ADVERTISEMENT

ಪುಸ್ತಕ ವಿಮರ್ಶೆ | ಲೌಕಿಕದ ನೋಟ, ಅಧ್ಯಾತ್ಮದ ಆಯಾಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:30 IST
Last Updated 26 ನವೆಂಬರ್ 2022, 19:30 IST
ತೋಚಿದ್ದು ಗೀಚಿದ್ದು ಕೃತಿಯ ಮುಖಪುಟ
ತೋಚಿದ್ದು ಗೀಚಿದ್ದು ಕೃತಿಯ ಮುಖಪುಟ   

ಕೃತಿ: ತೋಚಿದ್ದು ಗೀಚಿದ್ದು (ಸಮಕಾಲೀನ ಚುಟುಕು ಕವನಗಳು)
ಲೇ: ಸುರೇಶ ಎಸ್‌.
ಪ್ರ: ಕನ್ನಡ ಪ್ರಕಾಶನ ಗಜೇಂದ್ರಗಡ
ಪುಟಗಳು: 200
ಬೆಲೆ: ₹140
ಸಂ: 080 23310081

ತೋಚಿದ್ದು ಗೀಚಿದ್ದು... ನೆನೆದಿದ್ದು ಮರೆತಿದ್ದು... ಅದೇ ಬರವಣಿಗೆ. ಹೀಗೆ ಚುಟುಕು ಕವನ ಸಂಕಲನದ ಒಟ್ಟಾರೆ ಆಶಯ ಮತ್ತು ವಸ್ತುವನ್ನು ಅಂಥದ್ದೇ ಸಾಲಿನಲ್ಲಿ ಹೇಳಿದ್ದಾರೆ ಸುರೇಶ್‌ ಎಸ್‌.ಹೌದು, ಬಹುತೇಕ ಸಾಲುಗಳು ತೋಚಿದಂತೇ ಗೀಚಿದ ಹಾಗೆಯೇ ಇವೆ. ಅನೇಕವು ಅರ್ಥವತ್ತಾಗಿಯೂ ಇವೆ. ಲೌಕಿಕದ ನೋಟಗಳು, ಸಾಂಸಾರಿಕ ವಸ್ತುಗಳು, ಅಧ್ಯಾತ್ಮದ ಆಯಾಮಗಳು, ಗಾಢ ಚಿಂತನೆಗಳು ಪುಟ್ಟ ಸಾಲುಗಳಲ್ಲಿ ಹರಳುಗಟ್ಟಿವೆ.‘ಮಡದಿ ಮೂದಲಿಸಿದಾಗ ಮಕ್ಕಳು ಸಿಡುಕಿದಾಗ ಮಾತಿಗೆ ಬೆಲೆ ಇಲ್ಲವಾದಾಗ ಶ್ವಾನವೂ ಮೂಸದಿದ್ದಾಗ ಬಾಳಿಗೆ ಸಿದ್ಧ ಪಥ – ವಾನಪ್ರಸ್ಥ...’, ಪಾಣಿಗ್ರಹಣ– ಪ್ರಪಂಚದ ಅತ್ಯಂತ ಪ್ರಬಲ ವಶೀಕರಣ, ವೈಕುಂಠ ಸಮಾರಾಧನೆ ಎಂದರೆ ‘ವೈಕುಂಠದ ಪಾಯಸ ನಾಲಗೆಗೆ ಬಿದ್ದ ಮಾರನೆಯ ದಿನ ಆಸ್ತಿ ಪತ್ರಗಳ ಹುಡುಕಾಟ...’, ಸತ್ತಾಗ ಒಂಟಿ ದೀಪಕ್ಕೆ ಎಳ್ಳೆಣ್ಣೆ... ಹೇಗೆ ಬದುಕಿದರೂ ಕೊನೆಗೆ ಮಣ್ಣೇ... ಹೀಗೆ ಲೌಕಿಕ– ಪಾರಮಾರ್ಥಿಕ ಚಿಂತನೆಗಳು, ಅಲ್ಲಲ್ಲಿ ತುಂಟ ಪಂಚ್‌ಗಳು ಓದಿಸಿಕೊಂಡು ಹೋಗುತ್ತವೆ.

‘ಅತ್ತೆ ಕಾಟ ಕೊಡುತ್ತಾಳೆ ಎಂದು ಯಾಕೆ ದೂರುತಿ? ಮುಂದೆ ಅತ್ತೆಯಾಗುವುದಕ್ಕೆ ಇದೇ ಅಲ್ಲವೇ ತರಬೇತಿ’ ಎಂದೂ ಇಲ್ಲಿನ ಚುಟುಕು ಕೇಳುತ್ತದೆ. ‘ಸಮಯದ ಪರಿವೆ ಇಲ್ಲದ ಸಮಯದ ಗೊಂಬೆಗಳಾದೆವು’ ಎನ್ನುವ ಪದ್ಯ ಇಂದಿನ ವಾಸ್ತವವನ್ನು ಢಾಳಾಗಿ ಕಟ್ಟಿಕೊಡುತ್ತದೆ. ಪುಂಡಲೀಕ ಕಲ್ಲಿಗನೂರು ಅವರ ರೇಖಾಚಿತ್ರಗಳೂ ಕವನಗಳ ಆಶಯವನ್ನು ದೃಶ್ಯೀಕರಿಸಿವೆ. ದಾನದಲ್ಲಿ ಶ್ರೇಷ್ಠ ದಾನ ಸಮಾಧಾನ ಎನ್ನುತ್ತಾ ಕವಿ, ಪದ್ಯಪಾನವೇ ಸಮಾಜಕ್ಕೆ ಶ್ರೇಯಸ್ಕರ ಎಂದು ಬಹುತೇಕ ಕವಿತೆಗಳಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.