ADVERTISEMENT

ಪುಸ್ತಕ ವಿಮರ್ಶೆ: ದುರಂತಗಳ ದೃಷ್ಟಾಂತ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 19:30 IST
Last Updated 10 ಜನವರಿ 2026, 19:30 IST
book
book   

ಪರಿಸರದ ಮಹಾದುರಂತಗಳು

  • ಲೇ: ನಾಗೇಶ ಹೆಗಡೆ

  • ಪ್ರ: ಭೂಮಿ ಬುಕ್ಸ್

    ADVERTISEMENT
  • ಸಂ: 9449177628 ಪುಟ: 100ಬೆಲೆ: ₹130

ವಿಜ್ಞಾನ ಹಾಗೂ ತಂತ್ರಜ್ಞಾನ ದಿನದಿಂದ ದಿನಕ್ಕೆ ನಮ್ಮ ಬದುಕನ್ನು ಸುಧಾರಿಸುತ್ತಿದೆ ಎನ್ನುವುದು ನಿಜ. ಆ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹಾಗೂ ಮೂಲ ವಿಜ್ಞಾನದ ಅನ್ವೇಷಣೆಗಳು ನೀಡಿರುವ ಕೊಡುಗೆಗಳಿಗೂ ಅಸಂಖ್ಯ ಉದಾಹರಣೆಗಳು ಸಿಗುತ್ತವೆ. ಆದರೆ, ಸಾಮಾಜಿಕ ಹೊಣೆಗೇಡಿತನದಿಂದಾಗಿ ಮಹಾಶೋಧಗಳನ್ನು ಮಹಾದುರಂತಗಳಾಗಿ ಬದಲಿಸಿಕೊಂಡಿರುವುದಕ್ಕೆ ದಂಡಿಯಾಗಿ ಉದಾಹರಣೆಗಳು ಸಿಗುತ್ತವೆ. ಇಂತಹ ಉದಾಹರಣೆಗಳಲ್ಲಿ ಹದಿಮೂರು ಬಿಂದುಗಳನ್ನು ನಾಗೇಶ ಹೆಗಡೆ ಅವರು ಈ ಕೃತಿಯಲ್ಲಿ ಇಟ್ಟಿದ್ದಾರೆ. ಅವನ್ನೆಲ್ಲ ಓದುಗರಾದ ನಾವು ಜೋಡಿಸಿಕೊಂಡು ಓದಿದಾಗ, ಒಂದು ಬಗೆಯಲ್ಲಿ ವಿಷಾದ ಆವರಿಸಿದಂತಾಗುತ್ತದೆ. ಎಷ್ಟೆಲ್ಲ ಅನಾಹುತಗಳನ್ನು ನಮ್ಮ ಕಾಲ ಮೇಲೆ ನಾವೇ ತಂದು ಸುರಿದುಕೊಂಡಿದ್ದೇವೆ ಎಂಬ ಪಾಪಪ್ರಜ್ಞೆ ಕಾಡುವಂತಹ ಸಾಲುಗಳೂ ಕಡಿಮೆಯೇನೂ ಇಲ್ಲ.

