ADVERTISEMENT

ಪುಸ್ತಕ ವಿಮರ್ಶೆ |ಶಶಿ ತರೂರ್ ಬರೆದ ‘ಕಗ್ಗತ್ತಲ ಕಾಲ’

ಇ.ಎಸ್.ಸುಧೀಂದ್ರ ಪ್ರಸಾದ್
Published 2 ಜುಲೈ 2023, 1:40 IST
Last Updated 2 ಜುಲೈ 2023, 1:40 IST
   

‘ಭಾರತದಲ್ಲಿನ 200 ವರ್ಷಗಳ ಸಾಮ್ರಾಜ್ಯಶಾಹಿ ಆಡಳಿತದ ಸಂಕೇತವಾಗಿ ಭಾರತಕ್ಕೆ ವರ್ಷವೊಂದಕ್ಕೆ ಒಂದು ಪೌಂಡ್‌ನಂತೆ 200 ವರ್ಷಗಳವರೆಗೆ ಪ್ರಾಯಶ್ಚಿತ್ತದ ರೂಪದಲ್ಲಿ ಬ್ರಿಟನ್ ಋಣ ಸಂದಾಯ ಮಾಡಬೇಕು’ ಎಂದು ಲೇಖಕ ಡಾ. ಶಶಿ ತರೂರ್ ಅವರು 2015ರಲ್ಲಿ ಆಕ್ಸ್‌ಫರ್ಡ್‌ ಯೂನಿಯನ್‌ನಲ್ಲಿ ಮಾಡಿದ ಭಾಷಣ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

ಅಂತರ್ಜಾಲದಲ್ಲಿ ಹಲವು ಲಕ್ಷ ವೀಕ್ಷಣೆ ಕಂಡ ಈ ಭಾಷಣವನ್ನು ನಂತರ ಡಾ. ತರೂರ್ ಅವರು ಪುಸ್ತಕ ರೂಪಕ್ಕೆ ತರಲು ನಿರ್ಧರಿಸಿದರು. ‘ಆನ್‌ ಎರಾ ಆಫ್‌ ಡಾರ್ಕ್‌ನೆಸ್‌ – ಬ್ರಿಟಿಷ್ ಎಂಪೈರ್‌ ಇನ್ ಇಂಡಿಯಾ’ ಎಂಬ ಕೃತಿಯನ್ನು 2016ರಲ್ಲಿ ಪ್ರಕಟಿಸಿದರು. ಇದೇ ಕೃತಿಗೆ 2019ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಲಭಿಸಿತು. ಈ ಕೃತಿಯನ್ನು ಕನ್ನಡಕ್ಕೆ ಎಸ್‌.ಬಿ.ರಂಗನಾಥ್ ಅವರು ಅನುವಾದಿಸಿದ್ದಾರೆ. ಅದಕ್ಕೆ ‘ಕಗ್ಗತ್ತಲ ಕಾಲ’ ಎಂಬ ಶೀರ್ಷಿಕೆ ನೀಡಲಾಗಿದೆ.

ರೇಷ್ಮೆ, ಸಂಬಾರ ಪದಾರ್ಥಗಳ ವ್ಯಾಪಾರಕ್ಕೆಂದು 1600ರಲ್ಲಿ ಭಾರತಕ್ಕೆ ಬಂದ ಈಸ್ಟ್ ಇಂಡಿಯಾ ಕಂಪನಿ, ತನ್ನ ಕುತಂತ್ರ, ಷಡ್ಯಂತ್ರಗಳಿಂದ ಬಲಾಢ್ಯ ಶಕ್ತಿಯಾಗಿ ಬೆಳೆದ ಘಟನೆಯಿಂದ ಹಿಡಿದು, ಸ್ವಾತಂತ್ರ್ಯಾ ನಂತರದ ಸ್ಥಿತಿಯನ್ನೂ ಈ ಕೃತಿ ಹೇಳುತ್ತದೆ. ಭಾರತವನ್ನು ಗೆದ್ದುಕೊಂಡ ಒಂದು ಕಾರ್ಪೊರೇಷನ್‌ನಿಂದ ಭಾರತದ ಕೈಗಾರಿಕೆಗಳು ಹಾಗೂ ಜವಳಿ ಉದ್ಯಮ ನಾಶವಾದ ಬಗೆ, ಹೆಚ್ಚಿದ ಲಂಚಗುಳಿತನ, ಕಂದಾಯ ವಸೂಲಾತಿ, ಸಂಪತ್ತಿನ ಕೊಳ್ಳೆ, ಹಡಗು ಉದ್ಯಮ ಹಾಗೂ ವಿನಾಶ, ಭಾರತೀಯ ಉಕ್ಕಿನ ಕಳ್ಳತನ, ಕೈಗಾರಿಕಾ ಕ್ರಾಂತಿ ತಪ್ಪಿಸಿಕೊಂಡ ಭಾರತದಂತ ವಿಷಯಗಳನ್ನು ಕೃತಿ ಪ್ರಸ್ತಾಪಿಸಿದೆ.

