ADVERTISEMENT

ನೆಹರೂ ಕಣ್ಣಲ್ಲಿ ಕಂಬನಿ ತರಿಸಿದ ಲತಾ ಹಾಡಿದ 'ಏ ಮೇರೆ ವತನ್‌ ಕೇ ಲೋಗೋ'

ಕಂಬನಿಯ ಹಾಡಿನ ಜಾಡು ಹಿಡಿದು...

ಮಲ್ಲಿಕಾರ್ಜುನ ಹೆಗ್ಗಳಗಿ
Published 6 ಫೆಬ್ರುವರಿ 2022, 5:46 IST
Last Updated 6 ಫೆಬ್ರುವರಿ 2022, 5:46 IST
ಲತಾ ಮಂಗೇಶಕರ್‌
ಲತಾ ಮಂಗೇಶಕರ್‌   

ಖ್ಯಾತ ಗಾಯಕಿ ಲತಾ ಮಂಗೇಶಕರ್ ಅವರಿಗೆ ‘ಏ ಮೇರೆ ವತನ್‌ ಕೇ ಲೋಗೋ’ ಗೀತೆ ಬಹುದೊಡ್ಡ ಗೌರವ ತಂದುಕೊಟ್ಟಿದೆ. 60 ವರ್ಷಗಳ ಹಿಂದೆ ಈ ಗೀತೆಯನ್ನು ಪ್ರಥಮ ಬಾರಿಗೆ ಹಾಡಿದ ಹೃದಯ ಸ್ಪರ್ಶಿ ಅನುಭವವನ್ನು ಅವರು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಅವರ ಮಾತುಗಳು ಅವರ ಸಂಗೀತದಷ್ಟೇ ತುಂಬಾ ಮಧುರವಾಗಿವೆ. ಅವರ ಆ ಮಧುರ ನೆನಪುಗಳನ್ನು ಅವರ ಮಾತಿನಲ್ಲೇ ಕೇಳಿ.

–ಇದು ಪ್ರಜಾವಾಣಿಯಲ್ಲಿ 2022ರ ಜನವರಿ 9ರಂದು ಪ್ರಕಟವಾದ ಲೇಖನ 'ಕಂಬನಿಯ ಹಾಡಿನ ಜಾಡು ಹಿಡಿದು...'

ದಿಲ್ಲಿಯಲ್ಲಿ ನಡೆದ 1962ರ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆ ಹಾಗೂ ಭಜನೆ ಹಾಡುವುದಕ್ಕೆ ಸುಮಾರು ಎರಡು ತಿಂಗಳ ಮೊದಲೇ ನನಗೆ ಆಮಂತ್ರಣ ಬಂದಿತ್ತು. ಒಪ್ಪಿಕೊಂಡಿರುವುದಾಗಿ ತಿಳಿಸಿದ್ದೆ. ಅದೇ ಆಗ ಭಾರತ-ಚೀನಾ ಯುದ್ಧ ಕೊನೆಗೊಂಡಿತ್ತು. ಯಾವ ಹಾಡುಗಳನ್ನು ಹಾಡಬೇಕು ಎಂದು ನಾನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆಗ ನನಗೆ ಕವಿ ಪ್ರದೀಪ ಅವರಿಂದ ಟೆಲಿಫೋನ್ ಕಾಲ್ ಬಂತು. ಅವರು ಬರೆದ ‘ಏ ಮೇರೆ ವತನ್‌ ಕೇ ಲೋಗೋ’ ಗೀತೆಯನ್ನು ಹಾಡಬೇಕು ಎಂದು ಅವರು ಸೂಚಿಸಿದರು. ಹೆಚ್ಚು ಸಮಯ ಇಲ್ಲ. ಹೊಸ ಹಾಡುಗಳಿಗೆ ಧ್ವನಿ ಸಂಯೋಜನೆ ಮಾಡಿಕೊಳ್ಳಲು ಆಗುವುದಿಲ್ಲ ಎಂದು ನಾನು ನಿರಾಕರಿಸಿದೆ.

