
ವೇಣುವಾದನ ಕೇಳುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ವಿಶಿಷ್ಟ ಅನುಭೂತಿ, ನಾದದಲೆಯ ಸಂಚಲನ ಮೂಡಿಸುತ್ತದೆ. ಕೇಳಿದ ಕೀರ್ತನೆಯನ್ನೇ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ನಾದಧಾರೆ ಕಿವಿಯಲ್ಲಿ ಸದಾ ಗುಂಯ್‌ಗುಡುತ್ತದೆ. ಇದರ ಶಕ್ತಿಯೇ ಅಂಥದ್ದು. ಇಂಥ ವೇಣುವಾದನದಲ್ಲಿ ಸ್ವರಗಳ ಅಲೆಯನ್ನು ಹಿತವಾಗಿ ಹೊಮ್ಮಿಸುತ್ತಾ ಮೋಡಿ ಮಾಡುವ ಅದ್ಭುತ ಕಲಾವಿದ ಮೈಸೂರಿನ ಸಿ.ಎ. ಶ್ರೀಧರ್. ಇವರ ನುಡಿಸಾಣಿಕೆಯಲ್ಲಿ ವಿಶಿಷ್ಟ ಮಾಧುರ್ಯವಿದೆ. ಕೊಳಲಿನಲ್ಲಿ ಸ್ವರ, ತಾಳಗಳನ್ನು ಸಮತೋಲನ ಮಾಡುತ್ತಾ ಗಮಕಗಳನ್ನು ಪ್ರದರ್ಶಿಸುತ್ತಾ, ನಾದದ ಭಾವದಲೆಯನ್ನು ಶ್ರವಣಾನಂದಕರವಾಗಿ ಪ್ರಸ್ತುತಪಡಿಸುವ ಪರಿಯಂತೂ ಅನನ್ಯ.
ಹೌದು, ಕೃಷ್ಣವಾದ್ಯವೆಂದೂ ಹೆಸರಾದ ಬಿದಿರಿನಿಂದ ಮಾಡಿದ ಹಗುರ ವಾದ್ಯ ಕೊಳಲಿನಲ್ಲಿ ವಿದ್ವಾನ್ ಸಿ.ಎ. ಶ್ರೀಧರ ಅವರದು ಅನನ್ಯ ಸಾಧನೆ. ವೇಣುವಾದನದಲ್ಲಿ ಇವರು ಹೊಮ್ಮಿಸುವ ಗಮಕ ಕೇಳುಗರಿಗೆ ಆಪಾದಮಸ್ತಕ ಪುಳಕ ತರುತ್ತದೆ. ವಿದ್ವತ್‌ಪೂರ್ಣ ನುಡಿಸಾಣಿಕೆ, ಅದ್ಭುತ ಉಸಿರು ನಿಯಂತ್ರಣ ಸಾಮರ್ಥ್ಯ, ರಾಗಗಳ ನಿರೂಪಣೆಯಲ್ಲಿ ಬದ್ಧತೆ, ಮನೋಧರ್ಮದಲ್ಲಿ ಪರಿಪೂರ್ಣತೆ ಇವರ ವಾದನ ವೈಶಿಷ್ಟ್ಯ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಚಿಲ್ಕುಂದದವರಾದ ಶ್ರೀಧರ್ ವಿದ್ವಾನ್ ಸಿ.ಕೆ. ಅನಂತರಾಮಯ್ಯ ಹಾಗೂ ಸಿ.ಎಸ್. ಸತ್ಯಲಕ್ಷ್ಮೀ ಅವರ ಮಗ. ನಾಲ್ಕನೇ ವಯಸ್ಸಿನಲ್ಲೇ ಸಂಗೀತದ ಸ ರಿ ಗ ಮ ಪ ನಾದಕ್ಕೆ ಮಾರುಹೋದ ಶ್ರೀಧರ್ ಜೀವನದುದ್ದಕ್ಕೂ ಸಂಗೀತ ಉಪಾಸನೆ ಮಾಡುತ್ತಾ ಇದನ್ನೇ ತಪಸ್ಸಾಗಿ ಸ್ವೀಕರಿಸಿದವರು. ಸಂತ ತ್ಯಾಗರಾಜರ ನೇರ ಶಿಷ್ಯಪರಂಪರೆಗೆ ಸೇರಿದ ವೆಂಕಟನಾರಾಯಣ ಉಡುಪ ಅವರಿಂದ ಸಂಗೀತ ವಿದ್ಯೆ ಧಾರೆಯೆರೆಸಿಕೊಂಡವರು. ಮುಂದೆ ವಿದ್ವಾನ್ ಸಿ.ಟಿ. ಶ್ರೀನಿವಾಸಮೂರ್ತಿ, ಮುರಳೀಧರ್, ವಿದ್ವಾನ್ ವಿ. ದೇಶಿಕಾಚಾರ್ ಅವರಿಂದಲೂ ಸಂಗೀತವನ್ನು ಕಲಿತವರು.
