ಅರ್ಚನಾ ಮತ್ತು ಆರತಿ ಸಹೋದರಿಯರು
ಕರ್ನಾಟಕ ಸಂಗೀತದ ವಿದುಷಿ–ವಿದ್ವಾನರ ಸ್ವರಾಲಾಪ ಮತ್ತು ಲಯವಿನ್ಯಾಸದ ಸೊಗಸಿನ ಜೊತೆಯಲ್ಲಿ ವಿಳಂಬಿತ್–ಧೃತ್ ಗತ್‌ಗಳಲ್ಲಿ ಹಿಂದುಸ್ತಾನಿ ‘ಪಂಡಿತ’ರ ಖಯಾಲ್, ಚೀಜ್‌ಗಳ ಹೊನಲು. ವೀಣೆ, ಸಿತಾರ್, ಸರೋದ್‌ನ ಝೇಂಕಾರದಲ್ಲಿ ತೇಲಿ ಕೊಳಲು, ವಯಲಿನ್, ಮ್ಯಾಂಡೊಲಿನ್ ನಾದಸಂಗಮದಲ್ಲಿ ಮಿಂದವರಿಗೆ ಡ್ರಮ್‌ನ ಮಾಯಾಲೋಕ, ಫ್ಯೂಜನ್‌ನ ರಂಗು...
ಗಡಿನಾಡು ಕಾಸರಗೋಡಿನ ಪೆರಿಯದಲ್ಲಿರುವ ಬೇಕಲ್ ಗೋಕುಲಂ ಗೋಶಾಲೆ ಆವರಣದಲ್ಲಿ ಪ್ರತಿವರ್ಷ ದೀಪಾವಳಿ ವೇಳೆ ಸಂಗೀತದ ದೀವಳಿಗೆಗಳು ಬೆಳಗುವ ಪರಿ ಇದು.
ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೂಲದ ಕೆಮಿಕಲ್ ಬಯಾಲಜಿ ಪದವೀಧರೆ ನಾಗರತ್ನಾ ಮತ್ತು ಕಾಸರಗೋಡಿನ ವಿಷ್ಣುಪ್ರಸಾದ್ ಹೆಬ್ಬಾರ್ ದಂಪತಿ ಗೋವುಗಳ ಸೇವೆಗಾಗಿ 2017ರಲ್ಲಿ ನಿರ್ಮಿಸಿದ್ದು ಗೋಕುಲಂ ಗೋಶಾಲೆ. ನಂತರ ಅಲ್ಲಿ ಕಲಾಪೋಷಣೆ ಆರಂಭವಾಯಿತು. ಬೇಸಿಗೆಯಲ್ಲಿ ರಸಿಕರ ಹೃದಯ ತಂಪಾಗಿಸಲು ‘ವೈಶಾಖ ನಟನಂ’ ನೃತ್ಯೋತ್ಸವ ಆಯೋಜಿಸುವ ಇಲ್ಲಿ ಸಂಗೀತದ ಮುಖ್ಯ ಕಾರ್ಯಕ್ರಮ ದೀಪಾವಳಿ ಸಂಗೀತೋತ್ಸವ. ಶ್ರೀಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಪ್ರತಿವರ್ಷ ಸಣ್ಣ ಪ್ರಮಾಣದ ಕೆಲವು ಸಂಗೀತ ಕಛೇರಿಗಳೂ ನಡೆಯುತ್ತವೆ. ಈ ಎಲ್ಲ ಕಾರ್ಯಕ್ರಮಗಳಲ್ಲೂ ಎಳೆಯ ಕಲಾವಿದರಿಂದ ಹಿಡಿದು ಖ್ಯಾತನಾಮರ ‘ಸ್ವರ’ಸೇವೆ ನಡೆಯುತ್ತದೆ.
