕ್ತಿಚಿತ್ರಗಳಿವೆ. ಒಂದು ಟಿಪ್ಪೂಸುಲ್ತಾನ್‌; ಮತ್ತೊಂದು ಇನಾಯತ್‌ ಖಾನ್‌. ಟಿಪ್ಪೂವಿನ ಸಾಂಸ್ಕೃತಿಕ ಹಾಗೂ ಚಾರಿತ್ರಿಕ ಮಹತ್ವದ ಕಿರುನೋಟವನ್ನು ಈ ಕೃತಿ ನೀಡುತ್ತದೆ. ಕಥಾನಾಯಕಿ ಟಿಪ್ಪೂವಿನ ವಂಶಸ್ಥಳಾದ್ದರಿಂದ ಆತನ ‍ಪ್ರಸ್ತಾಪ ಅಗತ್ಯವೂ ಆಗಿದೆ. ಟಿಪ್ಪೂವಿನ ಮೊಮ್ಮಗಳೊಂದಿಗೆ ವಿವಾಹವಾದ ಮೌಲಾಭಕ್ಷ್‌ರ ಮೊಮ್ಮಗಳು ನೂರಾ. ಮೈಸೂರು ಮತ್ತು ಬರೋಡಾದ ಮಹಾರಾಜರ ಮನ್ನಣೆಗೆ ಪಾತ್ರರಾಗಿದ್ದ ಮೌಲಾಭಕ್ಷ್‌ ದೇಶದ ಸಂಗೀತ ಪರಂಪರೆಯ ಬಹುಮುಖ್ಯವಾದ ಕೊಂಡಿ. ಅವರ ಮಗಳ ಪುತ್ರನಾದ ಇನಾಯತ್‌ ಕೂಡ ತನ್ನಜ್ಜನಂತೆ ಸಂಗೀತ–ಸಾಹಿತ್ಯದ ಸಖ್ಯದಲ್ಲಿ ಸುಖಕಂಡವರು. ಶ್ರೀಕೃಷ್ಣನನ್ನು ಮೆಚ್ಚಿಕೊಂಡಿದ್ದ, ಹರಿಶ್ಚಂದ್ರ ನಾಟಕದಿಂದ ಪ್ರಭಾವಿತರಾಗಿದ್ದ, ವಿದುರನೀತಿ ಓದಿದ್ದ ಹಾಗೂ ಹಿಮಾಲಯದ ಸಖ್ಯ ಹೊಂದಿದ್ದ ಇನಾಯತರು ಬಹುತ್ವವನ್ನು ಉಸಿರಾಡುವ ಭಾರತೀಯ ಸಂಸ್ಕೃತಿಯ ಅಪ್ಪಟ ಪ್ರತಿನಿಧಿ. ಟಿಪ್ಪೂ ಹಾಗೂ ಮೌಲಾಭಕ್ಷ್‌–ಇನಾಯತ್‌ಖಾನ್‌ರ ಚಿತ್ರಣಗಳು ನೂರ್‌ಳ ಕಥೆಯ ನೆಪದಲ್ಲಿ, ಈ ದೇಶದ ಪರಂಪರೆ ಯಾವುದೆನ್ನುವುದನ್ನು ಹಾಗೂ ನಾವೀಗ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಸೂಚಿಸುವಂತಿದೆ.

ಭಾರತೀಯ ತಂದೆ, ಅಮೆರಿಕನ್ ತಾಯಿ, ರಷ್ಯಾದಲ್ಲಿ ಜನನ, ಫ್ರಾನ್ಸ್‌ನಲ್ಲಿ ಬಾಲ್ಯ, ಬ್ರಿಟಿಷರ ಪರವಾಗಿ ಕಾರ್ಯನಿರ್ವಹಣೆ, ಕೊನೆಗೆ ಜರ್ಮನಿಯಲ್ಲಿ ದಾರುಣಸಾವು – ಈ ಜೀವನಚಕ್ರವೇ ನೂರ್‌ಳ ಜೀವನದಲ್ಲಿನ ಅತಿಯೆನ್ನಿಸುವಷ್ಟು ನಾಟಕೀಯತೆಯನ್ನೂ ಹಾಗೂ ಆಕೆಯ ವ್ಯಕ್ತಿತ್ವದಲ್ಲಿನ ‘ವಿಶ್ವಮಾನವ’ ಬಿಂಬವನ್ನೂ ಸೂಚಿಸುವಂತಿದೆ.