ವಿದ್ವಾನ್ ಶ್ರೀಧರ್ ಬರೀ ನಾದೋಪಾಸಕ ಮಾತ್ರವಲ್ಲ, ಸಂಗೀತದ ಹಲವು ಆಯಾಮಗಳಲ್ಲಿ ಸತತ ಕೃಷಿ ಮಾಡಿದ ಅದ್ವಿತೀಯ ಸಾಧಕ. ವೇಣುವಾದಕ, ಸಂಗೀತ ಶಾಸ್ತ್ರಜ್ಞ, ಸಂಶೋಧಕ, ಬೋಧಕ, ಕಲಾ ಇತಿಹಾಸಕಾರ, ಗ್ರಂಥಕರ್ತ, ಗಾಯಕ, ವಾಗ್ಗೇಯಕಾರ.. ಇವಿಷ್ಟೂ ವಿಶೇಷಣಗಳನ್ನು ಒಳಗೊಂಡ ಬಹುಶ್ರುತ ವಿದ್ವಾಂಸ.
ಶ್ರೀಧರ್ ಅವರು ಸಂಗೀತದ ಅಕಡೆಮಿಕ್ ಸಾಧನೆಯಲ್ಲೂ ಮುಂಚೂಣಿಯಲ್ಲಿ ನಿಲ್ಲುವವರು. ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ಮೈಸೂರು ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದವರು, ಸದ್ಯ ಗಂಗೂಬಾಯಿ ಹಾನಗಲ್ ಸಂಗೀತ ವಿವಿಯಲ್ಲಿ ಗೌರವ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ.
ದೇಶ ವಿದೇಶಗಳಲ್ಲಿ ನೂರಾರು ಕೊಳಲು ಕಛೇರಿ ನೀಡಿ ಕೇಳುಗರಲ್ಲಿ ಪರಮಾನಂದದ ಸಿಂಚನ ಮೂಡಿಸಿರುವ ಶ್ರೀಧರ್, ವೇಣುವಾದನದಲ್ಲಿ ಮಧುರಾತಿಮಧುರ ಅನುಭೂತಿ ಸೃಷ್ಟಿಸುವವರು. ಮಾಧುರ್ಯ, ಶಾಸ್ತ್ರೀಯತೆ, ಗಮಕಬದ್ಧ ಗಾಯಕಿ, ತಂತ್ರಕಾರಿ ಶೈಲಿಗಳಿಂದ ಕೃಷ್ಣವಾದ್ಯದಲ್ಲಿ ಗಟ್ಟಿಕುಳ ಎನಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಪಿಟೀಲು ಚೌಡಯ್ಯ ಪ್ರಶಸ್ತಿ, ಆಕಾಶವಾಣಿ ಪುರಸ್ಕಾರ, ಚಂದನವಾಹಿನಿಯ ರಾಷ್ಟ್ರೀಯ ಪ್ರಶಸ್ತಿ, ಕೌಸ್ತುಭ ಪ್ರಶಸ್ತಿ, ಪ್ರಣವಶ್ರೀ ಪ್ರಶಸ್ತಿ, ಸುವರ್ಣ ಕರ್ನಾಟಕ ಹೊಯ್ಸಳ ಪ್ರಶಸ್ತಿ, ಶ್ರೇಷ್ಠ ಆಚಾರ್ಯ ಪ್ರಶಸ್ತಿ, ವೇಣು ಬ್ರಹ್ಮ ಪ್ರಶಸ್ತಿ, ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದ ಸಂಗೀತ ಜ್ಞಾನನಿಧಿ ಶ್ರೀಧರ ಅವರಿಗೆ ಈಗ ಕರ್ನಾಟಕ ಗಾನಕಲಾಭೂಷಣ ಬಿರುದು ಜೊತೆಗೆ ವಾದಿರಾಜ ಪ್ರಶಸ್ತಿ ಲಭಿಸಿದೆ.
