ವಿದ್ಯಾಭ್ಯಾಸ, ಮದುವೆಯಾದ ನಂತರ ಆಸ್ಥೆಯಿಂದ ಹೊಸ ವಿದ್ಯೆ, ಆಟ ಅಥವಾ ಶಾರೀರಿಕ ವ್ಯಾಯಾಮವನ್ನು ಕಲಿತು ಅದನ್ನು ಅಷ್ಟೇ ನಿಷ್ಠೆಯಿಂದ ಮುಂದುವರಿಸಿಕೊಂಡು ಹೋಗುವವರು ವಿರಳ. ಹೀಗಿರುವಾಗ 45ರ ನಂತರದಲ್ಲಿ ಹತ್ತಾರು ಸಮರ ಕಲೆಗಳನ್ನು ಕಲಿಯುತ್ತಾ ಅದರ ಆಧಾರದ ಮೇಲೆ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕು ಎರಡನ್ನೂ ಉತ್ತಮಗೊಳಿಸಿದ ಜೋ ಹಯಮ್ಸ್ ಅವರ ಸಮರ ಕಲೆಗಳೊಂದಿಗಿನ ಬದುಕಿನ ಕೃತಿಯೇ ‘ಸಮರ ಕಲೆಗಳಲ್ಲಿ ಝೆನ್’.
ಜೋ ಹಯಮ್ಸ್ ಅವರ ಈ ಕೃತಿಯನ್ನು ಕನ್ನಡಕ್ಕೆ ಸಂಜೀವ ಕುಲಕರ್ಣಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಬ್ರೂಸ್ ಲೀ ಹಾಗೂ ಎಡ್ ಪಾರ್ಕರ್ ಅವರ ಬಳಿ ಸಮರಕಲೆ ಕಲಿಯುವ ಮೂಲಕ ದೈಹಿಕವಾಗಿ ಸದೃಢರಾದ ಹಯಮ್ಸ್ ಅವರು 2ನೇ ಮಹಾಯುದ್ಧದ ಸಂದರ್ಭದಲ್ಲಿ ಬರವಣಿಗೆ ಆರಂಭಿಸಿದರು. ಯುದ್ಧ ವರದಿಗಾರರಾಗಿದ್ದ ಅವರು, ನಂತರ ನ್ಯೂಯಾರ್ಕ್ ಟ್ರಿಬ್ಯೂನ್ ಪತ್ರಿಕೆಯ ಹಾಲಿವುಡ್ ವರದಿಗಾರರಾದರು. ಕೆಲವೇ ತಿಂಗಳುಗಳಲ್ಲಿ ಪ್ರಸಿದ್ಧ ಅಂಕಣಕಾರರಾಗಿ ಹೆಸರು ಮಾಡಿ ಮೂರು ಸಾವಿರಕ್ಕೂ ಅಧಿಕ ಲೇಖನಗಳನ್ನು ಬರೆದರು.
ಹೀಗೆ ಹಲವು ರೀತಿಯಲ್ಲಿ ತಮ್ಮನ್ನು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ, ಅದರಲ್ಲಿ ಯಶಸ್ಸು ಸಾಧಿಸಿದ ಹಯಮ್ಸ್ ಅವರು ಅಂತರಂಗವನ್ನು ಶೋಧಿಸಿಕೊಳ್ಳುತ್ತಲೇ, ಬಹಿರಂಗವನ್ನು ಹೇಗೆ ಸರಿಪಡಿಸಿಕೊಳ್ಳುತ್ತಾ ಸಾಗಿದರು ಎಂಬುದಕ್ಕೆ ಈ ಕೃತಿ ಉತ್ತರ ರೂಪವಾಗಿದೆ. ಒಂದು ಸಮರ ಕಲೆಯ ಮೂಲಕವೇ ನಮ್ಮನ್ನು ನಾವು ಹೇಗೆ ಅರಿಯಬಹುದು ಎಂಬುದು ಈ ಕೃತಿಯಲ್ಲಿದೆ.
ಗುರಿಯಲ್ಲ ಪಯಣ ಮುಖ್ಯ, ಅವಸರವನ್ನು ಗೆಲ್ಲಿರಿ, ನಿಮ್ಮ ಮಿತಿಗಳನ್ನು ಅರಿಯಿರಿ, ತೊಂದರೆ ಕೊಡಬೇಡಿ, ಪ್ರವಾಹದೊಂದಿಗೆ ಈಜಿ, ನಿಮ್ಮ ಮನಸ್ಸನ್ನು ಹರಿಯಲು ಬಿಡಿ, ಭಯದ ಗೆಳೆತನ ಬೆಳೆಸಿಕೊ ಎಂಬಿತ್ಯಾದಿ ಪ್ರಮುಖ ವಿಷಯಗಳನ್ನು ಲೇಖಕ ಜೋ ಹಯಮ್ಸ್ ಈ ಕೃತಿಯಲ್ಲಿ ಹೇಳಿದ್ದಾರೆ.
ಸಮರ ಕಲೆಗಳಲ್ಲಿ ಝೆನ್
ಲೇ: ಜೋ ಹಯಮ್ಸ್
ಅ: ಡಾ. ಸಂಜೀವ ಕುಲಕರ್ಣಿ
ಪ್ರ: ಸ್ವಯಂದೀಪ ಝೆನ್ ಕೇಂದ್ರ
ಸಂ: 94481 43100
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.