ADVERTISEMENT

ರಾಗದ ಪ್ರಜ್ಞೆಯ ಹಾಡುವ ಹೊತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 19:30 IST
Last Updated 19 ಫೆಬ್ರುವರಿ 2022, 19:30 IST
ಪ್ರಹರ ಪುಸ್ತಕ
ಪ್ರಹರ ಪುಸ್ತಕ   

ಲೀಲಾಜಾಲವಾಗಿ ಕೊಳಲು ನುಡಿಸುವ ಕೈ ಲೇಖನಿ ಹಿಡಿದಾಗ ಹೊಮ್ಮಿದ ಕೃತಿ ‘ಪ್ರಹರ– ಹಾಡುವ ಗಡಿಯಾರ’.

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮನೆಯೊಳಗೆ ಬಂಧಿಯಾಗಿದ್ದ ಹಲವರು ಹೊಸ ಹೊಸ ಹವ್ಯಾಸಕ್ಕೆ ತೆರೆದುಕೊಂಡರು. ಇದೇ ಲಾಕ್‌ಡೌನ್‌ ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರನ್ನು ಸಾಹಿತಿಯನ್ನಾಗಿಸಿದೆ. ಸಪ್ತ ಸ್ವರ ನುಡಿಸಿದ ಕೈ ಇದೀಗ ಕಾದಂಬರಿಯೊಂದಕ್ಕೆ ಜನ್ಮವಿತ್ತಿದೆ. ಪ್ರಸಕ್ತ ಕಾಲದ ಮನರಂಜನಾ ವೇದಿಕೆ ‘ಒವರ್‌ ದಿ ಟಾಪ್‌’ಗಾಗಿ (ಒಟಿಟಿ) ಶಾಸ್ತ್ರೀಯ ಸಂಗೀತ ಆಧಾರಿತ ಕಥೆಯೊಂದನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದ ಪ್ರವೀಣ್‌ ಅವರು, ಆಪ್ತರಾದ ಜಯಂತ ಕಾಯ್ಕಿಣಿ ಅವರ ಸಲಹೆಯಂತೆ ಅದನ್ನು ಕನ್ನಡದಲ್ಲೇ ಇದೀಗ ಬರೆದು ಪ್ರಕಟಿಸಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಆಧರಿಸಿ ಬರೆದಿರುವ ಈ ಕಾಲ್ಪನಿಕ ಕಥೆಯನ್ನು ಹಾಡುವ ಗಡಿಯಾರದ ಸುತ್ತಮುತ್ತ ಹೆಣೆಯಲಾಗಿದೆ. ಇದುಅಕ್ಷರ ಮತ್ತು ಸಂಗೀತದ ಮಿಶ್ರಣ. ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪರಿಪಾಟದಂತೆ ಸಮಯಾನುಸಾರ ರಾಗಗಳನ್ನು ಹಾಡುವ ಅಪರೂಪದ ಗಡಿಯಾರ ಇಲ್ಲಿನ ಆಕರ್ಷಣೆ. ಇದು ಕೃತಿಯಲ್ಲಿ ರೂಪಕವಾಗಿ ಆವರಿಸುತ್ತಾ ಹೋಗುತ್ತದೆ. ಇಲ್ಲಿ ಸಂಗೀತವನ್ನು ಬಳಸಿಕೊಂಡು ನೀಡುವ ಚಿಕಿತ್ಸೆಯ ಕುರಿತು ಬರವಣಿಗೆ ಇದೆ.

ADVERTISEMENT

ಕಥಾನಾಯಕ ಪಂಡಿತ್‌ ಶಾರದಾಪ್ರಸಾದ್‌ ಬುವಾ ಅವರು ಆವಿಷ್ಕಾರಿಸಿದ ಹಾಡುವ ಗಡಿಯಾರ, ಚಿತ್ರದ ಜೊತೆಗೆ ವಿವರಣೆಯಲ್ಲೂ ರೋಮಾಂಚಕವಾಗಿದೆ. ಇಲ್ಲಿ ಆವಾಗಾವಾಗಿನ ರಾಗದ ಪ್ರಸ್ತಾಪವಿದೆ. ಸಂಗೀತದ ತಾಂತ್ರಿಕ ಮತ್ತು ಸುಪ್ತ ಸಂಗತಿಗಳ ಅರ್ಥ ಮತ್ತು ಟಿಪ್ಪಣಿಯೂ ಅದೇ ಪುಟದಲ್ಲಿ ಅಡಕವಾಗಿದೆ. ಸಂಗೀತದ ಪರಿಚಯವಿಲ್ಲದವರೂ ಇದನ್ನು ಓದಬಹುದು, ಅನುಭವಿಗಳಿಗೆ ಮತ್ತಷ್ಟು ರುಚಿಸಲೂಬಹುದು. ಒಂದರ್ಥದಲ್ಲಿ ಎಂಟು ಅಧ್ಯಾಯಗಳ ಈ ಕಾದಂಬರಿಯು ಸಂಗೀತವನ್ನು ಉಸಿರಾಡುತ್ತಿದೆ. ಜೊತೆಗೆ, ಮುನ್ನುಡಿ ಬರೆದ ಪಂ.ವಿನಾಯಕ ತೊರವಿ ಅವರು ಹೇಳಿದಂತೆ ಈ ಕೃತಿಯು ‘ನಶಿಸಿ ಹೋಗುತ್ತಿರುವ ರಾಗ ಸಮಯದ ಪ್ರಜ್ಞೆಯನ್ನು ಪುನಃ ಸ್ಥಾಪಿಸುವ ಗೋಡ್ಖಿಂಡಿ ಅವರ ಪ್ರಯತ್ನ’.

ಕನ್ನಡ ಬರವಣಿಗೆಯಲ್ಲಿ ಸಂಪೂರ್ಣ ಹಿಡಿತವಿಲ್ಲದೇ ಇದ್ದರೂ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವಂತಿದೆ. ಸಂಭಾಷಣೆಗಳು ಧಾರವಾಡ ಕನ್ನಡದ ಸೋಗು ತೊಟ್ಟಿವೆ.

ಪ್ರಹರ– ಹಾಡುವ ಗಡಿಯಾರ

ಲೇ: ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ

ಪ್ರ: ಸಪ್ನ ಬುಕ್‌ ಹೌಸ್‌, ಬೆಂಗಳೂರು

ಸಂ: 080–40114455

ಪು:156

ದರ: 120

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.