ADVERTISEMENT

ಪ್ರದೀಪ ಅವರು ‘ಈ ಹಾಡನ್ನು ಹಾಡಲೇಬೇಕು. ನೀನು ಹಾಡದಿದ್ದರೆ ಈ ಹಾಡು ಪೂರ್ಣವಾಗುವುದಿಲ್ಲ’ ಎಂದು ಆಗ್ರಹಿಸಿದರು. ಗುಜರಾತಿ ಮೂಲದ ಪ್ರಸಿದ್ಧ ಕವಿ ಪ್ರದೀಪ, ಕಟ್ಟಾ ಗಾಂಧೀಜಿ ಅನುಯಾಯಿ. ಅವರ ಮಾತು ಮೀರುವುದು ಆಗದೇ ಹಾಡುವುದಕ್ಕೆ ಒಪ್ಪಿಕೊಂಡೆ.

ಸರಕಾರ ವ್ಯವಸ್ಥೆ ಮಾಡಿದ್ದ ವಿಶೇಷ ವಿಮಾನದಲ್ಲಿ ನಾನು ಹಾಗೂ ಚಿತ್ರ ಜಗತ್ತಿನ ಗಣ್ಯರಾದ ದಿಲೀಪಕುಮಾರ್‌, ಮೆಹಬೂಬ್‌ ಖಾನ್‌, ಸಿ. ರಾಮಚಂದ್ರ ರಾವ್‌ ಮುಂತಾದವರೊಂದಿಗೆ ಮುಂಬೈಯಿಂದ ದಿಲ್ಲಿಗೆ ಹೋದೆ. ‘ಏ ಮೇರೆ ವತನ್‌ ಕೇ ಲೋಗೋ’ ಹಾಡಿನ ರಿಹರ್ಸಲ್ಅನ್ನು ವಿಮಾನದಲ್ಲಿಯೇ ಮಾಡಿಕೊಂಡೆ. ಸಿ. ರಾಮಚಂದ್ರ ರಾವ್ ಧ್ವನಿ ಸಂಯೋಜನೆಗೆ ಮಾರ್ಗದರ್ಶನ ಮಾಡಿದರು.

ಜನವರಿ 26ರಂದು ಸಂಜೆ ಭಜನೆ ಹಾಗೂ ರಾಷ್ಟ್ರಭಕ್ತಿಯ ಗೀತೆಗಳ ಕಾರ್ಯಕ್ರಮವನ್ನು ದಿಲ್ಲಿಯ ವಿಶಾಲ ಮೈದಾನದಲ್ಲಿ ಆಯೋಜನೆ ಮಾಡಿಲಾಗಿತ್ತು. ಪ್ರಧಾನಿ ಜವಾಹರಲಾಲ್‌ ನೆಹರೂ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಭಾಗವಹಿಸಿದ್ದರು. ನಾನು ಮೊದಲು ಒಂದು ಭಜನೆ ಹಾಡಿದೆ. ನಂತರ ‘ಏ ಮೇರೆ ವತನ್‌ ಕೇ ಲೋಗೋ’ ಹಾಡು ಹಾಡಿದೆ. ಈ ಹಾಡು ಅಲ್ಲಿದ್ದ ಪ್ರೇಕ್ಷಕರ ಮನಸ್ಸನ್ನು ಹಿಡಿದು ಅಲ್ಲಾಡಿಸಿದ್ದು ನನಗೆ ಕಾಣುತ್ತಿತ್ತು.