ಗಂಗಾ ಶಶಿಧರನ್
ಗಾಯಕರಾದ ಟಿ.ವಿ ಗೋಪಾಲಕೃಷ್ಣನ್, ಶ್ರೀನಿವಾಸನ್, ವಿದ್ಯಾಭೂಷಣ, ವಿನೀತ್ ಪುರವಂಕರ, ಆಶಾ ಪುರವಂಕರ, ಮೇಧಾ ವಿದ್ಯಾಭೂಷಣ, ಕಾಂಚನಾ ಸಹೋದರಿಯರು, ವೀಣಾ ವಾದಕರಾದ ಎ.ಅನಂತಪದ್ಮನಾಭನ್, ರಾಜೇಶ್ ವೈದ್ಯ, ಮುಡಿಕೊಂಡನ್ ರಮೇಶ್, ಪಾವನಾ ಆಚಾರ್, ಯುವ ವೇಣು ವಾದಕ ಜೆ.ಎ ಜಯಂತ್, ವಯಲಿನ್ ವಾದಕರಾದ ವಿಠ್ಠಲ ರಾಮಮೂರ್ತಿ, ಚಾರುಲತಾ ರಾಮಾನುಜಂ, ಗಂಗಾ ಶಶಿಧರನ್, ಡ್ರಮ್ಮರ್ ಶಿವಮಣಿ... ಹೀಗೆ ಇಲ್ಲಿ ನಾದತರಂಗ ಸೃಷ್ಟಿಸುವ ಕಲಾವಿದರ ಪಟ್ಟಿ ದೊಡ್ಡದಿದೆ.
‘ಗೋಕುಲಂ’ನಲ್ಲಿ ಕಾರ್ಯಕ್ರಮ ನೀಡುವ ಉಮೇದು ಅಧಿಕವಾಗುತ್ತಿದ್ದಂತೆ ಪ್ರತಿವರ್ಷ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ‘ಎಲ್ಲರಿಗೂ ಅವಕಾಶ ಒದಗಿಸುವ ಉದ್ದೇಶದಿಂದ ಕಛೇರಿಗಳ ಸಂಖ್ಯೆ, ದಿನಗಳ ಸಂಖ್ಯೆ ಮತ್ತು ಸಮಯವನ್ನು ವಿಸ್ತರಿಸುತ್ತಾ ಹೋಗುತ್ತಿದ್ದೇವೆ. ದೀಪಾವಳಿ ಸಂಗೀತೋತ್ಸವ ಐದು ವರ್ಷಗಳಿಂದ ನಡೆಯುತ್ತಿದೆ. ಆರಂಭದಲ್ಲಿ ಮೂರು ದಿನ, ನಂತರದ ವರ್ಷ ಆರುದಿನ, ಆಮೇಲೆ ಒಂಬತ್ತು ದಿನ ಇದ್ದ ಕಾರ್ಯಕ್ರಮವನ್ನು ಈ ಬಾರಿ ಹದಿಮೂರು ದಿನಗಳಿಗೆ ವಿಸ್ತರಿಸಬೇಕಾಗಿ ಬಂದಿದೆ. ಮೊದಮೊದಲು ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಕಛೇರಿ ನಡೆಸಲಾಗುತ್ತಿತ್ತು. ಈಗ ಬೆಳಿಗ್ಗೆ 9ರಿಂದ ರಾತ್ರಿ 9ರ ವರೆಗೆ ನಡೆಸಬೇಕಾಗಿ ಬಂದಿದೆ’ ಎಂದು ವಿಷ್ಣುಪ್ರಸಾದ್ ಹೆಬ್ಬಾರ್ ತಿಳಿಸಿದರು.
ಈ ಬಾರಿಯ ದೀಪಾವಳಿ ಸಂಗೀತೋತ್ಸವದ ಎರಡನೇ ದಿನ ಒಂಬತ್ತು ಕೃತಿಗಳ ಬಿಡುಗಡೆಯ ಸಂಭ್ರಮವಿತ್ತು. ವಿಷ್ಣುಪ್ರಸಾದ್ ಹೆಬ್ಬಾರ್ ಅವರು ಲಾವಂಗಿ, ಚಕ್ರವಾಕ, ಆನಂದಭೈರವಿ, ಧನ್ಯಾಸಿ, ಆರಭಿ, ಹಂಸಧ್ವನಿ, ವಸಂತ, ಶ್ರೀರಾಗಂ ಮತ್ತು ಹಂಸನಾದ ರಾಗಗಳಲ್ಲಿ ರಚಿಸಿದ ನವಗ್ರಹ ಕೀರ್ತನೆಗಳನ್ನು ವೆಳ್ಳಿಕೋತ್ ವಿಷ್ಣು ಭಟ್ ಹಾಡಿ ಕರ್ನಾಟಕ ಸಂಗೀತದ ಭಂಡಾರಕ್ಕೆ ಸೇರ್ಪಡೆಗೊಳಿಸಿದರು. ‘ಗೋಕುಲಂ’ನ ಸಂಗೀತ ಪರಿಸರದಲ್ಲೇ ಕಲೆತದ್ದರಿಂದ ಉಂಟಾದ ಪ್ರೇರಣೆಯೇ ಈ ಕೃತಿಗಳ ಉದಯಕ್ಕೆ ಕಾರಣ ಎನ್ನುತ್ತಾರೆ ವಿಷ್ಣುಪ್ರಸಾದ್. ಸಂಗೀತ ಕೇಳಿದ, ಸಂಗೀತಗಾರರ ಜೊತೆ ಒಡನಾಡಿದ ನಂತರ ತಮ್ಮ ವ್ಯಕ್ತಿತ್ವ ಸಂಗೀತಮಯವಾಗಿದೆ ಎನ್ನುವ ಅವರು 300ರಷ್ಟು ಕೃತಿಗಳನ್ನು ರಚಿಸಲು ಇಲ್ಲಿನ ವಾತಾವಣರ ಪೂರಕವಾಗಿ ನಿಂತಿದೆ ಎಂದು ಹೇಳುತ್ತಾರೆ.