ಭೋಪಾಲ್ ದುರಂತ ನಿರಂತರ, ಫುಕುಶಿಮಾದ ಪರಮಾಣು ಪೂತ್ಕಾರ ಎಂಬ ಎರಡು ಅಧ್ಯಾಯಗಳು ಎಂದೋ ಸಂಭವಿಸಿದ ದುರಂತಗಳ ಕಾಲಾತೀತವಾದ ಪರಿಣಾಮಗಳನ್ನು ನಮಗೆ ಕಾಣಿಸುತ್ತವೆ. ಸಿಡಿದು ಅಬ್ಬರಿಸಿದ ರಸಗೊಬ್ಬರ ಎಂಬ ಅಧ್ಯಾಯವು ಸ್ಫೋಟಕಗಳು ತಂದೊಡ್ಡುವ ಮಾನವೀಯ ದುರಂತಗಳ ಹಿಂದೆ ಇರುವ, ರಸಗೊಬ್ಬರಕ್ಕೂ ಬಳಸುವ ರಾಸಾಯನಿಕದ ವೈಜ್ಞಾನಿಕ ಕಥನವೊಂದನ್ನು ಎದುರಲ್ಲಿ ತರುತ್ತದೆ. ವಿಜ್ಞಾನದ ಒಂದು ಉದ್ದೇಶದ ಶೋಧ ಹೇಗೆ ದುರಂತಗಳ ಸರಮಾಲೆಗೆ ಕಾರಣವಾಗುತ್ತದೆ ಎಂಬ ಬೆರಗಿನ ವಿದ್ಯಮಾನವನ್ನು ಈ ಅಧ್ಯಾಯ ಮುಂದೆ ಇಡುತ್ತದೆ.

ಪರಿಸರದ ಮಹಾದುರಂತಗಳು ಎಂಬ ಈ ಕೃತಿಯಲ್ಲಿ 13 ಅಧ್ಯಾಯಗಳಿವೆ. ಕಲಿಸುವವರಿಗೆ ಹಾಗೂ ಅರಿವಿನ ಹಣತೆಯ ಬೆಳಕು ಹಿಡಿಯಹೊರಟ ವಿದ್ಯಾರ್ಥಿಗಳಿಗೆ ಇವು ಬಹುಮುಖ್ಯವಾದ ಸರಳ ಭಾಷೆಯಲ್ಲಿ ಇರುವ ಆಕರ ಎನ್ನಬಹುದು. 'ಇದ್ದಕ್ಕಿದ್ದಂತೆ ರೈತನೊಬ್ಬ ಕೂಗುತ್ತ ಜನಜಂಗುಳಿಯನ್ನು ಭೇದಿಸಿ ಮಂತ್ರಿಯ ಮೇಲೆ ಕೀಟನಾಶಕ ವಿಷವನ್ನು ಎರಚಲೆಂದು ಬಂದ. ಮಿನಿಸ್ಟರ್ ಓಟ ಕಿತ್ತರು. ವಿಷ ಹಿಡಿದವನೂ ಓಡಿದ. ಭದ್ರತಾ ಸಿಬ್ಬಂದಿಯೂ ಓಡಿ ಸಚಿವರಿಗೆ ರಕ್ಷಣೆ ಕೊಟ್ಟು, ತಪ್ಪಿತಸ್ಥನನ್ನು ಹಿಡಿದು ಲಾಕಪ್ಪಿಗೆ ಹಾಕಿದರು. ಕೃಷಿಕರಿಗೆ ಅಷ್ಟು ಕೋಪ ಬರಲು ಕಾರಣ ಏನೆಂದರೆ, ಹಿಂದಿನ ಎರಡು ತಿಂಗಳಲ್ಲಿ ಮಹಾರಾಷ್ಟ್ರದ ಸಾವಿರಕ್ಕೂ ಹೆಚ್ಚು ರೈತರು ತಾವು ಸಿಂಪಡಿಸುತ್ತಿದ್ದ ಕೀಟನಾಶಕಗಳ ವಿಷಬಾಧೆಗೆ ತಾವೇ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ....'

2017ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಹತ್ತಿ ರೈತರಿಗೆ ಸಂಬಂಧಿಸಿದ ಮಾನವೀಯ ಪ್ರಸಂಗವನ್ನು ದೃಶ್ಯವಾಗಿ ಕಟ್ಟಿಕೊಡುವ ಸಾಲುಗಳಿವು. ಇಂತಹ ಸಾದೃಶಗಳು ಕೃತಿಯ ತುಂಬ ಇಡುಕಿರಿದಿದ್ದು, ಮನಕಲಕುತ್ತವೆ. ಪ್ರಶ್ನೆಗಳನ್ನೂ ರಾಚುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.