ಹಾಡು ಮುಗಿದ ಮೇಲೆ ವೇದಿಕೆಯ ಹಿಂದುಗಡೆ ಕಲಾವಿದರಿಗಾಗಿ ವ್ಯವಸ್ಥೆ ಮಾಡಲಾಗಿದ್ದ ರೂಮ್‍ನಲ್ಲಿ ಬಂದು ಕುಳಿತುಕೊಂಡೆ. ಕರವಸ್ತ್ರದಿಂದ ಮುಖದ ಮೇಲಿನ ಬೆವರು ಒರೆಸುಕೊಳ್ಳುತ್ತಿದ್ದೆ. ಮೆಹಬೂಬ್‌ ಖಾನ್‌ ಅವಸರದಿಂದ ನನ್ನ ಬಳಿಗೆ ಬಂದು ನೆಹರೂಜಿ ಕರೆಯುತ್ತಿದ್ದಾರೆ, ತಕ್ಷಣ ಬನ್ನಿ ಎಂದು ಕರೆದುಕೊಂಡು ಹೋದರು.

ನೆಹರೂಜಿ ಬಳಿ ನಿಲ್ಲುವುದು ಒಂದು ಬಹುದೊಡ್ಡ ರೋಮಾಂಚನ ಸಂಗತಿ. ಅವರು ನನ್ನ ಕೈ ಹಿಡಿದು ‘ಹುಡುಗಿ, ನೀನು ಹಾಡಿ ನಾನು ದುಃಖಿಸಿ ಅಳುವಂತೆ ಮಾಡಿದಿ’ (ಯೂ ಗರ್ಲ್ ಮೇಡ್ ಟು ಕ್ರೈ) ಎಂದು ಹೇಳಿದರು. ಅವರ ಕಣ್ಣಂಚಿನಲ್ಲಿ ಕಂಬನಿ ತುಂಬಿಕೊಂಡಿದ್ದವು. ಗಂಟಲೂ ಕೂಡ ಬಿಗಿದುಕೊಂಡಿತ್ತು. ನಾನು ಸ್ಥಂಭೀಭೂತಳಾಗಿ ನಿಂತುಕೊಂಡು ಬಿಟ್ಟೆ. ನೆಹರೂಜಿ ವೇದಿಕೆಯಿಂದ ನಿರ್ಗಮಿಸಿ ಕಾರು ಹತ್ತಿ ಹೊರಟು ಹೋದರು.

ಮರುದಿನ ನಮ್ಮನ್ನೆಲ್ಲ ನೆಹರೂಜಿ ಉಪಹಾರಕ್ಕೆ ಆಮಂತ್ರಿಸಿದ್ದರು. ಹಿರಿಯ ಗಾಯಕರೆಲ್ಲ ನೆಹರೂಜಿಯೊಂದಿಗೆ ಮಾತಿನಲ್ಲಿ ತೊಡಗಿದ್ದರು. ನಾನು ಬದಿಯ ಕೋಣೆಯಲ್ಲಿ ಒಬ್ಬಳೇ ಕುಳಿತಿದ್ದೆ. ಆಗ ಇಂದಿರಾಗಾಂಧಿ ಬಂದರು. ನೀವು ಇಲ್ಲಿ ಏಕೆ ಕುಳಿತಿದ್ದೀರಿ? ಒಳಗೆ ಬನ್ನಿ ಎಂದು ಹೇಳಿದರು. ಇಲ್ಲ ನಾನು ಇಲ್ಲಿಯೇ ಕಂಫರ್ಟ್ ಆಗಿ ಇದ್ದೇನೆ ಎಂದು ಹೇಳಿದೆ. ನಿಮ್ಮ ಇಬ್ಬರು ಫ್ಯಾನ್‍ಗಳು ಒಳಗೆ ಇದ್ದಾರೆ. ಕರೆ ತರುತ್ತೇನೆ ಎಂದು ಇಂದಿರಾಗಾಂಧಿ ಹೇಳಿ ಒಳಗೆ ನಡೆದರು. ಅವರು ಒಂದು ನಿಮಿಷದ ನಂತರ ತಮ್ಮ ಮಕ್ಕಳಾದ ರಾಜೀವ್‌ ಹಾಗೂ ಸಂಜಯ್‌ ಗಾಂಧಿಯವರನ್ನು ಕರೆತಂದರು. ಈ ಹುಡುಗರಿಬ್ಬರು ಮಂದಹಾಸ ಬೀರುತ್ತ ನನ್ನ ಬಳಿ ಬಂದು ಕುಳಿತರು. ನೆಹರೂಜಿ ಒಳಗೆ ಕರೆದಿದ್ದರಿಂದ ಎದ್ದು ಅವರ ಬಳಿಗೆ ಹೋಗಿ ನಮಸ್ಕರಿಸಿದೆ. ಈ ಬಾರಿ ನೆಹರೂಜಿ ಅದೇಕೋ ಹೆಚ್ಚು ಮಾತನಾಡಲಿಲ್ಲ.