‘ಇಲ್ಲಿಗೆ ಬರುವ ಕಲಾವಿದರಿಗೆ ವೇದಿಕೆಗಳ ಕೊರತೆ ಇಲ್ಲ. ದೇಶ–ವಿದೇಶದ ಪ್ರಮುಖ ಭಾಗಗಳಲ್ಲಿ ಕಾರ್ಯಕ್ರಮ ಪ್ರಸ್ತುತಪಡಿಸಿದವರೇ ಹೆಚ್ಚಿನವರು. ಆದರೆ ಗೋಕುಲಂನಲ್ಲಿ ಕಾರ್ಯಕ್ರಮ ನೀಡಬೇಕು ಎಂಬ ಉತ್ಕಟತೆ ಅನೇಕರಲ್ಲಿ ಇದೆ. ಒಂದು ಬಾರಿ ಬಂದವರು ಮತ್ತೆಮತ್ತೆ ಬರಲು ಬಯಸುತ್ತಾರೆ. ಖುಷಿಯಾಗಿ ವಾಪಸ್ ಹೋಗುತ್ತಾರೆ. ನಿರಂತರ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದರಿಂದ ಈ ಭಾಗದ ಜನರಲ್ಲೂ ಶಾಸ್ತ್ರೀಯ ಸಂಗೀತದ ಆಸಕ್ತಿ ಕುಡಿಯೊಡೆದಿದೆ. ಇಲ್ಲಿನ ಪರಂಪರಾ ವಿದ್ಯಾಪೀಠದಲ್ಲಿ ನಡೆಯುವ ಸಂಗೀತ ತರಬೇತಿಯಲ್ಲಿ ಸುತ್ತಮುತ್ತಲ 40ರಷ್ಟು ಮಂದಿ ಕಲಿಯುತ್ತಿದ್ದಾರೆ’ ಎನ್ನುತ್ತಾರೆ ವಿಷ್ಣುಪ್ರಸಾದ್ ಹೆಬ್ಬಾರ್.
ಪ್ರಯೋಗಗಳಿಗೂ ಗೋಕುಲಂನಲ್ಲಿ ಆದ್ಯತೆ ನೀಡಲಾಗುತ್ತದೆ. ಪಂಚವೀಣೆಯ ರಸಯಾತ್ರೆ, ಸವಾಲಿನ ತಾಳಕಲೆಯಾದ ಅವಧಾನ ಪಲ್ಲವಿ ಅಥವಾ ತಾಳಾವಧಾನ, ಸಹೋದರರು, ಸಹೋದರಿಯರ ದ್ವಂದ್ವ ಗಾಯನ, ವೈವಿಧ್ಯಮಯ ವಾದ್ಯಗಳ ಸಮ್ಮಿಲನ ಇತ್ಯಾದಿಗಳೊಂದಿಗೆ ಈ ಬಾರಿಯೂ ದೀಪಾವಳಿ ಸಂಗೀತೋತ್ಸವದಲ್ಲಿ ಸ್ವರಸೌರಭವಿತ್ತು. ಪಾವನಾ ಬಿ.ಆಚಾರ್, ಶಶಿಕಲಾ ಎನ್.ಭಟ್, ವಾಣಿ ಎಸ್. ಐತಾಳ್, ಕೌಸ್ತುಭ ರಾವ್ ಮತ್ತು ಪ್ರಿಯದರ್ಶಿನಿ ಭಟ್ ಅವರು ಮೊದಲ ದಿನ ಬೆಳಿಗ್ಗೆ ನಡೆಸಿಕೊಟ್ಟ ಪಂಚವೀಣೆ ಕಚೇರಿಯು ಈ ಬಾರಿಯ ಸಂಗೀತೋತ್ಸವದ ಆಶಯಕ್ಕೆ ರಾಗ–ಲಯದ ಭಾಷ್ಯ ಬರೆದಿತ್ತು.