ADVERTISEMENT

ನೂರ್‌ಳಿಗೆ ತಂದೆಯಂತೆಯೇ ಸಂಗೀತಗಾರಳಾಗಿ ಸೂಫಿಸಂನ ರಾಯಭಾರಿಯಾಗುವ ಸಾಧ್ಯತೆಯಿತ್ತು; ಮಕ್ಕಳ ಲೇಖಕಿಯಾಗಿ ಮನ್ನಣೆ ಪಡೆಯುವ ದಾರಿಯೂ ಎದುರಿಗಿತ್ತು. ಆದರೆ, ಆಕೆ ಆರಿಸಿಕೊಂಡಿದ್ದು ಸೇನೆಯ ಬದುಕನ್ನು. ಅಪ್ಪನ ಅಕಾಲಿಕ ಸಾವು ಹಾಗೂ ಎರಡನೇ ಮಹಾಯುದ್ಧದ ಸಂದರ್ಭದಲ್ಲಿನ ಸಾಮಾಜಿಕ ಸ್ಥಿತ್ಯಂತರಗಳು ನೂರ್‌ ಸೇನೆಯತ್ತ ಮುಖಮಾಡಲು ಕಾರಣವಾದವು. ಬಾಲ್ಯವನ್ನು ಕಳೆದ ಫ್ರಾನ್ಸ್‌ನಲ್ಲಿಯೇ ಬ್ರಿಟನ್‌ನ ಗೂಢಚಾರಿಣಿಯಾಗಿ ಕಾರ್ಯ ನಿರ್ವಹಿಸಲು ನಿಯೋಜನೆಗೊಂಡಳು. ಸಂಗಡಿಗರೆಲ್ಲ ಒಬ್ಬೊಬ್ಬರಾಗಿ ದೂರವಾದಾಗಲೂ ಧೃತಿಗೆಡದೆ ಏಕಾಂಗಿಯಾಗಿ ದಿಟ್ಟತನದಿಂದ ತನ್ನ ಕರ್ತವ್ಯ ನಿರ್ವಹಿಸಿದಳು. ಕೊನೆಗೆ ನಾಝಿಗಳಿಗೆ ಸೆರೆಸಿಕ್ಕಿ, ಜರ್ಮನಿಯ ಕಾನ್ಸಂಟ್ರೇಷನ್‌ ಕ್ಯಾಂಪೊಂದರಲ್ಲಿ ದುರ್ಬರ ಅಂತ್ಯವನ್ನು ಕಂಡಳು.

ಮೂವತ್ತನೇ ವಯಸ್ಸಿಗೆ ಬದುಕು ಅಂತ್ಯಗೊಂಡ ನೂರ್‌ಳ ಕಥನ, ಉರಿದುಹೋದ ಉಲ್ಕೆಯೊಂದರ ದುರಂತ ಇಲ್ಲವೇ ಯುದ್ಧದ ಕಥನದ ರೂಪದಲ್ಲಿದ್ದರೂ, ಆ ಕೃತಿಯ ಅಂತರಂಗದಲ್ಲಿರುವುದು ಯುದ್ಧದ ನಿರರ್ಥಕತೆಯ ಚಿತ್ರಣ, ಹಿಂಸೆಯ ವಿರೋಧ ಹಾಗೂ ಶಾಂತಿಯ ಹಂಬಲ.

ನೂರ್‌ಳ ಕುರಿತ ಪುಸ್ತಕ ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವ ಕುರಿತಂತೆ, ಆಕೆಯ ಸಹೋದರ ವಿಲಾಯತ್‌ ಖಾನ್‌ರ ಪುತ್ರ ಪೀರ್‌ ಝಿಯಾ ಇನಾಯತ್‌ ಖಾನ್‌, ‘ಈ ಪುಸ್ತಕವು ಎಲ್ಲ ಬಗೆಯ ನಂಬಿಕೆಗಳು ಮತ್ತು ಜನಾಂಗಗಳ ಜನರ ನಡುವೆ ಸೋದರತ್ವ ಮೂಡುವಂತೆ ಓದುಗನಲ್ಲಿ ಸ್ಫೂರ್ತಿ ತುಂಬಲೆಂದು ಹಾರೈಸುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಮಾತಿನ ಮೂಲಕ ಮೌಲಾಭಕ್ಷ್‌, ಇನಾಯತ್‌ ಖಾನ್‌ ಹಾಗೂ ನೂರ್‌ಳ ಬದುಕಿನ ಹಂಬಲವನ್ನೇ ಪೀರ್‌ ಅವರು ಹಿಡಿದಿಡಲು ಪ್ರಯತ್ನಿಸಿದಂತಿದೆ.

