ADVERTISEMENT

ಪುಸ್ತಕ ವಿಮರ್ಶೆ: ಕಪ್ಪುಮಣ್ಣಿನಲ್ಲಿ ಅರಳಿದ ರೈತ ಕಥೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:30 IST
Last Updated 27 ನವೆಂಬರ್ 2021, 19:30 IST
ಹಸಿರು ಟಾವೆಲ್‌
ಹಸಿರು ಟಾವೆಲ್‌   

ಕಸುವುಳ್ಳ ಕಪ್ಪುಮಣ್ಣಿನ ಹೊಲದಲ್ಲಿ ದುಡಿದುಡಿದು ಅಲ್ಲಿನ ಮಣ್ಣಿನಲ್ಲಿಯೇ ಸಾವಯವವಾಗಿ ಬೆರೆತು ಹೋಗಬಹುದಾಗಿದ್ದ ರೈತನೊಬ್ಬನ ಬದುಕಿನ ಹಾಡು ಈ ‘ಹಸಿರು ಟಾವೆಲ್‌’. ಸೂಡಿ ಗ್ರಾಮದ ಕೂಡ್ಲೆಪ್ಪ ಗುಡಿಮನಿ ಎಂಬ ಕೃಷಿಋಷಿಯ ಜೀವನಗಾಥೆ ಮೂಲಕ ಬಯಲುಸೀಮೆಯ ಜನಬದುಕಿನ ಕಥನವನ್ನೂ ಕಟ್ಟಿಕೊಟ್ಟಿದ್ದಾರೆ ಕಥೆಗಾರ ಟಿ.ಎಸ್‌.ಗೊರವರ. ಕಾಡ ಕುಸುಮದಂತೆ ಅರಳಿ, ಸುಗಂಧ ಬೀರಿ ಅಲ್ಲಿಯೇ ಕಳೆದುಹೋಗಬಹುದಾಗಿದ್ದ ಕಥೆಯನ್ನು ಹೆಕ್ಕಿತಂದು, ಓದುಗರು ಅದರ ಪರಿಮಳವನ್ನು ಆಸ್ವಾದಿಸುವಂತೆ ಮಾಡಿರುವುದು ಈ ಕೃತಿಯ ಹೆಗ್ಗಳಿಕೆ.

ಬಯಲುಸೀಮೆಯ ರೈತರದು ಅಲೆಗಳ ಅಬ್ಬರವಿಲ್ಲದೆ ಮಂದ್ರವಾಗಿ ಹರಿಯುವ ಹೊನಲಿನಂತಹ ಜೀವನ. ಮೇಟಿ ವಿದ್ಯೆಯೇ ಅವರ ಜೀವಾಳ. ಜಗಕೆಲ್ಲ ತಾವು ಅನ್ನದಾತರು ಎನ್ನುವ ಅಹಮಿಕೆ ಅಲ್ಲಿಲ್ಲ. ಎಲ್ಲರೊಳಗೊಂದಾಗಿ ಬದುಕು ಸಾಗಿಸುವ ವಿವೇಕ ತಾನೇ ತಾನಾಗಿ ಇಲ್ಲಿನ ರೈತರ ರಕ್ತದಲ್ಲಿ ಹರಿಯುತ್ತದೆ. ಅಂತಹ ರೈತರ ಪ್ರತಿನಿಧಿಯಾಗಿ ಕೂಡ್ಲೆಪ್ಪ ಅವರ ಕಥೆ ನಮ್ಮ ಮುಂದೆ ಬಿಚ್ಚಿಕೊಳ್ಳುತ್ತದೆ. ಕಾವ್ಯಾತ್ಮಕ ಭಾಷೆಯಿಂದ ಕಥೆ ಸೀದಾ ಎದೆಯೊಳಗೆ ಇಳಿಯುತ್ತದೆ.

ಇದು ಕೇವಲ ಕೂಡ್ಲೆಪ್ಪ ಅವರ ವ್ಯಕ್ತಿಕಥೆಯಾಗಿರದೆ, ಆ ಭಾಗದ ರೈತರ ಹೋರಾಟ ಕಥನವೂ ಆಗಿದೆ. ಬಯಲುಸೀಮೆಯ ದುಡಿಮೆ, ಪ್ರೀತಿ, ಜಗಳ, ಬಾಂಧವ್ಯ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ. ಸಾರ್ವಜನಿಕ ಜೀವನಕ್ಕೆ ಕಾಲಿಡಲು ಕೂಡ್ಲೆಪ್ಪ ತೆಗೆದುಕೊಂಡ ಪ್ರತಿಜ್ಞೆ, ನರಗುಂದದ ರೈತ ಬಂಡಾಯ, ಲಂಕೇಶ್‌ ಪತ್ರಿಕೆ ಪ್ರಭಾವ, ಇದರಿಂದ ಅಲ್ಲಲ್ಲಿ ಹುಟ್ಟಿಕೊಂಡ ರೈತ ಸಂಘಗಳ ಪ್ರಾಬಲ್ಯ, ಸರ್ಕಾರಿ ಕಚೇರಿಗಳಲ್ಲಿ ಲಂಚಾವತಾರದ ಕುಣಿತ... ಹೀಗೆ ವಿವಿಧ ಅಧ್ಯಾಯಗಳಲ್ಲಿ ಕಥನ ಸಾಗುತ್ತದೆ. ಕೃತಿಯ ಮುಖಪುಟದಲ್ಲಿ ರೇಖೆಯಾಗಿ ಮೂಡಿಬಂದ ಕೂಡ್ಲೆಪ್ಪ ಹಸಿರು ಟಾವೆಲ್‌ ಹಾಕಿಕೊಂಡು ಕೊನೆಗೊಮ್ಮೆ ಇಡೀ ಕಥೆಯನ್ನು ಕಣ್ಣಲ್ಲೇ ಹರಿಬಿಡುತ್ತಾರೆ ಎನ್ನುವಂತೆ ಭಾಸವಾಗುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.