ADVERTISEMENT

ಕ್ಲಾರಿಯೊನೆಟ್‌ ಸವಿ; ರೊಕ್ಕದ ಅಧಿದೇವತೆಗೆ ಶರಣು

ಪ್ರಜಾವಾಣಿ ದಸರಾ ಸಂಗೀತೋತ್ಸವ 2020

ಉಮಾ ಅನಂತ್
Published 23 ಅಕ್ಟೋಬರ್ 2020, 19:30 IST
Last Updated 23 ಅಕ್ಟೋಬರ್ 2020, 19:30 IST
ಪಂ. ನರಸಿಂಹಲು ವಡವಾಟಿ
ಪಂ. ನರಸಿಂಹಲು ವಡವಾಟಿ   

ಕ್ಲಾರಿಯೊನೆಟ್‌ ವಿದೇಶಿ ಮೂಲದ ವಾದ್ಯ. ನುಡಿಸಾಣಿಕೆ ತುಸು ಕಷ್ಟ. ಆದರೆ ಇದರ ನಾದಮಾಧುರ್ಯ ಸಂಗೀತಪ್ರಿಯರಿಗೆ ಸದಾ ಇಷ್ಟ. ಆರ್ಕೆಸ್ಟ್ರಾಗಳಲ್ಲಿ ಮಾತ್ರ ಬಳಸುತ್ತಿದ್ದ ಈ ಸುಷಿರ ವಾದ್ಯದಲ್ಲಿ ನಮ್ಮ ಅಪ್ಪಟ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸಿ ನುಡಿಸಿ ಮನೆಮಾತಾದವರು ರಾಯಚೂರು ಮೂಲದ ಪಂ. ನರಸಿಂಹಲು ವಡವಾಟಿ. ಮಂಗಳ ವಾದ್ಯಗಳ ಗುಂಪಿಗೆ ಸೇರುವ ಇದರಲ್ಲಿ ರಾಗಗಳನ್ನು ಅರಳಿಸಿ ಕೇಳುಗರನ್ನು ಸೆಳೆಯುವ ಪಂ. ವಡವಾಟಿ, ‘ಪ್ರಜಾವಾಣಿ ಆಯೋಜಿಸಿರುವ ‘ದಸರಾ ಸಂಗೀತ ಮಹೋತ್ಸವ’ದ ಆರನೆಯ ದಿನ, ಗುರುವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ‘ನಾದಧಾರೆ’ ಹರಿಸಿದರು.

ನವರಾತ್ರಿ ಹಬ್ಬವಾಗಿರುವುದರಿಂದ ವಾದ್ಯದಲ್ಲೂ ದುರ್ಗೆಯ ಸ್ಮರಣೆ. ಹಿಂದೂಸ್ತಾನಿ ಸಂಗೀತದ ‘ಬಿಲಾವಲ್‌ ಥಾಟ್‌’ನಲ್ಲಿ ಬರುವ ರಾಗ ದುರ್ಗಾ ರಾತ್ರಿಯ ಎರಡನೆ ಪ್ರಹರದಲ್ಲಿ ನುಡಿಸುವ ರಾಗ. ಅದು ಸಂಜೆಯ ಕಂಪಿಗೆ ಉತ್ತಮ ಸಾಥ್‌ ನೀಡಿತು. ಕರ್ನಾಟಕ ಸಂಗೀತದಲ್ಲಿ ಶುದ್ಧ ಸಾವೇರಿ ರಾಗಕ್ಕೆ ಸರಿಸಮನಾಗಿದ್ದು,ಗಾಂಧಾರ ಮತ್ತು ನಿಷಾಧವನ್ನು ವರ್ಜ್ಯವಾಗಿಸಿದ ಈ ರಾಗದಲ್ಲಿರುವ ಐದೂ ಸ್ವರಗಳು ಶುದ್ಧ ಸ್ವರಗಳೇ. ಈ ರಾಗದಲ್ಲಿ ಜನಪ್ರಿಯ ಬಂದೀಶ್‌ ’ಸಖಿ ಮೋರೆ ರೂಮ ಜೂಮ...’ ಅನ್ನು ಜಪ್‌ತಾಲ್‌ನಲ್ಲಿ ನುಡಿಸಿದರು. ಬಳಿಕ ಧೃತ್‌ ಭಾಗಕ್ಕೆ ಬಂದಾಗ ತ್ರಿತಾಲ್‌ನಲ್ಲಿ ‘ದೇವ ಜೊ ದುರ್ಗಾ ಭವಾನಿ..’ ಎನ್ನುತ್ತಾ ರಾಗ ದುರ್ಗಾದ ಸೊಬಗಿನಲ್ಲಿ ದೇವಿ ದುರ್ಗೆಯನ್ನು ಆರಾಧಿಸಿದರು.

