ಅಶೋಕ ಹಾಸ್ಯಗಾರರ ದಶಾವತಾರದ ದಶರೂಪಕ ಕೃತಿ, ಯಕ್ಷಗಾನದ ಶಾಸ್ತ್ರೀಯತೆಯನ್ನು ಭರತನ ನಾಟ್ಯಶಾಸ್ತ್ರದ ದಶರೂಪಕಗಳ ಆಧಾರದ ಮೇಲೆ ಆಳವಾಗಿ ವಿಶ್ಲೇಷಿಸುವ ಅಧ್ಯಯನಾತ್ಮಕ ಗ್ರಂಥವಾಗಿದೆ.
ಯಕ್ಷಗಾನದ ಪಾತ್ರಗಳು, ಪ್ರಸಂಗಗಳು, ಚೌಕಿಮನೆ, ಭಾಗವತ, ವಾದನ, ರಂಗಪ್ರವೇಶ ಮುಂತಾದ ಅಂಶಗಳನ್ನು ನಾಟ್ಯಶಾಸ್ತ್ರದ ನಿಯಮಗಳೊಂದಿಗೆ ಹೋಲಿಸಿ ಲೇಖಕರು ಸ್ಪಷ್ಟ ವಿಶ್ಲೇಷಣೆ ನೀಡಿದ್ದಾರೆ. ನಾಟ್ಯಶಾಸ್ತ್ರದ ಭಾಣ, ಪ್ರಹಸನ, ಡಿಮ, ವ್ಯಾಯೋಗ ಮೊದಲಾದ ರೂಪಕಗಳನ್ನು ಯಕ್ಷಗಾನದಲ್ಲಿನ ಪಾತ್ರಗಳು ಮತ್ತು ಪ್ರಸಂಗಗಳ ಮುಖಾಂತರ ವಿವರಣೆ ನೀಡಿದ್ದಾರೆ.
ಸೃಷ್ಟಿ, ಸ್ಥಿತಿ, ಲಯ ತತ್ತ್ವಗಳನ್ನು ಯಕ್ಷಗಾನ ಶೈಲಿಗೆ ಸಮರ್ಪಕವಾಗಿ ಅನ್ವಯಿಸಿದ್ದಾರೆ. ಭಾಗವತನೆಂಬ ಸೂತ್ರಧಾರನ ಪಾತ್ರ, ವೇಷಭೂಷಣ, ಆಹಾರ್ಯಾಭಿನಯ ಮುಂತಾದ ಅಂಶಗಳನ್ನು ಶಾಸ್ತ್ರೀದ ಬೆಳಕಿನಲ್ಲಿ ವಿವೇಚಿಸಿದ್ದಾರೆ. ದೇಶೀ ಮಾರ್ಗವನ್ನು ಅಳವಡಿಸಿಕೊಂಡು ಯಕ್ಷಗಾನಕ್ಕೂ ನಾಟ್ಯಶಾಸ್ತ್ರಕ್ಕೂ ಇರುವ ಸಂಬಂಧವನ್ನು ಸಾದರಪಡಿಸಿರುವ ಈ ಕೃತಿ, ಯಕ್ಷಗಾನವನ್ನು ಕೇವಲ ಜನಪದ ಕಲೆಯೆಂದು ನೋಡುವ ನಿಲುವಿಗೆ ಶಾಸ್ತ್ರೀಯ ಒಳನೋಟವನ್ನು ಒದಗಿಸುತ್ತದೆ.
ಈ ಗ್ರಂಥ, ಯಕ್ಷಗಾನ ಹಾಗೂ ಇತರ ನಾಟ್ಯಪದ್ದತಿಗಳ ಅಧ್ಯಯನದಲ್ಲಿ ತೊಡಗಿರುವವರಿಗೆ ಅಮೂಲ್ಯ ಮಾಹಿತಿ ನೀಡುತ್ತದೆ. ಕೃತಿಯು ಕೇವಲ ವಿಚಾರಗಳನ್ನು ಮಾತ್ರ ಪರಿಚಯಿಸುವುದಲ್ಲದೆ, ಅನೇಕ ಹೊಸ ಪ್ರಶ್ನೆಗಳನ್ನು ಎಬ್ಬಿಸಿ, ಅವುಗಳಿಗೆ ಉತ್ತರ ಹುಡುಕುವ ಮಾರ್ಗವನ್ನೂ ಸೂಚಿಸುತ್ತದೆ. ಈ ರೀತಿಯ ವಿಚಾರ ವಿಸ್ತಾರದ ಚಿಂತನೆಗಳ ಮೂಲಕ ಲೇಖಕರ ಈ ಪ್ರಯತ್ನವು ಖಂಡಿತವಾಗಿಯೂ ಸಾರ್ಥಕವಾಗಿದೆಯೆಂದು ಹೇಳಬಹುದು.
ದಶಾವತಾರದ ದಶರೂಪಕ
ಲೇ: ಅಶೋಕ ಹಾಸ್ಯಗಾರ
ಪ್ರ: ಯಾಜಿ ಪ್ರಕಾಶನ
ಸಂ: 9148739504
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.