ADVERTISEMENT

ಭಾರತೀಯ ದಂಡಸಂಹಿತೆಯಲ್ಲಿನ ವಸಾಹತುಶಾಹಿ ಪೂರ್ವಗ್ರಹಗಳು, ವಸಾಹತುಶಾಹಿ ನಂತರವೂ ಉಳಿದಿರುವ ಬ್ರಿಟಿಷ್ ಕಾನೂನುಗಳ ಕುರಿತೂ ಕೃತಿಯಲ್ಲಿ ವಿವರವಾಗಿ ದಾಖಲಿಸಲಾಗಿದೆ. ಪಾಶ್ಚಿಮಾತ್ಯ ಆಲೋಚನೆಗಳು ಇಲ್ಲಿನ ಜಾತಿ ಮತ್ತು ಶಿಕ್ಷಣ ವ್ಯವಸ್ಥೆ ಮೇಲೆ ಬೀರಿರುವ ಪರಿಣಾಮಗಳ ಕುರಿತು ಡಾ. ತರೂರ್ ಚರ್ಚಿಸಿದ್ದಾರೆ. 

ಇವುಗಳೊಂದಿಗೆ ಬ್ರಿಟಿಷರು ಭಾರತಕ್ಕೆ ರಾಜಕೀಯ ಒಗ್ಗಟ್ಟು ಕೊಟ್ಟರೇ? ಪ್ರಜಾಪ್ರಭುತ್ವ, ಮುದ್ರಣ ಮಾದ್ಯಮ, ಸಂಸದೀಯ ವ್ಯವಸ್ಥೆ ಮತ್ತು ಕಾನೂನುಬದ್ಧ ಆಡಳಿತ ನೀಡಿದರೇ? ಅವರ ಬ್ರಿಟಿಷರ ಒಡೆದು ಆಳುವ ನೀತಿ ಹೇಗಿತ್ತು? ಅಂತಿಮವಾಗಿ ಸಾಮ್ರಾಜ್ಯಕ್ಕೆ ಉಳಿದದ್ದು ಏನು? ಎಂಬುದಕ್ಕೆ ಉತ್ತರ ಹುಡುಕುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ.

ಅನುವಾದಕರೇ ಹೇಳುವಂತೆ ಮೂಲ ಕೃತಿಯಲ್ಲಿ ಡಾ. ಶಶಿ ತರೂರ್ ಅವರ ಭಾಷಾ ಪಾಂಡಿತ್ಯವನ್ನು ಅರ್ಥಕೋಶದ ನೆರವಿನಿಂದಲೇ ಅರ್ಥ ಮಾಡಿಕೊಳ್ಳಬೇಕು. ದೀರ್ಘವಾದ ಬರವಣಿಗೆ ಹಾಗೂ ಧಾರಾಳವಾಗಿದ್ದ ಕಠಿಣ ಶಬ್ದ ಸಂಪತ್ತುಗಳನ್ನು ಎಸ್.ಬಿ.ರಂಗನಾಥ್ ಅವರು ಸರಳಗೊಳಿಸುವ ಪ್ರಯತ್ನವನ್ನು ‘ಕಗ್ಗತ್ತಲ ಕಾಲ’ದಲ್ಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.