ನಂತರ ಮೋಹಕ ಆಲಾಪಗಳ, ರಾಗಂ ತಾನಂ ಪಲ್ಲವಿಗಳ, ನೆರವಲ್‌ಗಳ, ಕಲ್ಪನಾ ಸ್ವರಗಳ, ಕೊನ್ನಕೋಲ್‌ಗಳ, ತಾನ್–ತರಾನಗಳ, ಜೋಡ್–ಜಾಲಾಗಳ ಅಮೃತವರ್ಷಕ್ಕೆ ಸಂಗೀತೋತ್ಸವ ಸಾಕ್ಷಿಯಾಯಿತು.
ಗೋಕುಲಂ ಗೋಶಾಲೆಯ ಸಂಗೀತ ಕಛೇರಿಗಳಲ್ಲಿ ಶ್ರೇಷ್ಠ ಕಲಾವಿದರಿಗೆ ಅವರ ಸರಿಸಮಾನರೇ ಸಾಥ್–ಸಹಕಾರ ನೀಡುವ ಪದ್ಧತಿ ಇಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದರಿಂದ ಹೆಸರಾಂತ ಕಲಾವಿದರ ಜೊತೆಯಲ್ಲಿ ಹೊಸಬರೂ ವೇದಿಕೆ ಹಂಚಿಕೊಳ್ಳುತ್ತಾರೆ. ಹೊಸಪೀಳಿಗೆಯವರಿಗೆ ದೊಡ್ಡ ಕಲಾವಿದರು ಸಹಕಾರ ನೀಡುವುದೂ ಇದೆ.
ದೀಪಾವಳಿ ಸಂಗೀತೋತ್ಸವದ ಮೂರನೇ ಆವೃತ್ತಿಯಿಂದ ವಸ್ತುವೈವಿಧ್ಯವನ್ನೂ ತರಲಾಗಿದೆ. 2023ರಲ್ಲಿ ಕೊಳಲಿಗೆ ಆದ್ಯತೆ ನೀಡಲಾಗಿತ್ತು. ಕಳೆದ ಬಾರಿ ಸಹೋದರರು–ಸಹೋದರಿಯರು ಮಿಂಚಿದ್ದರು. ಈ ಬಾರಿ ವೀಣೆಯ ವೈಭವವಿತ್ತು. ಮುಂದಿನ ಬಾರಿ ‘ಪರಂಪರೆ’ ಹೆಸರಿನಲ್ಲಿ ಒಂದೇ ಕುಟುಂಬದ ಕುಡಿಗಳನ್ನು ಕರೆಸುವ ಯೋಜನೆ ಇದೆ.
ಕೃಷಿ ಮತ್ತು ಕಲೆ ಇಲ್ಲದಿದ್ದರೆ ಮನುಷ್ಯನ ಅಸ್ತಿತ್ವ ಸಪ್ಪೆ. ಹೊಟ್ಟೆ ತುಂಬಬೇಕಾದರೆ ಕೃಷಿ ಬೇಕೇಬೇಕು. ಮನಸ್ಸು ಸಂತೃಪ್ತವಾಗಬೇಕಾದರೆ ಕಲೆ ಬೇಕು. ಹೊಟ್ಟೆ ಮತ್ತು ಮನಸ್ಸು ತುಂಬಿದರೆ ಜೀವನ ಸಾರ್ಥಕವಾಗುತ್ತದೆ. ಕೃಷಿ ಸಂಸ್ಕೃತಿಯ ಭಾಗವಾಗಿ ಇಲ್ಲಿ ಗೋವುಗಳನ್ನು ಸಾಕುತ್ತೇವೆ. ಕಲೆಯನ್ನೂ ಪೋಷಿಸುತ್ತೇವೆ. ಕಲಾವಿದರಿಗೆ ವೇದಿಕೆ ಮತ್ತು ಕಲೆಗೆ ಪ್ರೇರಣೆಯಾಗಲು ಸಾಧ್ಯವಾದದ್ದರಲ್ಲಿ ಖುಷಿ ಇದೆ.– ವಿಷ್ಣುಪ್ರಸಾದ್ ಹೆಬ್ಬಾರ್ ಗೋಕುಲಂ ಗೋಶಾಲೆಯ ಸ್ಥಾಪಕ
