
ಮೊದಲ ಓದು: ಹಟ್ಟಿಯೊಳಗಿನಿಂದ ಇಣುಕುವ ಅಮ್ಮನ ನೆನಪು
‘ರಾಗಿತೆನೆ’ ಶೀರ್ಷಿಕೆಯಲ್ಲಿಯೇ ಒಂದು ಸೆಳೆತವಿದೆ, ಈಗಷ್ಟೇ ಮಳೆ ಬಿದ್ದು ಹದವಾದ ಮಣ್ಣಿನ ಘಮಲು ಇದೆ. ಪ್ರಾರಂಭದಿಂದ ಕೊನೆತನಕ ಅದೇ ಘಮಲನ್ನು ಪಸರಿಸುವ ಕೃತಿಯಿದು. ಕೃತಿಯ ಲೇಖಕ ಜಿ.ಎನ್. ಧನಂಜಯಮೂರ್ತಿ ಕಂಡ ಅವರ ತಾಯಿಯ ಬದುಕೇ ಇಲ್ಲಿ ಅಕ್ಷರರೂಪಕ್ಕಿಳಿದಿದೆ. ಹಾಗಾಗಿ ಇಲ್ಲಿ ಸಾಹಿತ್ಯಕ್ಕಿಂತ ಭಾವನೆಗಳೇ ಹೆಚ್ಚು ಢಾಳಾಗಿವೆ. ಕೇವಲ ಅವರ ಅಮ್ಮನ ಆತ್ಮಕಥೆಯಾಗದೇ, 80–90ರ ದಶಕದಲ್ಲಿ ತಾಯಿಯಾದ ಹಲವರ ಬದುಕಿನ ಕಥೆಯೂ ಹೌದು.
ಕಡೂರಿನ ಕೆ.ಗೊಲ್ಲರಹಟ್ಟಿಯಲ್ಲಿ ಹುಟ್ಟಿ ಬೆಳೆದ ಬುಡಕಟ್ಟು ಸಮುದಾಯದ ಮಹಿಳೆ ತಿಮ್ಮಮ್ಮನ ಆದಿಯಿಂದ ಅಂತ್ಯದವರೆಗಿನ ಬದುಕನ್ನು ಪುಟ್ಟ, ಪುಟ್ಟ ಅಧ್ಯಾಯಗಳಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕ. ಅಧ್ಯಾಯ ಎನ್ನುವುದಕ್ಕಿಂದ ಘಟನೆಗಳನ್ನು ಬಿಡಿಬಿಡಿಯಾಗಿ ಬಿಡಿಸಿಟ್ಟಿದ್ದಾರೆ. ‘ಅವ್ವನ ಮತ್ತು ಅವಳ ವಾರಿಗೆಯವರ ಜನ್ಮದಿನ ಇವತ್ತಿಗೂ ತೀರ್ಮಾನವಾಗದೆ ಉಳಿದಿರುವ ಕುಮಾರವ್ಯಾಸನ ಕಾಲದಂತೆ. ಅವಳ ಬಾಳು ಮಾತ್ರ ಆತನ ಕಾವ್ಯದಷ್ಟೆ ಉತ್ಕೃಷ್ಟ’ ಎಂಬ ಕೃತಿಯ ಮೊದಲ ಸಾಲೇ ಇಡೀ ಕೃತಿಯ ಒಟ್ಟಾರೆ ಸಾರವನ್ನು ತಿಳಿಸಿಬಿಡುತ್ತದೆ. //‘ನಾಯಿ ಮುಟ್ಟಿದ್ದನ್ನು ನಾಯಿ ಕೊರಳಿಗೆ ಕಟ್ಟು’// ಎಂದು ಮುಟ್ಟಾದ ಹೆಂಗಸರನ್ನು ಆ ಹಟ್ಟಿ ಕಾಣುತ್ತಿದ್ದ ಪರಿ ಒಂದು ಸಮುದಾಯದ, ಒಂದು ಕಾಲಘಟ್ಟದಲ್ಲಿ ಹೆಣ್ಣನ್ನು ನಡೆಸಿಕೊಳ್ಳುತ್ತಿದ್ದ ಚಿತ್ರಣವನ್ನು ನೀಡುತ್ತದೆ.
‘ಅವ್ವನ ಫ್ಯಾಷನ್ನುಗಳು’ ಕಡುಬಡತನ ನಡುವೆಯೂ ಅಮ್ಮನ ಕೈಯಿಂದ ಸಿದ್ಧವಾಗುತ್ತಿದ್ದ ಮುದ್ದೆಯ ಸವಿಯನ್ನು ಉಣಿಸುತ್ತದೆ. ತಮ್ಮ ಬದುಕಿನ ಖುಷಿಗಾಗಿ ಹಳ್ಳಿ ಹೆಂಗಸರು ಆಯ್ದುಕೊಳ್ಳುತ್ತಿದ್ದ ಜನಪದ ದಾರಿಗಳನ್ನು ತೆರೆದಿಡುತ್ತದೆ. ಅಪ್ಪನ ಜತೆ ಜಗಳ, ಬಡತನ, ಸಮಾಜದಲ್ಲಿ ಶೋಷಣೆ, ನೋವುಗಳನ್ನೆಲ್ಲ ಸಹಿಸಿಕೊಂಡು ಬದುಕಿನ ಒಂದು ಘಟ್ಟ ತಲುಪಿದ ತಿಮ್ಮಮ್ಮ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಅಲ್ಲಿಂದ ನಂತರದ ಕಥನ ಇಂದಿನ ವಯೋವೃದ್ಧರ ಬದುಕಿನ ಕನ್ನಡಿಯಂತಿದೆ. ಒಂದು ಗುಕ್ಕಿನಲ್ಲಿ ಓದಿ ಮುಗಿಸಬಹುದಾದಷ್ಟು ಸಣ್ಣ ಗಾತ್ರದ ಕೃತಿಯಿದು. ಎಲ್ಲಿಯೂ, ಯಾವುದನ್ನೂ ವೈಭವೀಕರಿಸಿಲ್ಲ. ನಿರೂಪಣೆಯು ಸರಳ ಶೈಲಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.