ADVERTISEMENT

ಕದ್ರಿ ಗೋಪಾಲನಾಥ್ ಹೇಳುತ್ತಿದ್ದ ‘ಅಘೋರಿ ಕತೆ’ ಕೇಳಿದ್ದೀರಾ?

ಜೂನ್‌ 23ರಂದು ಕಡೆಯ ಕಛೇರಿ, ಕೋಟೆ ರಾಮೋತ್ಸವಕ್ಕೆ ಮಂಗಳ ಹಾಡಿದ್ದರು

ಎಂ.ಎನ್.ಯೋಗೇಶ್‌
Published 11 ಅಕ್ಟೋಬರ್ 2019, 12:23 IST
Last Updated 11 ಅಕ್ಟೋಬರ್ 2019, 12:23 IST
ಡಾ.ಖದ್ರಿ ಗೋಪಾಲನಾಥರು ತಮ್ಮ ಕಡೆಯ ಕಛೇರಿಗಾಗಿ ಜೂನ್‌ 23ರಂದು ಬೆಂಗಳೂರಿನಲ್ಲಿ ಸಹಕಲಾವಿದರೊಂದಿಗೆ ಸೇರಿದ್ದರು
ಡಾ.ಖದ್ರಿ ಗೋಪಾಲನಾಥರು ತಮ್ಮ ಕಡೆಯ ಕಛೇರಿಗಾಗಿ ಜೂನ್‌ 23ರಂದು ಬೆಂಗಳೂರಿನಲ್ಲಿ ಸಹಕಲಾವಿದರೊಂದಿಗೆ ಸೇರಿದ್ದರು   

ಮಂಡ್ಯ: ಕಬ್ಬಿಣದ ಕೊಳವೆಯಂತಿದ್ದ ಸ್ಯಾಕ್ಸೊಫೋನ್‌ ವಾದ್ಯವನ್ನು ಪಳಗಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿ, ರಸಿಕರು ತಲೆದೂಗುವಂತೆ ನುಡಿಸುತ್ತಿದ್ದ ವಿದ್ವನ್ಮಣಿ ಕದ್ರಿ ಗೋಪಾಲನಾಥ್‌ರು ತಮ್ಮ ಆಪ್ತರಿಗೆ ಹೇಳಿದ್ದ ‘ಕಾಶಿ ಅಘೋರಿ ಕತೆ’ ಕುತೂಹಲ ಮೂಡಿಸುತ್ತದೆ.

80ರ ದಶಕದಲ್ಲಿ ಕದ್ರಿ ಅವರಿನ್ನೂ ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಗೌರವ, ಮನ್ನಣೆ, ಹಾರ, ತುರಾಯಿ, ಶಾಲುಗಳನ್ನು ಕಂಡಿದ್ದವರಲ್ಲ. ಅಂತಹ ಸಂದರ್ಭದಲ್ಲಿ ಅವರು ಬಹಳ ಇಷ್ಟಪಟ್ಟು ಕಾಶ್ಮೀರದಿಂದ ಬಹುಬಣ್ಣಗಳ ಶಾಲೊಂದನ್ನು ಖರೀದಿಸಿ ಇಟ್ಟುಕೊಂಡಿದ್ದರು. ಕಛೇರಿ ನುಡಿಸುವಾಗಲೆಲ್ಲಾ ಅದನ್ನು ಹೊದ್ದುಕೊಂಡೇ ನುಡಿಸುತ್ತಿದ್ದರು.

ಒಮ್ಮೆ ಕಾಶಿಯಲ್ಲಿ ಕಛೇರಿ ನಿಗದಿಯಾಗಿತ್ತು. ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಅವರ ಸಭಾಂಗಣಕ್ಕೆ ತೆರಳಲು ಹೊರಗೆ ಬಂದರು. ಆಗ ಅಘೋರಿಯೊಬ್ಬ ಅಡ್ಡ ಬಂದು ಶಾಲು ಕೊಡುವಂತೆ ಹಿಂದಿಯಲ್ಲಿ ಒತ್ತಾಯಿಸಿದ. ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದ ಶಾಲನ್ನು ಮರು ಮಾತನಾಡದೇ ಅಘೋರಿ ಕೈಗಿಟ್ಟರು. ಆಗ ಆ ಅಘೋರಿ ‘ನಿನ್ನ ಬದುಕು ಬದಲಾಗಲಿದೆ, ನೀನು ಬಲು ಎತ್ತರಕ್ಕೆ ಏರುತ್ತೀಯ’ ಎಂದು ಆಶೀರ್ವದಿಸಿ ತೆರಳಿದ.

