
ರಾಹುಲ್ ಶರ್ಮಾ
ಉತ್ತರ್–ದಕ್ಷಿಣ್ ಸಂಗೀತೋತ್ಸವ ಅಂಗವಾಗಿ ಕಾಶ್ಮೀರ ಮೂಲದ ಸಂತೂರ್ ವಾದಕ ರಾಹುಲ್ ಶರ್ಮಾ ಅವರ ಸೋಲೊ ಕಛೇರಿ ಬೆಂಗಳೂರಿನ ಚೌಡಯ್ಯ ಹಾಲ್‌ನಲ್ಲಿ ಡಿ. 21 ರಂದು ಸಂಜೆ 6 ಗಂಟೆಗೆ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಶರ್ಮಾ ಅವರು ‘ಭಾನುವಾರದ ಪುರವಣಿ’ಯೊಂದಿಗೆ ಸಂತೂರ್ ನುಡಿಸಾಣಿಕೆಯ ವೈಶಿಷ್ಟ್ಯವನ್ನು ಹಂಚಿಕೊಂಡಿದ್ದಾರೆ.
ನಿಮ್ಮ ತಂದೆ ಪಂ. ಶಿವಕುಮಾರ್ ಶರ್ಮಾ ಸಂತೂರ್‌ನಲ್ಲಿ ಚಮತ್ಕಾರ ತೋರಿಸುತ್ತಿದ್ದರು. ವಿಶ್ವದಾದ್ಯಂತ ಸಂತೂರ್ ನಾದ ಪಸರಿಸಿದ ನಿಮ್ಮ ತಂದೆಯವರ ನುಡಿಸಾಣಿಕೆ ನಿಮ್ಮ ಮೇಲೆ ಎಷ್ಟರಮಟ್ಟಿಗೆ ಪ್ರಭಾವಿಸಿದೆ?
ಭಾರತೀಯ ಸಂಗೀತದಲ್ಲಿ ಅದರಲ್ಲೂ ಸಂತೂರ್ ವಾದನದ ಪ್ರವರ್ತಕರೆಂದರೆ ಪಂ. ಶಿವಕುಮಾರ್ ಶರ್ಮಾ. ಅವರೇ ನನ್ನ ಗುರು. ಅವರ ಸಂಗೀತ ಮಾರ್ಗದರ್ಶನದೊಂದಿಗೆ ನಾನು ಸಂತೂರ್‌ನಲ್ಲಿ ಪ್ರಯೋಗಶೀಲ ಗುಣ ಬೆಳೆಸಿಕೊಂಡಿದ್ದೇನೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವಲ್ಲದೆ ಸಿಂಫೊನಿ, ಎಲೆಕ್ಟ್ರಾನಿಕಾ, ಜಾಸ್‌ನಂತಹ ಹೊಸ ಪ್ರಕಾರಗಳಲ್ಲಿಯೂ ಸಂತೂರ್ ಅನ್ನು ಪ್ರಯೋಗಿಸಿ ಹೊಸ ಕೇಳುಗರನ್ನು ಸೃಷ್ಟಿಸಿದ್ದೇನೆ. ತಂದೆಯವರ ಜೊತೆಗೆ ವಿಶ್ವದಾದ್ಯಂತ ಅನೇಕ ಸಂತೂರ್ ಕಛೇರಿಗಳಲ್ಲಿ ನುಡಿಸಿ ಅವರ ವಾದನ ಶೈಲಿಯನ್ನು ನನ್ನ ಶೈಲಿಯೊಂದಿಗೆ ಬೆಸೆದು ಹೊಸದೊಂದು ಸಂಗೀತ ಸೃಷ್ಟಿಯಾಗುವಂತೆ ಪ್ರಯತ್ನಿಸಿದ್ದೇನೆ. ಇದು ನಮ್ಮ ತಂದೆಯವರ ಪ್ರಭಾವದಿಂದಲೇ ಎಂಬುದನ್ನು ಹೇಳಬಲ್ಲೆ.
ಸಂತೂರ್ ವಾದನದಲ್ಲಿ ಮನೋಧರ್ಮ ಸಂಗೀತದ ಅಭಿವ್ಯಕ್ತಿಯ ಬಗ್ಗೆ ಹೇಳಿ.
