ADVERTISEMENT

ವಿಡಂಬನೆ | ಹೆಸರಿನಲ್ಲೇನಿದೆ ಅಲ್ಲವೇ...?

ಪ್ರಕಾಶ ಶೆಟ್ಟಿ
Published 22 ನವೆಂಬರ್ 2019, 20:00 IST
Last Updated 22 ನವೆಂಬರ್ 2019, 20:00 IST
vidambane
vidambane   

‘ಹೆಸರಿನಲ್ಲೇನಿದೆ?’ ಎಂದು ಜೂಲಿಯಟ್ ಬಾಯಿಯಿಂದ ಶೇಕ್ಸ್‌ಪಿಯರ್ ಅದ್ಯಾವತ್ತೋ ಹೇಳಿಸಿದ್ದಾನೆ. ಈ ಅಮೋಘ ಸಂಭಾಷಣೆಯನ್ನು ಅಷ್ಟು ಸುಲಭದಲ್ಲಿ ಮರೆಯುವುದು ಸಾಧ್ಯವೇ ಇಲ್ಲ. ಯಾಕೆಂದರೆ ಅದನ್ನು ನೆನಪಿಸುವುದಕ್ಕೆಂದೇ ಅನೇಕ ತಂದೆ–ತಾಯಂದಿರು ತಮ್ಮ ಮಕ್ಕಳಿಗೆ ಅಂತಹ ಹೆಸರು
ಗಳನ್ನಿಟ್ಟಿದ್ದಾರೆ! ಆದರೆ ಈಗ ಇಲ್ಲಿ ಜೂಲಿಯಟ್ ವಿಷಯ ಪ್ರಸ್ತಾಪವಾಗಿರುವುದಕ್ಕೆ ಕಾರಣ ಬೇರೆ ಇದೆ.

ನಿಧಾನಸೌಧದಲ್ಲಿರುವ ಪೂಜಾರಿ ಅವರು ಬಾರ್ ಮತ್ತು ವೈನ್ ಶಾಪ್‌ಗಳಿಗೆ ದೇವರ ಹೆಸರನ್ನಿಡುವ ಬಗ್ಗೆ ಈಚೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೊನ್ನೆ ಮೊನ್ನೆವರೆಗೂ ‘ಹೆಸರಿನಲ್ಲೇನಿದೆ?’ ಎಂದು ವೈನ್‌ ಶಾಪ್‌ಗಳ ಹೆಸರುಗಳನ್ಯಾರೂ ಗಣನೆಗೇ ತೆಗೆದುಕೊಂಡಿರಲಿಲ್ಲ. ಹಾಗಿರುವಾಗ, ಇದ್ದಕ್ಕಿದ್ದಂತೆ ಮುಜರಾಯಿ ಮಿನಿಸ್ಟ್ರು ಅದಕ್ಕೆ ನಿರ್ಬಂಧ ಹೇರುವುದು ಎಷ್ಟು ಸರಿ ಎಂದು ಲಕ್ಷ್ಮಿ, ವೆಂಕಟೇಶ್ವರ, ಚಾಮುಂಡೇಶ್ವರಿ, ದೇವಿ, ಶ್ರೀ ಕೃಷ್ಣ, ರಾಮಚಂದ್ರ ಮುಂತಾದ ಹೆಸರುಗಳುಳ್ಳ ಬಾರ್, ರೆಸ್ಟೊರೆಂಟ್, ವೈನ್ ಶಾಪ್ ಮಾಲೀಕರು ಗುಂಡು ಪೇ ಚರ್ಚಾ ನಡೆಸುತ್ತಿದ್ದಾರಂತೆ. ಲಕ್ಷ್ಮಿ ತಮ್ಮ ಹೆಂಡತಿಯ ಹೆಸರು, ವೆಂಕಟೇಶ್ವರ ತಮ್ಮ ತಂದೆಯ ಹೆಸರು, ರಾಮಚಂದ್ರ ಸ್ವಂತ ಹೆಸರು, ಸರ್ಕಾರ ಅವನ್ನು ದೇವರ ಹೆಸರುಗಳೆಂದು ಪರಿಗಣಿಸಬಾರದು ಎಂಬುದು ಕೆಲವು ಬಾರ್, ವೈನ್ ಶಾಪ್ ಮಾಲೀಕರ ಇಂಗಿತ.

ಮಿನಿಸ್ಟ್ರಿಗೆ ಯಾರಾದರೂ ಶೇಕ್ಸ್‌ಪಿಯರಪ್ಪನ ‘ವಾಟ್‌ ಈಸ್‌ ಇನ್ ಎ ನೇಮ್?’ ಬಗ್ಗೆ ಸ್ವಲ್ಪ ಹೇಳಿದರೆ ಸರಿಹೋಗುತ್ತಾರೋ ನೋಡಬಹುದು. ಆದರೆ ಸಾಹೇಬ್ರು ‘ಜೂಲಿಯಟ್ ಹಿಂದೂ ಅಲ್ಲ’ ಎಂದು ಬಾಯಿ ಮುಚ್ಚಿಸುವ ಸಾಧ್ಯತೆ ಇದೆ! ಒಟ್ಟಾರೆ ಹೆಸರಿಗೂ ಮದ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರಿಗೆ ಮನವರಿಕೆ ಮಾಡುವವರು ಬೇಕು.

