ಛಂದ ಪುಸ್ತಕ ಬಹುಮಾನ ಪಡೆದ ಕೃತಿ ಇದು. ಮಾಹಿತಿ ತಂತ್ರಜ್ಞಾನದ ಕೋಡ್ ಮತ್ತು ಕೋಡಗನೊಂದಿಗೆ ಪನ್ ಮಾಡುತ್ತಲೇ ಆ ಲೋಕದ ಕೋಡಗನ ಕುಣಿತವನ್ನೇ ಈ ಎಲ್ಲ ಕಥೆಗಳೂ ಬಿಚ್ಚಿಡುತ್ತವೆ.
ಸಮಕಾಲೀನ ಬದುಕನ್ನು ಹಿಡಿದಿಡುತ್ತಲೇ ಜೆನ್‌ಜೀಯೊಂದಿಗೆ ಹೆಣಗುತ್ತಿರುವ ನೂತನ ಪೋಷಕರ ತೊಳಲಾಟಗಳನ್ನೂ, ಜೆನ್ ಎಕ್ಸ್‌ಗಳ ಗೊಂದಲಗಳನ್ನೂ, ಜೆನ್ ಅಲ್ಪಾ, ಬೀಟಾಗಳೊಂದಿಗೆ ಬರುತ್ತಿರುವ ಜನರೇಷನ್ ವ್ಯತ್ಯಾಸಗಳೆಲ್ಲವನ್ನೂ ಇಲ್ಲಿಯ ಕಥೆಗಳಲ್ಲಿ ಹೆಣೆಯಲಾಗಿದೆ. ಓದುಗರ ಮನೆಯಲ್ಲಿ, ಅವರ ಸುತ್ತಲೂ ಇರುವ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಲೋಕದಲ್ಲಿ ಹೆಣಗುತ್ತಿರುವ ಯುವಜನಾಂಗಕ್ಕೆ ಸೂಕ್ತ ಪುಸ್ತಕ. ಅವರ ಒತ್ತಡ, ಅವರೊಳಗಿನ ಆತಂಕ, ಬಾಹ್ಯಜಗತ್ತಿಗೆ ಕಾಣುವ ಗಳಿಕೆ, ಆಂತರ್ಯದಲ್ಲಿ ಅನುಭವಿಸುವ ಖಾಲಿತನ, ಜೋರು ಸಂಗೀತಕ್ಕೆ ಕುಣಿಯುವ ಉತ್ಸಾಹವಿದ್ದರೂ, ಒಳಗಿನ ನೀರವ ಮೌನ ಹೊರಹಾಕುವ ಬಿಡುಗಡೆ ಈ ಅಕ್ಷರಲೋಕದಲ್ಲಿ ಕಾಣಸಿಗುತ್ತದೆ.
ಒಂದು ತಲೆಮಾರು, ಹಳೆಯ ಮತ್ತು ಹೊಸ ತಲೆಮಾರಿನೊಂದಿಗೆ ತನ್ನ ಔದ್ಯೋಗಿಕ ಪ್ರಪಂಚದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಅವುಗಳನ್ನು ಹೊರಹಾಕುವ ಮಾರ್ಗವಾಗಿ ಕಥೆಗಳನ್ನು ಹೆಣೆಯುತ್ತ ಲೇಖಕರು ತಮ್ಮ ಲೋಕದವರಿಗೂ, ಹೊರಗಿನವರಿಗೂ ಒಳಗಿನ ತಲ್ಲಣಗಳನ್ನೂ ಹೊಸಹೊಳಹುಗಳನ್ನೂ ದಾಟಿಸುತ್ತಾರೆ. ಕಬ್ಬಿಗ ಎಐ, ನರೇಗಲ್ ಬಳಿಯ ಕೋಡಿಕೊಪ್ಪದ ಹುಚ್ಚೀರಜ್ಜರ ಮಾತು ಯಾವುದು ಹೌದು, ಅದು ಅಲ್ಲ; ಯಾವುದು ಅಲ್ಲ, ಅದು ಹೌದು ಇಡೀ ಬದುಕಿಗೆ ಅನ್ವಯವಾಗುವಂಥದ್ದು. ಅದು ನಮ್ಮ ಆಧುನಿಕ ಬದುಕಿನಲ್ಲಿ, ಒಳಧ್ವನಿ ಎಂಬುದು ಹೊರ ಗದ್ದಲದೊಳಗೆ ಕಳೆದುಹೋದ ಬಗೆಯನ್ನೇ ಎತ್ತಿ ಹಿಡಿಯುತ್ತದೆ. ಪುಸ್ತಕ ಓದಿ ಮುಗಿಸಿದ ನಂತರ, ಬದುಕಿಗೆ ಕೊನೆಗೂ ಬೇಕಿರುವುದು ಒಂದಷ್ಟು ಪ್ರೀತಿ ಮತ್ತು ನೆಮ್ಮದಿ, ಸಾಕಷ್ಟು ಸಾಕು ಎಂದೆನಿಸಿ ನಿಟ್ಟುಸಿರು ಬಿಟ್ಟಾಗಲೇ ಬದುಕಿನಲ್ಲಿ ಮತ್ತೇನೂ ಕೊರತೆ ಇದೆ ಎಂದೆನಿಸುತ್ತದೆ.
ಹ್ಯಾಷ್‌ಟ್ಯಾಗ್
ಲೇ: ಗುರುರಾಜ ಕುಲಕರ್ಣಿ
ಪ್ರ: ಛಂದ ಪ್ರಕಾಶನ
ಸಂ: 9844422782
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.