ADVERTISEMENT

ಪುಸ್ತಕ ವಿಮರ್ಶೆ: ಅಧ್ಯಯನಶೀಲ ಲೇಖನಗಳ ಗುಚ್ಛ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 19:30 IST
Last Updated 2 ಅಕ್ಟೋಬರ್ 2021, 19:30 IST
ಪುಸ್ತಕದ ಮುಖಪುಟ
ಪುಸ್ತಕದ ಮುಖಪುಟ   

ವರ್ತಮಾನದ ವಿದ್ಯಮಾನಗಳಿಗೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಕನ್ನಡದ ಬರಹಗಾರರಲ್ಲಿ ರಾಜಾರಾಂ ತಲ್ಲೂರು ಕೂಡ ಒಬ್ಬರು. ಅದು ಕೇಂದ್ರದ ಕೃಷಿ ಕಾಯ್ದೆಗಳೇ ಇರಬಹುದು, ಕೊರೊನಾ ಕಾಲದ ಸಂಕಟಗಳೇ ಆಗಿರಬಹುದು, ಮಾಧ್ಯಮವನ್ನು ಕಾಡುತ್ತಿರುವ ಸಂಗತಿಗಳೇ ಆಗಿರಬಹುದು ವಸ್ತುನಿಷ್ಠವಾದ ವಿಶ್ಲೇಷಣೆಯನ್ನು ತಲ್ಲೂರು ಅವರ ಬರಹದಲ್ಲಿ ಕಾಣಬಹುದು. ಆಯಾ ಸಂದರ್ಭಕ್ಕೆ ತಕ್ಕಂತೆ ವಿವಿಧ ಪತ್ರಿಕೆಗಳಿಗೆ ಅವರು ಬರೆದ ಲೇಖನಗಳ ಸಂಗ್ರಹವೇ ನಮ್ದೇಕತೆ.

ವರ್ತಮಾನಕ್ಕೆ ಸ್ಪಂದಿಸುವ ಬರಹಗಳು ಎದುರಿಸುವ ಸಮಸ್ಯೆ ಎಂದರೆ ಕಾಲ ಸರಿದಂತೆ ಅವುಗಳು ಪ್ರಸ್ತುತತೆಯನ್ನು ಕಳೆದುಕೊಳ್ಳುವುದು. ಆದರೆ, ಇಲ್ಲಿನ ಬರಹಗಳು ಆಯಾ ಕಾಲದ ಪ್ರತಿಕ್ರಿಯೆಗಳು ಮಾತ್ರವಾಗಿ ಉಳಿಯದೆ ಸಾರ್ವಕಾಲಿಕತೆಯ ಗುಣವನ್ನು ಪಡೆದು ಅರಳಿರುವುದು. ತಲ್ಲೂರು ಅವರೂ ಪತ್ರಕರ್ತರಾಗಿದ್ದವರು. ಮಾಧ್ಯಮ ರಂಗ ಇಂದು ಎದುರಿಸುತ್ತಿರುವ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಅವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಸುದ್ದಿಮನೆಯ ಹಲವು ಮಿಥ್‌ಗಳನ್ನು ಒಡೆದಿದ್ದಾರೆ. ಅಲ್ಲಿ ಗೆದ್ದಲು ಕಟ್ಟಿದ್ದನ್ನೂ ಎತ್ತಿ ತೋರಿಸಿದ್ದಾರೆ.

ಕೃಷಿ ಕಾಯ್ದೆಗಳ ಕುರಿತು ಅವರು ನೀಡಿರುವ ಒಳನೋಟಗಳು ಕೃಷಿಕ ಸಮುದಾಯ ಎದುರಿಸುತ್ತಿರುವ ಅಪಾಯದ ಮುನ್ಸೂಚನೆಯನ್ನು ಢಾಳಾಗಿ ಎತ್ತಿ ತೋರಬಲ್ಲಂಥವು. ಕಾರ್ಪೊರೇಟ್‌ ಕಂಪನಿಗಳೂ ರೈತ ಎಂಬ ಅರ್ಥವ್ಯಾಪ್ತಿಯಲ್ಲಿ ಬರಲಿವೆ ಎಂದೂ ಅವರು ಎಚ್ಚರಿಸುತ್ತಾರೆ. ತಮ್ಮ ಪ್ರತೀ ವಾದಕ್ಕೆ ಪೂರಕವಾಗಿ ಅವರು ಕೊಡುವ ಅಂಕಿ ಅಂಶಗಳು ಸಮಸ್ಯೆಯ ಗಹನತೆಯನ್ನು ಕಟ್ಟಿಕೊಡುತ್ತವೆ. ಜರ್ನಲಿಸ್ಟಿಕ್‌ ದೃಷ್ಟಿಕೋನದ ಇಲ್ಲಿನ ಬರಹಗಳು ಹಿಂದಣವನ್ನು ಚರ್ಚಿಸುತ್ತಲೇ ಭವಿಷ್ಯದ ಮೇಲೂ ಬೆಳಕು ಹರಿಸುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.