ADVERTISEMENT

ಸೋಜಿಗವೆಂದರೆ, ದೇವರ ಹೆಸರನ್ನಿಟ್ಟುಕೊಂಡ ಅನೇಕ ವ್ಯಕ್ತಿಗಳು ಆ ಪವಿತ್ರ ಹೆಸರಿಗೆ ತದ್ವಿರುದ್ಧ
ವಾಗಿರುವುದನ್ನು ಅವರು ಕಂಡೇ ಇಲ್ಲವೇ? ರಾಮನ ಹೆಸರನ್ನು ಇಟ್ಟುಕೊಂಡಿದ್ದರೂ ಆಸಾಮಿ ದಿನಾ ರಮ್ ಕುಡಿಯಲೇಬೇಕು. ಆ ವಿಷ್ಣು ಮಹಾಶಯ ಅದು ಹೇಗೆ ಪೆಗ್ ಮೇಲೆ ಪೆಗ್ ವಿಸ್ಕಿ ಏರಿಸುತ್ತಾನಪ್ಪಾ! ಇನ್ನು ಗಣಪತಿ ಎಂಬ ಕುಡುಕ ರಾತ್ರಿ ಹೊತ್ತು ಎಲ್ಲಾದರೂ ಚರಂಡಿಯಲ್ಲೋ, ಬೀದಿಬದಿಯಲ್ಲೋ ಬಿದ್ದಿರುವುದನ್ನು ಕಾಣಬಹುದು! ಆ ವೆಂಕಟನಂತೂ ಬಾರ್ ಎಂದರೆ ಸಾಕ್ಷಾತ್ ತೀರ್ಥ ಸಿಗುವ ಪವಿತ್ರ ಸ್ಥಳ ಎಂದೇ ನಂಬಿದ್ದಾನೆ.

ಹಾಗೆಂದು ದೇವರ ಹೆಸರನ್ನು ಇಟ್ಟುಕೊಂಡವರೆಲ್ಲಾ ಮದ್ಯಪ್ರಿಯರಲ್ಲ ಬಿಡಿ. ಆದರೆ ಅಂತಹವರಲ್ಲಿ ಬಹಳಷ್ಟು ಮಂದಿ ತಮ್ಮ ಹೆಸರಿಗೆ ತೀರಾ ತದ್ವಿರುದ್ಧವಾಗಿರುವುದು ಮಾತ್ರ ದೇವರಾಣೆಗೂ ಸತ್ಯ.

ಮೂವರು ಹೆಂಡತಿಯರನ್ನು ಕಟ್ಟಿಕೊಂಡ ಆಂಜನೇಯ ಎಂಬ ಹೆಸರಿನವನನ್ನು ‘ಆಂಜನೇಯ’ ಎಂದು ಒಪ್ಪಿಕೊಳ್ಳುವುದಾದರೂ ಹೇಗೆ ಹೇಳಿ?! ಹಾಗೆಯೇ, ತಾನು ಮದುವೆಯೇ ಆಗೊಲ್ಲ ಎಂದು ಕುಳಿತಿರುವ ಇಲ್ಲೊಬ್ಬ ಬಾಲ್ಡಿ ಶ್ರೀ ಕೃಷ್ಣನ ಅವಸ್ಥೆ ಕೇಳಿದರೆ ನಗಬೇಕೋ ಅಳಬೇಕೋ ಎಂದು ಗೊತ್ತಾಗುತ್ತಿಲ್ಲ. ಸೀತಾ ಎಂಬ ಹೆಸರಿದೆ ಎಂದಮಾತ್ರಕ್ಕೆ ಆಕೆ ಲಕ್ಷ್ಮಣ ಎಂಬಾತನನ್ನು ಮದುವೆಯಾಗದೆ ಇರುವುದಕ್ಕಾಗುತ್ತಾ?