ಸಾಯಿ ಕೀರ್ತನೆಗಳನ್ನು ಕೇಳುವುದೆಂದರೆ ಬಾಬಾ ಭಕ್ತರಿಗೆ ಎಂದಿಗೂ ಪುಳಕ! ಪುಟ್ಟಪರ್ತಿ ಸಾಯಿಬಾಬಾಮೇಲಿನ ಭಜನ್‌ ‘ಸಾಯಿ ಸತ್ಯಂ ಸಾಯಿ ನಿತ್ಯಂ’ ಅನ್ನು ಕ್ಲಾರಿಯೊನೆಟ್‌ನಲ್ಲಿ ‘ಮಿಶ್ರ ಜೋಗ್‌’ ರಾಗ, ಭಜನ್‌ ಠೇಕಾ ತಾಳದಲ್ಲಿ ನುಡಿಸಿ ವಿನೀತರಾಗುವಂತೆ ಮಾಡಿದರು.

ADVERTISEMENT

ಉಸ್ತಾದ್‌ ಬಡೆ ಗುಲಾಮ್‌ ಅಲಿ ಸಾಹೇಬರು ಸಂಗೀತದ ಮೇರುಶಿಖರ. ಇವರು ರಚಿಸಿ ಜನಪ್ರಿಯಗೊಳಿಸಿದ ‘ಕಾಕರೊ ಸಜನಿ ಆಯಿನ ಬಾಲಮಾ..’ ಬಂದೀಶ್‌, ಸಿಂಧೂ ಭೈರವಿ ರಾಗದಲ್ಲಿ ತೇಲಿಬಂತು. ಈ ರಾಗಕ್ಕೆ ಆಕರ್ಷಕ ‘ತಾನ್‌’ಗಳನ್ನೂ ಸೇರಿಸಿದಾಗ ‘ರಾಗ–ತಾನ–ಭಾವ–ಲಯ’ ಎಲ್ಲವೂ ಒಂದಕ್ಕೊಂದು ಮಿಳಿತಗೊಂಡು ಅಲ್ಲಿ ಅದ್ಭುತ ರಸಪಾಕವೇ ಸೃಷ್ಟಿಯಾಗಿತ್ತು.

ಲಕ್ಷ್ಮಿ ಎಂದಿಗೂ ನಮಗೆ ಶ್ರೀರಕ್ಷೆ. ಈಕೆ ಸದಾ ನಮ್ಮೊಂದಿಗೆ ಇರಲಿ ಎಂದೇ ಪುರಂದರ ದಾಸರು ‘ಭಾಗ್ಯದ ಲಕ್ಷ್ಮಿ ಬಾರಮ್ಮ..’ ದೇವರನಾಮ ರಚಿಸಿದರೆಂದು ಕಾಣುತ್ತದೆ. ಯಾವುದೇ ಗಾಯಕರಿರಲಿ, ವಾದಕರಿರಲಿ, ರೊಕ್ಕದ ಅಧಿದೇವತೆಗೆ ಸದಾ ಶರಣು ಶರಣು. ಕ್ಲಾರಿಯೊನೆಟ್‌ನಲ್ಲಿ ಲಕ್ಷ್ಮಿ ಅವತರಿಸಿದಾಗ ಕೇಳುಗರೂ ಶರಣೋ ಶರಣು..!

ಅಂತ್ಯದಲ್ಲಿ ಸುಪ್ರಸಿದ್ಧ ‘ಭೈರವಿ’ ರಾಗದಲ್ಲಿ ಮೂರು ರಚನೆಗಳನ್ನು ಕೇಳುವ ಸುಯೋಗ! ಬಸವಣ್ಣನವರ ‘ಚಕೋರಂಗೆ ಚಂದ್ರಮನ ಬೆಳಕಿನಾ ಚಿಂತೆ..’, ‘ಮತ್‌ಜಾ ಮತ್‌ಜಾ ಜೋಗಿ’ ಎಂಬ ಬಂದೀಶ್‌, ದಾಸರ ಪದ ತಂಬೂರಿ ಮೀಟಿದವ.. ಒಂದೊಂದಾಗಿ ‘ನಾದ ಮುತ್ತು’ ಸುರಿಸಿತು. ಅದಾಗಿ ರೇವತಿ ರಾಗದಲ್ಲಿ ‘ಶ್ರೀನಿವಾಸ ಗೋವಿಂದಾ..’ ಎನ್ನುತ್ತಾ ಕಛೇರಿಯನ್ನು ಸಮಾಪ್ತಿಗೊಳಿಸಿದರು. ಸಹವಾದನದಲ್ಲಿ ಇವರ ಸುಪುತ್ರ ವೆಂಕಟೇಶ್‌ ವಡವಾಟಿ, ತಬಲಾದಲ್ಲಿ ಸುದರ್ಶನ ಅಸ್ಕಿಹಾಳ ಸಹಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.