ನಾಡಿನ ಪ್ರಮುಖ ಕವಿ ಎಸ್.ಜಿ. ಸಿದ್ಧರಾಮಯ್ಯ ಅವರು ಕಾವ್ಯದ ಜೊತೆ ವಿಮರ್ಶೆ, ಪ್ರಬಂಧ, ಸಂಶೋಧನಾ ಕೃತಿಗಳನ್ನೂ ರಚಿಸಿದ್ದಾರೆ. ಮಾತ್ರವಲ್ಲದೆ ರಂಗಭೂಮಿಯಲ್ಲಿಯೂ ಕ್ರಿಯಾಶೀಲ ಪ್ರಯೋಗವನ್ನು ಮಾಡಿದ್ದಾರೆ. ಅದರ ಕುರುಹು ‘ಎಸ್‌ಜಿಎಸ್ ಸಮಗ್ರ ನಾಟಕಗಳು’. ಈ ಕೃತಿ ‘ಬಿಜ್ಜಳ ನ್ಯಾಯ’, ‘ಅನ್ನದಾತ’, ‘ದಾಳ’, ‘ದಂಡೆ’ ಎಂಬ ನಾಲ್ಕು ನಾಟಕಗಳನ್ನು ಒಳಗೊಂಡಿದೆ.
ಬಸವಣ್ಣನವರು ಕಲ್ಯಾಣದಲ್ಲಿ ನೆರವೇರಿಸಿದ ಅಂತರ್ಜಾತಿ ವಿವಾಹದ ಘಟನೆ ಕನ್ನಡದಲ್ಲಿ ಹಲವು ನಾಟಕಗಳಿಗೆ ಕಥಾ ವಸ್ತುವಾಗಿದೆ. ‘ಕೆಟ್ಟಿತ್ತು ಕಲ್ಯಾಣ’, ‘ಸಂಕ್ರಾಂತಿ’, ‘ಮಹಾಚೈತ್ರ’, ‘ತಲೆದಂಡ’ ಹೀಗೆ. ಸಿದ್ಧರಾಮಯ್ಯ ಅವರು ವಸ್ತುವಿನ ಆಯ್ಕೆಯಲ್ಲೂ ತಮ್ಮ ಸೃಜನಶೀಲತೆ ಮೆರೆದಿದ್ದಾರೆ. ಇಲ್ಲಿ ಬಿಜ್ಜಳನ ಆಡಳಿತದಲ್ಲಿದ್ದ ಸ್ತ್ರೀಪರವಾದ ದನಿಯನ್ನು ತಮ್ಮ ರಂಗಪಠ್ಯಕ್ಕೆ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಚಾರಿತ್ರಿಕ ಸಂದರ್ಭಗಳನ್ನು ಇಟ್ಟುಕೊಂಡು ವರ್ತಮಾನದ ಜೊತೆ ಅನುಸಂಧಾನವನ್ನು ಕೃತಿಕಾರರು ಇಲ್ಲಿ ಸಮರ್ಥವಾಗಿ ನಿರ್ವಹಿಸಿದ್ದಾರೆ.
‘ಅನ್ನದಾತ’ ನಾಟಕದಲ್ಲಿ ಸಮಕಾಲೀನ ಕೃಷಿ ಸಮಸ್ಯೆಯನ್ನು ರಂಗದ ಮೇಲೆ ತಂದಿದ್ದಾರೆ. ಇಲ್ಲಿ ರೈತನ ತಾಪತ್ರಯಗಳೂ ಸೇರಿದಂತೆ ವ್ಯವಸ್ಥೆಯ ಅವಕೃಪೆಯಿಂದ ಆಗುತ್ತಿರುವ ತೊಂದರೆಗಳನ್ನು ಅನಾವರಣ ಮಾಡಿದ್ದಾರೆ. ಇಂದು ರೈತ ಬಿತ್ತನೆ ಬೀಜವನ್ನೂ ಕಳೆದುಕೊಳ್ಳುತ್ತಿರುವ ದುರಂತದ ಕಥನವನ್ನು ಇದು ಧ್ವನಿಸುತ್ತದೆ. ಮಹಾಭಾರತದ ಕಥಾವಸ್ತುವನ್ನು ಇಟ್ಟುಕೊಂಡ ‘ದಾಳ’ ವಾಸ್ತವ ಜಗತ್ತಿನೊಂದಿಗೆ ಬೆಸೆದುಕೊಂಡಿದೆ. ಕಾ.ತ. ಚಿಕ್ಕಣ್ಣ ಅವರ ‘ದಂಡೆ’ ಕಾದಂಬರಿಗೆ ಎಸ್‌ಜಿಎಸ್ ರಂಗ ರೂಪವನ್ನು ನೀಡಿದ್ದಾರೆ. ⇒v
ಎಸ್ ಜಿ ಎಸ್ ಸಮಗ್ರ ನಾಟಕಗಳು
ಲೇ: ಎಸ್.ಜಿ. ಸಿದ್ಧರಾಮಯ್ಯ
ಪ್ರ: ಭಾಗವತರು ಬೆಂಗಳೂರು
ಸಂ: 9448077292
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.