ADVERTISEMENT

ಮೊದಲ ಓದು: ಸಣ್ಣ ಕತೆಗಳ ದೊಡ್ಡ ಸುಳಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 23:30 IST
Last Updated 13 ಡಿಸೆಂಬರ್ 2025, 23:30 IST
   

ಕತೆಗಳೇ ಕತೆಗಳನ್ನು ಹುಟ್ಟುಹಾಕುವಂತಿದ್ದರೆ? ಕತೆಯ ಹೊಟ್ಟೆಯೊಳಗೊಂದು ಕತೆ ಇದ್ದರೆ? ಕತೆಯೊಂದು ಮುಗಿದ ಕೂಡಲೇ.. ಮುಂದಿನ ಕತೆ ಏನಾಗಿರಬಹುದು ಎಂದು ಹತ್ತಾರು ಕತೆಗಳು ಹೊಳೆಯುತ್ತಿದ್ದರೆ... ಸಣ್ಣ ಕತೆಗಳೆಲ್ಲವೂ ಅಂಥವೇ. ಅವುಗಳ ಹಿಂದಿನ ಮತ್ತು ಮುಂದಿನ ಕತೆಗಳೇ ಸುದೀರ್ಘವಾಗಿರುತ್ತವೆ. ಇಂಥ ಹಲವಾರು ಕತೆಗಳ ಸಂಕಲನವೇ ಅದೊಂದು ದಿನ.

ಕೆಲವು ಎಲ್ಲಿಯೋ ಓದಿರುವ ಇಂಗ್ಲಿಷ್‌ ಕತೆಗಳನ್ನೂ, ಸಾಮಾಜಿಕ ಜಾಲತಾಣಗಳಲ್ಲಿ ಒಂದೆರಡು ಸಾಲುಗಳನ್ನು ಓದಿರುವೆವೋ ಎಂಬ ಸಂಶಯ ಮೂಡಿಸಬಹುದು. ಆದರೆ ಇವೆಲ್ಲವೂ ಓದಿಸಿಕೊಳ್ಳುತ್ತಲೇ ಮತ್ತೆ ಮತ್ತೆ ತಮ್ಮೊಳಗೆ ಕಳಿಯುವಂತೆ ಮಾಡುತ್ತವೆ. 

ಡಿಜಿಟಲ್‌ ಯುಗದಲ್ಲಿ ಸಂಬಂಧಗಳು, ಬಾಂಧವ್ಯಗಳು ತಮ್ಮ ಆರ್ದ್ರ ಗುಣ ಕಳೆದುಕೊಳ್ಳುತ್ತಿವೆ. ನಾವು ಮಾತುಗಳನ್ನು ಕೇಳುವುದೇ ಪ್ರತಿಕ್ರಿಯಿಸಲು ಎಂಬಂತೆ ಆಗಿರುವ ಈ ದಿನಗಳಲ್ಲಿ ಕತೆ ಕೇಳುವ, ಮಾತಿಗ ಕಿವಿಯಾಗುವ ವ್ಯವಧಾನವನ್ನೇ ಕಳೆದುಕೊಂಡಿದ್ದೇವೆ. ಮನುಷ್ಯ ಸಹಜವಾಗಿರುವ ಕುತೂಹಲ ಮತ್ತು ಕಾಳಜಿ ಎರಡರಿಂದ ದೂರ ಆಗುತ್ತಿರುವ ಬಗೆಯನ್ನು ಹಲವಾರು ಕತೆಗಳು ಧ್ವನಿಸುತ್ತವೆ. ಯಾಂತ್ರಿಕವಾದ ಈ ಬದುಕಿನಲ್ಲಿ ಹಲವಾರು ಮಾತುಗಳು ಹೇಳದೆಯೇ ಉಳಿಯುತ್ತವೆ. ಕೆಲವೊಮ್ಮೆ ಕಾಲ ನಿಷ್ಕರುಣಿಯಾಗಿಯೂ ನಿರ್ದಯಿಯಾಗಿಯೂ ಕಾಣುತ್ತದೆ. ಅಂಥ ಸಂದರ್ಭಗಳನ್ನೆಲ್ಲ ಇಲ್ಲಿ ಕತೆಯಾಗಿ ಹೆಣೆಯಲಾಗಿದೆ. ಕೆಲವು ಅತಿ ವಾಸ್ತವಕ್ಕೆ ಸಮೀಪದವು. ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಘಟಿಸಿದಂಥವು ಎನಿಸುತ್ತವೆ. ಇನ್ನೂ ಕೆಲವು ಕತೆಗಳಿಗೆ ನಾವೇ ಸಾಕ್ಷಿಯಾದಂತೆಯೂ ಭಾಸವಾಗುತ್ತದೆ. ಒಂದಷ್ಟು ಕತೆಗಳು ಕಾಲ್ಪನಿಕವೆಂದೆನಿಸುತ್ತವೆ. ಆದರೆ ಬಹುತೇಕ ಕತೆಗಳು ನಮ್ಮ ನಿಮ್ಮ ನಡುವೆಯೇ ಘಟಿಸಿದ ಸಂಗತಿಗಳಂತೆಯೂ ಕಾಡುತ್ತವೆ. ವಿರಾಮದ ಓದಿಗೆ, ಪ್ರಯಾಣದ ಓದುಗರ ಸ್ನೇಹಿ ಈ ಪುಸ್ತಕ.

ADVERTISEMENT

ಅದೊಂದು ದಿನ

  • ಲೇ: ಎ.ಎನ್‌. ಪ್ರಸನ್ನ

  • ಪ್ರ: ಅಂಕಿತ ಪುಸ್ತಕ

  • ಸಂ: 90191 90502

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.