ಮುಂದೆ 1964ರಲ್ಲಿ ಮುಂಬೈನಲ್ಲಿ ಒಂದು ಧಾರ್ಮಿಕ ಸಂಸ್ಥೆ ಸಹಾಯಾರ್ಥ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನೆಹರೂಜಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂದೂ ಅವರು ‘ಏ ಮೇರೆ ವತನ್‌ ಕೇ ಲೋಗೋ’ ಹಾಡು ಹಾಡಲು ನನಗೆ ಸೂಚಿಸಿದರು. ನನ್ನ ಹಾಡು ಮುಗಿಯುತ್ತಿದ್ದಂತೆ ನೆಹರೂ ಎದ್ದು ಹೊರ ನಡೆದರು. ಕಾರಿನಲ್ಲಿ ಕುಳಿತ ನೆಹರೂಜಿ ನನ್ನನ್ನು ಕರೆಸಿಕೊಂಡರು. ನಾನು ಬಂದ ತಕ್ಷಣ ಕಾರಿನ ಗ್ಲಾಸ್ ಇಳಿಸಿ ನನ್ನ ಪ್ರತಿ ಕಾರ್ಯಕ್ರಮದಲ್ಲಿ ‘ಏ ಮೇರೆ ವತನ ಕೇ ಲೋಗೋ’ ಹಾಡು ಹಾಡಲೇಬೇಕು ಎಂದು ಕಟ್ಟಪ್ಪಣೆ ರೀತಿಯಲ್ಲಿ ನನಗೆ ಹೇಳಿದರು.

‘ಏ ಮೇರೆ ವತನ್‌ ಕೇ ಲೋಗೋ
ಜರಾ ಆಂಖ್‌ ಮೇ ಭರ್‌ ಲೋ ಪಾನಿ
ಜೋ ಶಹೀದ್ ಹುಯೇ ಉನಕಿ
ಜರಾ ಯಾದ್‌ ಕರೋ ಕುರಬಾನಿ’

ಈ ಹಾಡನ್ನು ನಾನು ಕಳೆದ 60 ವರ್ಷಗಳಿಂದ ಹಾಡುತ್ತಿದ್ದೇನೆ. ದೇಶ ವಿದೇಶಗಳ ಸಂಗೀತ ಕಾರ್ಯಕ್ರಮಗಳಲ್ಲಿ ಈ ಹಾಡು ಇಲ್ಲದೇ ನನ್ನ ಕಛೇರಿ ಕೊನೆಗೊಳ್ಳುವುದಿಲ್ಲ. 2012ರಲ್ಲಿ ಈ ಹಾಡಿನ ಸುವರ್ಣ ಮಹೋತ್ಸವ ದೇಶದ ತುಂಬ ನಡೆಯಿತು. ಪ್ರದೀಪಜಿ ಬರೆದ ಈ ಹಾಡು ಒಂದು ಅಮರ ಗೀತೆ. ಕಾವ್ಯಕ್ಕೆ ಬಹುದೊಡ್ಡ ಶಕ್ತಿ ಇದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ನೆಹರೂಜಿ ಈಗಲೂ ಈ ಹಾಡನ್ನು ಕೇಳುತ್ತಿರುವಂತೆ ನನಗೆ ಭಾಸವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.