ADVERTISEMENT

ಅಘೋರಿ ಆಶೀರ್ವಾದದ ಕತೆ ಕದ್ರಿ ಅವರನ್ನು ಸದಾ ಕಾಡುತ್ತಲೇ ಇತ್ತು. ಸಾಧನೆಯ ವಿಷಯ ಬಂದಾಗ ಅವರು ಈ ಕತೆಯನ್ನು ತಪ್ಪದೇ ಪ್ರಸ್ತಾಪ ಮಾಡುತ್ತಿದ್ದರು. ಪರಿಶ್ರಮದ ಜೊತೆಗೆ ದೇವರ ಆಶೀರ್ವಾದವೂ ಇರಬೇಕು ಎನ್ನುತ್ತಿದ್ದರು. ಕದ್ರಿ ಗೋಪಾಲನಾಥರು ಇನ್ನಿಲ್ಲವಾದ ಹೊತ್ತಿನಲ್ಲಿ ಅವರು ಹೇಳುತ್ತಿದ್ದ ಅಘೋರಿ ಕತೆಯನ್ನು ಆಪ್ತರು, ಶಿಷ್ಯರು ಶ್ರುತಿಸುತ್ತಾರೆ.

‘ಬೆಂಗಳೂರಿನ ನ್ಯೂ ಮಾಡರ್ನ್‌ ಹೋಟೆಲ್‌ನಲ್ಲಿ ಈಚೆಗೆ ನಾನು ಕದ್ರಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ಅಘೋರಿ ಕತೆ ಹೇಳಿದ್ದರು. ಅಘೋರಿ ಆಶೀರ್ವಾದವನ್ನು ಪರಶಿವನ ಆಶೀರ್ವಾದ ಎಂದೇ ನಂಬಿದ್ದರು. ಸತತ ಮೂರು ಗಂಟೆ ನನ್ನೊಂದಿಗೆ ಮಾತನಾಡಿದ್ದರು. ಊಟ ಮಾಡಿ ಎಂದು ಕೇಳಿದ್ದಕ್ಕೆ ಮಾತ್ರೆಗಳನ್ನು ತೋರಿಸಿ, ಇದೇ ನನ್ನ ಊಟ ಎನ್ನುತ್ತಾ ನಕ್ಕಿದ್ದರು’ ಎಂದು ವೈಯಲಿನ್‌ ವಾದಕ ವಿದ್ವಾನ್‌ ಎನ್‌.ಅನಂತಸತ್ಯಂ ಹೇಳಿದರು.

ಜೂನ್‌ 23ರಂದು ಕಡೆಯ ಕಛೇರಿ: ಸ್ಯಾಕ್ಸೊಫೋನ್‌ನಲ್ಲಿ ಕದ್ರಿ ಗೋಪಾಲನಾಥ್‌, ವೈಯಲಿನ್‌ನಲ್ಲಿ ಕನ್ಯಾಕುಮಾರಿ, ಮೋರ್ಸಿಂಗ್‌ನಲ್ಲಿ ರಾಜಶೇಖರ್‌ ಅನುಬಂಧ ನಾಲ್ಕು ದಶಕ ಮೀರಿದ್ದು. ಮೃದಂಗ, ತಬಲಾ ಕಲಾವಿದರು ಬದಲಾದರೂ ಈ ಮೂವರು ಮಾತ್ರ ಬದಲಾಗುತ್ತಿರಲಿಲ್ಲ. ವಿಶ್ವದಾದ್ಯಂತ ಸಾವಿರಾರು ಕಛೇರಿ ನೀಡಿದ್ದರು.

ಜೊತೆಯಲ್ಲಿ ನುಡಿಸುವವರನ್ನು ಪಕ್ಕವಾದ್ಯ ಕಲಾವಿದರು ಎನ್ನದೇ ಸಹ ಕಲಾವಿದರು ಎಂದೇ ಬಹಳ ಗೌರವಯುತವಾಗಿ ಕಾಣುತ್ತಿದ್ದರು. ಸಂತೋಷ ಪಡಲು ಬಂದ ರಸಿಕರೆದುರು ನಗುನಗುತ್ತಾ ನುಡಿಸಬೇಕು ಎನ್ನುತ್ತಿದ್ದರು. ಗಹಗಹಿಸಿ ನಗುವಲ್ಲಿ ಪ್ರಸಿದ್ಧಿ ಪಡೆದಿದ್ದ ಅವರು ಎಲ್ಲರನ್ನೂ ನಕ್ಕು ನಲಿಸುತ್ತಿದ್ದರು ಎಂದು ಅವರು ಶಿಷ್ಯರು ಸ್ಮರಿಸಿಕೊಂಡರು.