ಸಂತೂರ್‌ನಲ್ಲಿ ಮನೋಧರ್ಮ ಸಂಗೀತ ಎಂದರೆ ಅದು ಹಿಂದೂಸ್ತಾನಿ ಸಂಗೀತದ ಇತರ ವಾದನ ಪ್ರಕಾರಗಳಂತೆಯೇ. ಸಂತೂರ್ ನುಡಿಸಾಣಿಕೆಯಲ್ಲಿ ತಂತ್ರಕಾರಿ ಅಂಶಗಳಾದ ಗಮಕ, ಮೀಂಡ್, ಆಂದೋಲನ್‌ಗಳಲ್ಲಿ ಪ್ರಯೋಗ ಮಾಡಬಹುದು. ಕಷ್ಟಕರ ರಾಗಗಳನ್ನೂ, ಪ್ರಹರ ರಾಗಗಳನ್ನೂ ಲೀಲಾಜಾಲವಾಗಿ ನುಡಿಸಬಹುದು. ನಮ್ಮ ಚಾಕಚಕ್ಯತೆ ಹಾಗೂ ನುಡಿಸಾಣಿಕೆಯಲ್ಲಿ ಪ್ರಾವೀಣ್ಯತೆ ಅಭಿವ್ಯಕ್ತವಾಗುವುದು ಮನೋಧರ್ಮ ಸಂಗೀತದಲ್ಲೇ. ರಾಗಾಲಾಪ, ರಾಗ ವಿಸ್ತರಣೆ, ರಾಗದ ವಿಲಂಬಿತ್, ಧೃತ್... ಹೀಗೆ ಎಲ್ಲದರಲ್ಲೂ ಹೊಸತನವನ್ನು ತರುವುದು ಸವಾಲಿನ ಕೆಲಸ. ಇದರಲ್ಲಿ ಯಶಸ್ಸು ಗಳಿಸಿದರೆ ಒಬ್ಬ ವಾದಕನ ಸಂತೂರ್ ಕಛೇರಿ ಯಶಸ್ವಿಯಾದಂತೆಯೇ.
ನೂರು ತಂತಿಗಳ ಕಾಶ್ಮೀರಿ ಸಂತೂರ್ ವಾದನದಲ್ಲಿ ನಿಮ್ಮ ‘ಸಂಗೀತ ಕೃಷಿ’ ಹೇಗೆ ಸಾಗಿದೆ?
ನಾನು ಶಾಸ್ತ್ರೀಯ ಸಂಗೀತದೊಂದಿಗೆ ವಿಶ್ವ ಸಂಗೀತವನ್ನು ಬೆಸೆಯುವ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದೇನೆ. ಈ ತಂತಿ ವಾದ್ಯಕ್ಕೆ ಹೆಚ್ಚು ವಿಸ್ತಾರವಾದ ಸ್ವರ ಶ್ರೇಣಿಯನ್ನು ಪೋಣಿಸಿದ್ದೇನೆ. ನನ್ನ ಹದಿನೇಳನೇ ವಯಸ್ಸಿಗೆ ಸಂತೂರ್ ನುಡಿಸಲು ತಂದೆಯಿಂದ ಆರಂಭಿಸಿ ಅವರೊಂದಿಗೇ ಕಛೇರಿಯನ್ನೂ ನೀಡಲಾರಂಭಿಸಿದೆ. ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರೊಂದಿಗೆ, ವಿಶ್ವಪ್ರಸಿದ್ಧ ಸ್ಯಾಕ್ಸೋಫೋನ್ ವಾದಕ ಕೆನ್ನಿ ಜಿ (KENNY G)ಅವರೊಂದಿಗೆ ‘ನಮಸ್ತೆ ಇಂಡಿಯಾ’ ಎಂಬ ಆಲ್ಬಂ ಹೊರತಂದಿದ್ದೇನೆ. ಅಲ್ಲದೆ ಪಿಯಾನೊ ವಾದಕ ರಿಚರ್ಡ್ ಕ್ಲೇಡರ್‌ಮನ್ ‘ಕಾನ್‌ಫ್ಲ್ಯುಯೆನ್ಸ್ (CONFLUENCE) ಎಂಬ ವಿಶಿಷ್ಟ ಸಂಗೀತ ಆಲ್ಬಂ ಹೊರತಂದಿದ್ದು, ಇದು ವಿಶ್ವಮಟ್ಟದಲ್ಲಿ ಮನ್ನಣೆ ಪಡೆದಿದೆ. ಅಲ್ಲದೆ ನನ್ನದೇ ಸಂಗೀತ ಸಂಯೋಜನೆಯೆ ‘ಮ್ಯೂಸಿಕ್ ಆಫ್ ದಿ ಹಿಮಾಲಯಾಸ್’, ಟ್ರೀ ಆಫ್ ಟ್ರಾಂಕ್ವಿಲಿಟಿ’ ಎಂಬ ಎರಡು ವಿಶಿಷ್ಟ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದು ಕೂಡ ಸಂತೂರ್ ವಾದನದಲ್ಲಿ ಮಾಡಿದ ಹೊಸ ಪ್ರಯತ್ನ ಎನ್ನಬಹುದು. ಅಲ್ಲದೆ 60ಕ್ಕೂ ಹೆಚ್ಚು ಲೈವ್ ಮತ್ತು ಸ್ಟುಡಿಯೊ ರೆಕಾರ್ಡಿಂಗ್ ಆಲ್ಬಂಗಳಿಗೆ ಸಂತೂರ್ ನುಡಿಸಿದ್ದೇನೆ.