ಧರ್ಮದಾಚೆಗೆ ಜಿಗಿಯುವುದನ್ನು ಹಾಗೂ ಮನುಷ್ಯಧರ್ಮದ ಅಗತ್ಯವನ್ನು ನೂರ್‌ ಕುಟುಂಬದ ಮೂರು ತಲೆಮಾರುಗಳು ಪ್ರತಿಪಾದಿಸಿರುವ ಕಥನವನ್ನು ಚಂದ್ರಶೇಖರ್‌ ಮಂಡೆಕೋಲು ಬಹು ಸೊಗಸಾಗಿ ಸಮರ್ಥವಾಗಿ ಚಿತ್ರಿಸಿದ್ದಾರೆ. ದುರಂತ ಕಥನವನ್ನು ಕೊಂಚ ಹೆಚ್ಚೇ ಎನ್ನುವಷ್ಟು ಮೋಹಕ ಭಾಷೆಯಲ್ಲಿ ಚಿತ್ರಿಸಿದ್ದಾರೆ. ಅಚ್ಚರಿ ಹುಟ್ಟಿಸುವಂತಿರುವುದು ಈ ಕೃತಿಗಾಗಿ ಅವರು ನಡೆಸಿರುವ ಅಧ್ಯಯನ. ನೂರ್‌ಳ ನೆನಪುಗಳನ್ನು ಹುಡುಕಿಕೊಂಡು ದೇಶದ ವಿವಿಧ ಭಾಗಗಳಲ್ಲಿ ಅವರು ನಡೆಸಿರುವ ಹುಡುಕಾಟ ಓದುಗನ ಅನುಭವಕ್ಕೆ ಬರುವಂತಿದೆ. ವೃತ್ತಿಯಿಂದ ಪತ್ರಕರ್ತರೂ ಆಗಿರುವ ಅವರು, ತಮ್ಮ ವೃತ್ತಿಗೆ ಅಪವಾದವೆನ್ನುವಷ್ಟು ಸಾವಧಾನದಿಂದ ಸಹೃದಯರ ಕಣ್ಣೀರು, ಕೃತಜ್ಞತೆ ಮತ್ತು ನಿಟ್ಟುಸಿರಿಗೆ ಪಾತ್ರಳಾಗುವ ನೂರ್‌ಳ ಬದುಕನ್ನು ಕಟ್ಟಿಕೊಟ್ಟಿದ್ದಾರೆ.

‘ನಾಝಿ ಹೋರಾಟದ ಆರ್ದ್ರ ಕಾವ್ಯ’ ಎಂದು ಚಂದ್ರಶೇಖರ್ ತಮ್ಮ ಪುಸ್ತಕದ ಶೀರ್ಷಿಕೆಗೆ ವಿಶೇಷಣವೊಂದನ್ನು ಹಚ್ಚಿದ್ದಾರೆ. ‘ನಾಝಿ ವಿರುದ್ಧದ ಹೋರಾಟದ...’ ಎಂದಾಗಬೇಕಿದ್ದ ಆರ್ದ್ರವೂ ರೌದ್ರವೂ ಆದ ಈ ಕಾವ್ಯ, ಸರ್ವಾಧಿಕಾರದ ಹೊಸ ವರಸೆಗಳು ಚಾಲ್ತಿಗೆ ಬರುತ್ತಿರುವ ಆತಂಕ ಹೊಗೆಯಾಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ತೀರಾ ಅಗತ್ಯವಾಗಿದ್ದ ಒಂದು ಸ್ಮರಣೆ.

***

ನೂರ್‌ ಇನಾಯತ್‌ ಖಾನ್‌

ಲೇ: ಚಂದ್ರಶೇಖರ ಮಂಡೆಕೋಲು

ಪು: 180; ಬೆ: ರೂ. 160

ಪ್ರ: ಅಹರ್ನಿಶಿ ಪ್ರಕಾಶನ, ಜ್ಞಾನವಿಹಾರ ಬಡಾವಣೆ, ವಿದ್ಯಾನಗರ ಶಿವಮೊಗ್ಗ–577203. ಫೋನ್: 9449174662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.