‘ಜೂನ್‌ 23ರಂದು ಬೆಂಗಳೂರಿನಲ್ಲಿ ನುಡಿಸಿದ ಕಛೇರಿಯೇ ಅವರ ಅಂತಿಮ ಕಾರ್ಯಕ್ರಮ. ಅದಕ್ಕೂ ಮೊದಲು ಮೇ 5ರಂದು ಬೆಂಗಳೂರು ಕೋಟೆ ಆವರಣದ ರಾಮೋತ್ಸವದಲ್ಲಿ ನುಡಿಸಿದ್ದರು. ಪ್ರತಿ ವರ್ಷದ ರಾಮೋತ್ಸವ ಇವರ ಕಚೇರಿಯಿಂದಲೇ ಆರಂಭವಾಗುತ್ತಿತ್ತು. ಆದರೆ ಈ ಬಾರಿ ಕಡೆಯ ಬಾರಿ ನುಡಿಸಿ ಉತ್ಸವಕ್ಕೆ ಮಂಗಳ ಹಾಡಿದ್ದು ವಿಶೇಷವಾಗಿತ್ತು’ ಎಂದು ಮೋರ್ಸಿಂಗ್‌ ವಿದ್ವಾನ್‌ ರಾಜಶೇಖರ್‌ ಹೇಳಿದರು.

**

ಸ್ಯಾಕ್ಸೊಫೋನ್‌ಗೆ ಮಂಗಳವಾದ್ಯ ರೂಪ

ಬೆಲ್ಜಿಯಂನಲ್ಲಿ ಜನ್ಮತಳೆದಿದ್ದ ಸ್ಯಾಕ್ಸೊಫೋನ್‌ನಿಂದ ನೇರ ಸ್ವರಗಳನ್ನು (ನೋಟ್ಸ್‌) ಮಾತ್ರ ನುಡಿಸಲು ಸಾಧ್ಯವಿತ್ತು. ವಾದ್ಯದ ದೇಹವನ್ನೇ ಬದಲಿಸಿದ ಕದ್ರಿ ಗೋಪಾಲನಾಥ್‌ರು ಗಮಕ ಪ್ರಧಾನವಾದ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸಿದ್ದು ಐತಿಹಾಸಿಕ ಸಾಧನೆ.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಮೈಸೂರು ಆಸ್ಥಾನಕ್ಕೆ ಈ ವಾದ್ಯ ತರಿಸಿದ್ದರು. ಆಸ್ಥಾನ ವಿದ್ವಾಂಸರಾಗಿದ್ದ ಲಕ್ಷ್ಮೀನರಸಿಂಹಯ್ಯ ಅವರು ಇದನ್ನು ನುಡಿಸುತ್ತಿದ್ದರು. ಮೈಸೂರು ದಸರಾದಲ್ಲಿ ಲಕ್ಷ್ಮೀನರಸಿಂಹಯ್ಯ ನುಡಿಸುವುದನ್ನು ಕಂಡಿದ್ದ ಕದ್ರಿ ಗೋಪಾಲನಾಥ್‌ರು ಸ್ಯಾಕ್ಸೊಫೋನ್‌ ಹಿಂದೆ ಬಿದ್ದರು.

ಕದ್ರಿ ಗೋಪಾಲನಾಥ್‌ರು ವಿಶ್ವದಾದ್ಯಂತ ನುಡಿಸದಿರುವ ಸಭಾಗಳೇ ಇಲ್ಲ, ಸ್ಯಾಕ್ಸೊಫೋನ್‌ ಎಂದರೆ ಕದ್ರಿ,ಕದ್ರಿ ಎಂದರೆ ಸ್ಯಾಕ್ಸೊಫೋನ್‌ ಎಂಬಂತಾಯಿತು. ಅವರು ವಿದೇಶಿ ವಾದ್ಯಕ್ಕೆ ಮಂಗಳವಾದ್ಯ ರೂಪ ನೀಡಿದ್ದು ಇತಿಹಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.