ಗೋಕುಲಂ ಗೋಶಾಲೆಯ ಕಾರ್ಯಕ್ರಮ ಸಂಘಟಕರು ಮಾಡುತ್ತಿರುವ ಸಂಗೀತ ಸೇವೆ ಅನುಕರಣೀಯ. ಜನರಿಗೆ ರಂಜನೆಯ ಜೊತೆಯಲ್ಲಿ ವಿಭಿನ್ನ ಅನುಭವ ಸಿಗುವ ಸ್ಥಳ ಅದು. ಅದು ಕಲಾವಿದರಿಗೆ ಅಂತರಾತ್ಮದತ್ತ ಇಣುಕಿ ನೋಡಲು ನೆರವಾಗುವ ಕಾರ್ಯಕ್ರಮ. ಅಂಥ ಜಾಗದಲ್ಲಿ ಪ್ರದರ್ಶನ ನೀಡುವುದು ಭಾಗ್ಯವೇ ಸರಿ.ಚಾರುಲತಾ ರಾಮಾನುಜಂ ಕಲಾವಿದೆ
ಗೋಕುಲಂ ಗೋಶಾಲೆಯಲ್ಲಿ ಕಾರ್ಯಕ್ರಮ ನೀಡುವುದು ಹೆಮ್ಮೆಯ ವಿಷಯ. ಸಂಘಟಕನಾಗಿರುವ ನನಗೆ ಗೋಕುಲಂ ಗೋಶಾಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ವಿಧಾನ ಅಚ್ಚರಿ ಹುಟ್ಟಿಸಿದೆ. ಕಲಾವಿದರನ್ನು ಕರೆದು ಸಂಗೀತ ಸೇವೆಗೆ ಅವಕಾಶ ಒದಗಿಸುವುದರ ನಡುವೆ ಕಲಾಸಕ್ತರಿಗೆ ವೈವಿಧ್ಯಮಯ ಸಂಗೀತದ ಆಸ್ವಾದನೆಗೆ ವೇದಿಕೆ ಒದಗಿಸುತ್ತಿರುವುದು ವಿಶೇಷ.ವಿಠ್ಠಲ ರಾಮಮೂರ್ತಿ ಕಲಾವಿದ
ಗೋಕುಲಂ ಗೋಶಾಲೆಯ ಸಂಗೀತ ಕಛೇರಿಗಳಲ್ಲಿ ಶ್ರೇಷ್ಠ ಕಲಾವಿದರಿಗೆ ಅವರ ಸರಿಸಮಾನರೇ ಸಾಥ್–ಸಹಕಾರ ನೀಡುವ ಪದ್ಧತಿ ಇಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವುದರಿಂದ ಹೆಸರಾಂತ ಕಲಾವಿದರ ಜೊತೆಯಲ್ಲಿ ಹೊಸಬರೂ ವೇದಿಕೆ ಹಂಚಿಕೊಳ್ಳುತ್ತಾರೆ. ಹೊಸಪೀಳಿಗೆಯವರಿಗೆ ದೊಡ್ಡ ಕಲಾವಿದರು ಸಹಕಾರ ನೀಡುವುದೂ ಇದೆ.
ದೀಪಾವಳಿ ಸಂಗೀತೋತ್ಸವದ ಮೂರನೇ ಆವೃತ್ತಿಯಿಂದ ವಸ್ತುವೈವಿಧ್ಯವನ್ನೂ ತರಲಾಗಿದೆ. 2023ರಲ್ಲಿ ಕೊಳಲಿಗೆ ಆದ್ಯತೆ ನೀಡಲಾಗಿತ್ತು. ಕಳೆದ ಬಾರಿ ಸಹೋದರರು–ಸಹೋದರಿಯರು ಮಿಂಚಿದ್ದರು. ಈ ಬಾರಿ ವೀಣೆಯ ವೈಭವವಿತ್ತು. ಮುಂದಿನ ಬಾರಿ ‘ಪರಂಪರೆ’ ಹೆಸರಿನಲ್ಲಿ ಒಂದೇ ಕುಟುಂಬದ ಕುಡಿಗಳನ್ನು ಕರೆಸುವ ಯೋಜನೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.