ರೌಡಿ ಶೀಟರ್‌ಗಳ ಹೆಸರುಗಳನ್ನೊಮ್ಮೆ ನೋಡಿದರೆ ಸಚಿವರಂತೂ ಬಹಳ ವ್ಯಸನಪಟ್ಟುಕೊಳ್ಳಬಹುದು. ಯಾಕೆಂದರೆ ಅಲ್ಲಿರುವವರು ಶಿವ, ಈಶ್ವರ, ಶಂಕರ, ಪರಮೇಶ್ವರ ಮುಂತಾದ ಒಳ್ಳೆಯ ಹೆಸರುಗಳುಳ್ಳ
ವರೇ! ಅಷ್ಟೇ ಅಲ್ಲ, ಅಂತಹ ಪವಿತ್ರ ಹೆಸರುಗಳ ಹಿಂದೆ ಸೈಕಲ್ ಚೈನ್, ಬಾಟ್ಲಿ, ಮಟಾಶ್, ಕಂತ್ರಿ, ಮಟನ್ ಬಿರಿಯಾನಿ ‘ಬಿರುದು’ಗಳೂ ಅಂಟಿಕೊಂಡಿರುತ್ತವೆ!

ದೇವರ ಹೆಸರಿರುವವರ ಚಿಂತಾಜನಕ ಸ್ಥಿತಿ ಇಲ್ಲಿಗೇ ಮುಗಿಯುವುದಿಲ್ಲ. ಹತ್ತನೆಯ ಕ್ರಾಸಿನ ನಮ್ಮ ಲಿಂಗಪ್ಪನ ಪುತ್ರ ಪರಮೇಶ್ವರನಿಗೆ ದಿನಾ ಸಿಕ್ಕ ಸಿಕ್ಕವರ ಕಾಲು ಹಿಡಿಯುವುದೇ ಕಾಯಕ! ಪಾಪ, ಆತನಿಗೆ ಶೂ ಅಂಗಡಿಯಲ್ಲಿ ಕೆಲಸ. ಅದು ಬಿಡಿ, ಸ್ಲಮ್ಮಿನಲ್ಲಿ ವಾಸ ಮಾಡುತ್ತಿರುವ ದೇವೇಂದ್ರನಿಗೆ ಒಂದು ವೇಳೆ ಇಂದಿರಾ ಕ್ಯಾಂಟೀನ್ ಇಲ್ಲದೇ ಹೋಗಿದ್ದರೆ ಹೆಂಡತಿ– ಮಕ್ಕಳನ್ನು ಸಾಕುವುದು ತುಂಬಾ ಕಷ್ಟವಾಗುತ್ತಿತ್ತು. ಲಕ್ಷ್ಮಿದೇವಿ ಎಂಬಾಕೆಯ ಕತೆ ಹೇಳದೆ ಇದ್ದರೇನೆ ಒಳ್ಳೆಯದು. ಯಾಕೆಂದರೆ ಆಕೆಯ ಪತಿರಾಯನ ಮೈ ತುಂಬಾ ಸಾಲ!

ಸರಸ್ವತಿಯನ್ನು ಸದ್ಯ ಎಲ್ಲರೂ ಸರಸೂ ಎಂದೇ ಕರೆಯುತ್ತಾರೆ. ಇಲ್ಲದೇ ಹೋಗಿದ್ದರೆ ಆ ಮಹಾತಾಯಿ ತಲೆತಗ್ಗಿಸಬೇಕಾಗಿತ್ತು. ಕಾರಣವೇನೆಂದರೆ, ಸರಸ್ವತಿ ಒಂದನೇ ಕ್ಲಾಸಿನ ಮೆಟ್ಟಿಲನ್ನೂ ಏರದವಳು! ಪಾಪ, ಆಕೆಯ ಇಬ್ಬರು ಮಕ್ಕಳಿಗೂ ಪಠ್ಯಪುಸ್ತಕಗಳು ಮಸ್ತಕಕ್ಕೆ ಹೋಗದೆ, ಶಾಲೆಗೆ ಹೋಗುವುದನ್ನು ಅರ್ಧದಲ್ಲೇ ನಿಲ್ಲಿಸಿದವರು.

ಸಾಕ್ಷಾತ್ ಭಗವಾನ್ ಎಂದು ಹೆಸರಿರುವವರೆಲ್ಲಾ ದೇವರ ಮೇಲೆ ನಂಬಿಕೆ ಇರುವವರು ಎಂದು ಸಾರಾಸಗಟಾಗಿ ಹೇಳುವ ಹಾಗಿಲ್ಲ. ಭಗವಾನ್ ಜತೆಗೆ ದಾಸ ಎಂದಿದ್ದರೂ ಆತ ಆಸ್ತಿಕನಾಗಿರಲೇಬೇಕೆಂದು ಲೋಕನಿಯಮವೇನಿಲ್ಲ. ಆದ್ದರಿಂದ ರಾಜಕೀಯ ಭಾಷೆಯಲ್ಲೇ ಹೇಳುವುದಾದರೆ, ದೇವರ ಹೆಸರಿಗೂ ಮತ್ತು ಅದನ್ನಿಟ್ಟುಕೊಂಡ ಬಾರ್- ವೈನ್ ಶಾಪ್‌ಗಳಿಗೂ ಸಂಬಂಧವನ್ನು ಕಲ್ಪಿಸುವ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.