ಸಂತೂರ್ ವಾದ್ಯ ಪರ್ಷಿಯನ್ ಮೂಲದ್ದಾದರೂ ಭಾರತದಲ್ಲಿ ಬಹಳ ಜನಪ್ರಿಯವಾಗಲು ಪಂ. ಶಿವಕುಮಾರ್ ಶರ್ಮಾ ಅವರೇ ಕಾರಣ. ಇದನ್ನು ಮುಂದುವರಿಸುವ ಜವಾಬ್ದಾರಿಯನ್ನು ಹೇಗೆ ನಿಭಾಯಿಸುವಿರಿ?
ಸಂತೂರ್ ಒಂದು ವಿಶಿಷ್ಟ ವಾದ್ಯ ಪ್ರಕಾರ. ಇದು ಮರದ ಪೆಟ್ಟಿಗೆಯಂತಿದ್ದು ನೂರಕ್ಕೂ ಹೆಚ್ಚು ತಂತಿಗಳಿದ್ದವು. ನಮ್ಮ ತಂದೆ ಇದಕ್ಕೆ 93 ತಂತಿಗಳನ್ನು ಮಾತ್ರ ಅಳವಡಿಸಿ ಶಾಸ್ತ್ರೀಯ ಸಂಗೀತ ರಾಗಗಳನ್ನು ನುಡಿಸುತ್ತಿದ್ದರು. ನಾನೂ ಅದನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಇದರ ನುಡಿಸಾಣಿಕೆ ಕ್ರಮವೂ ವಿಭಿನ್ನ. ಕುಳಿತುಕೊಂಡು ವಾದ್ಯವನ್ನು ಮಡಿಲಲ್ಲಿಟ್ಟು ಎರಡು ಕೈಗಳಲ್ಲಿ ಮೃದುವಾದ ಮರದ ಕಡ್ಡಿಗಳಿಂದ (ಮೆಜ್ರಾಬ್ಸ್) ತಂತಿಗಳ ಮೇಲೆ ಒತ್ತಡ ಹಾಕುವ ಮೂಲಕ ಸ್ವರಗಳನ್ನು ನುಡಿಸಲಾಗುತ್ತದೆ. ತಂದೆಯವರು ಮಾಡಿದ ಪ್ರಯೋಗಗಳಲ್ಲದೆ ನಾನು ಜನಪದ ಸಂಗೀತ, ಜಾಸ್, ಗಜಲ್‌ಗಳನ್ನೂ ಈ ವಾದ್ಯದಲ್ಲಿ ನುಡಿಸುತ್ತೇನೆ. ವಿದೇಶಿ ಸಂಗೀತಗಾರೊಂದಿಗೆ ಸೇರಿ ಫ್ಯೂಷನ್ ಅನ್ನೂ ನುಡಿಸಿ ದೇಶ ವಿದೇಶಗಳಲ್ಲಿ ಸಂತೂರ್ ನಾದನದಿ ಪ್ರವಹಿಸುವಂತೆ ಮಾಡುವುದು ನನ್ನ ಉದ್ದೇಶ.
ಯುವ ಕಲಾವಿದರಿಗೆ ನಿಮ್ಮ ಸಲಹೆ ಏನು?
ಯುವ ಸಂಗೀತಗಾರರು ಆರಂಭದಲ್ಲೇ ಸರಿಯಾದ ಗುರುವನ್ನು ಕಂಡುಕೊಳ್ಳಬೇಕು. ಸಂತೂರ್ ಕಲಿಯಬೇಕಾದರೆ ಉತ್ತಮ ಸ್ವರ ಜ್ಞಾನ ಅತ್ಯಗತ್ಯ. ಕಠಿಣ ಪರಿಶ್ರಮವನ್ನೂ ನಿರೀಕ್ಷಿಸುತ್ತದೆ ಈ ವಾದ್ಯ. ಸಮರ್ಪಿತ, ಶಿಸ್ತುಬದ್ಧ ಸಂಗೀತ ಕಲಿಯುವುದರಿಂದ ಸಂಗೀತ ಜೀವನವೂ ಸುಗಮವಾಗುತ್ತದೆ. ಸತತ ಪರಿಶ್ರಮದಿಂದ ಯಶಸ್ಸು ಸಿಕ್ಕೇ ಸಿಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.