‘ಶ್ರೀಧರ್ ಅವರು ಬಹುಶ್ರುತ ವಿದ್ವಾನ್. ನಾಡಿನ ಹೆಮ್ಮೆಯ ಹಾಗೂ ಪ್ರಬುದ್ಧ ಕೊಳಲು ವಾದಕ. ಪ್ರತಿವರ್ಷವೂ ಸಂಗೀತದಲ್ಲಿ ಇಂಥ ಅತ್ಯುನ್ನತ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ ಗಾನಕಲಾಭೂಷಣ ಬಿರುದು ನೀಡುತ್ತಾ ಬಂದಿದ್ದೇವೆ. ಇದೇ ರೀತಿ ಮತ್ತೂರು ಶ್ರೀನಿಧಿ ಭರವಸೆಯ ಪಿಟೀಲು ವಾದಕ. ಪಿಟೀಲಿನ ಎಳೆಎಳೆಯಲ್ಲೂ ಮಾಧುರ್ಯ ಸೂಸುವ ಈ ವಾದಕ ಪಕ್ಕವಾದ್ಯದಲ್ಲೂ ಪಳಗಿದವರೆ. ಇವರಿಗೆ ಗಾನಕಲಾಶ್ರೀ ಬಿರುದು ನೀಡುತ್ತೇವೆ. ರಾಜ್ಯಮಟ್ಟದ ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಹೆಮ್ಮೆಯ ಗರಿಮೂಡಿಸಿದ ಇಬ್ಬರೂ ಕಲಾವಿದರೂ ಅಭಿನಂದನೆಗೆ ಅರ್ಹರು’ ಎಂದು ಹೇಳುತ್ತಾರೆ ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷ ವಿದ್ವಾನ್ ಆರ್.ಕೆ. ಪದ್ಮನಾಭ ಅವರು.
ಭರವಸೆಯ ವಾದಕ ಮತ್ತೂರು ಶ್ರೀನಿಧಿ ಅವರ ಮನೆತನವೇ ಸಂಗೀತದ್ದು. ಚಿಕ್ಕ ಮಗುವಿರುವಾಗಲೇ ಸಂಗೀತಕ್ಕೆ ಕಿವಿಯಾಗಿಸುವುದು, ರಾಗ–ತಾಳಗಳನ್ನು ಗುರುತಿಸುವ ಗುಣ ಇವರಿಗೆ ರಕ್ತಗತವಾಗಿಯೇ ಬಂದಿದೆ. ತಂದೆ ರಾಮಮೂರ್ತಿ ಹಾಗೂ ತಾಯಿ ರಾಜಲಕ್ಷ್ಮಿ ಅವರು ಮಗನ ಆಸಕ್ತಿಗೆ ಸೂಕ್ತಕಾಲದಲ್ಲೇ ನೀರೆರೆದು ಪೋಷಿಸಿದ ಪರಿಣಾಮ ಶ್ರೀನಿಧಿ ಇಂದು ನಾದನಿಧಿಯಾಗಿ ರೂಪುಗೊಂಡಿದ್ದಾರೆ. ಪಿಟೀಲು ವಿದ್ವಾಂಸ ಆರ್.ಆರ್. ಕೇಶವಮೂರ್ತಿ ಅವರ ಬಳಿ ನಿರಂತರ ಹನ್ನೆರಡು ವರ್ಷ ಪಿಟೀಲಿನ ಎಳೆಎಳೆಯಲ್ಲೂ ಮಾಧುರ್ಯ ಮೂಡಿಸುವ ಚಾಕಚಕ್ಯತೆ ಗಳಿಸಿದ ಶ್ರೀನಿಧಿ ಮುಂದೆ ವಿದ್ವಾನ್ ಆರ್.ಎನ್. ತ್ಯಾಗರಾಜನ್ ಅವರ ಬಳಿ ಸಂಗೀತದ ಆಳವಾದ ಅಧ್ಯಯನ ನಡೆಸಿದರು.
ವಯೊಲಿನ್‌ನಲ್ಲಿ ಸೋಲೊ ಹಾಗೂ ಪಕ್ಕವಾದ್ಯ ಎರಡರಲ್ಲೂ ‘ಪಕ್ಕಾ’ ಆದ ಈ ವಿದ್ವಾಂಸರು ರಾಜ್ಯದಾದ್ಯಂತ ಅಲ್ಲದೆ ವಿದೇಶಗಳಲ್ಲೂ ನಾದದ ಕಂಪನ್ನು ಪಸರಿಸಿದವರು.
ನಾದಜ್ಯೋತಿ ಯುವ ಪುರಸ್ಕಾರ, ಅನನ್ಯ ಯುವ ಪುರಸ್ಕಾರ, ಗುರು ಕೇಶವ ಸುಬ್ಬಣ್ಣ ಸ್ಮಾರಕ ಪ್ರಶಸ್ತಿ, ಪಿಟೀಲು ವಾದನ ಚತುರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮತ್ತೂರು ಶ್ರೀನಿಧಿ ಅವರಿಗೆ ಇದೀಗ ಗಾನಕಲಾಶ್ರೀ ಬಿರುದು ಜೊತೆಗೆ ರಾಮಸುಧಾ ಪ್ರಶಸ್ತಿಯ ಗರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.