ADVERTISEMENT

‘ಸೇವ್‌ ಕ್ಯಾನ್ಸರ್‌ ಕಿಡ್ಸ್‌’

ಹೇಮಾ ವೆಂಕಟ್
Published 15 ಫೆಬ್ರುವರಿ 2019, 20:00 IST
Last Updated 15 ಫೆಬ್ರುವರಿ 2019, 20:00 IST
  ಗಾಯಕಿ ಡಾ.ಶಮಿತಾ ಮಲ್ನಾಡ್‌ 
  ಗಾಯಕಿ ಡಾ.ಶಮಿತಾ ಮಲ್ನಾಡ್‌    

ಕಿದ್ವಾಯಿಯ ಕ್ಯಾನ್ಸರ್ ಮಕ್ಕಳ ವಿಭಾಗದಲ್ಲಿ ನೂರು ಮಕ್ಕಳು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ! ಈ ಮಕ್ಕಳ ನೋವಿಗೆ ಕುಟುಂಬದ ಆರ್ಥಿಕ ಸಮಸ್ಯೆಗೆ ಸಮಾಜ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಹತ್ತಾರು ಉದಾಹರಣೆಗಳು ಸಿಗುತ್ತವೆ. ಆದರೆ, ಅದೊಂದು ಶಾಶ್ವತ ನಿಧಿಯ ರೂಪದಲ್ಲಿದ್ದರೆ ಕ್ಯಾನ್ಸರ್‌ ವಿರುದ್ಧದ ಹೋರಾಟಕ್ಕೆ ನೆರವಾಗಬಹುದು.

ಈ ದೂರದರ್ಶಿ ಯೋಚನೆಯಿಂದಗಾಯಕಿ ಶಮಿತಾ ಮಲ್ನಾಡ್‌, ತಮ್ಮ ‘ಸ್ವರಸನ್ನಿಧಿ ಟ್ರಸ್ಟ್‌’ ಮೂಲಕ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ನೆರವಾಗುವ ಶಾಶ್ವತ ಯೋಜನೆಯೊಂದನ್ನು ‘ಸೇವ್‌ ಕ್ಯಾನ್ಸರ್‌ ಕಿಡ್ಸ್‌’ ಅಭಿಯಾನದ ಮೂಲಕ ಸಾಕಾರಗೊಳಿಸಲು ಹೊರಟಿದ್ದಾರೆ. ಫೆ.16ರಂದು ಕಿದ್ವಾಯಿ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್‌ ಪೀಡಿತ ಮಕ್ಕಳ ವಿಭಾಗದಲ್ಲಿ ಈ ಅಭಿಯಾನಕ್ಕೆ ಸಂಗೀತಮಯ ಚಾಲನೆ ನೀಡಲಿದ್ದಾರೆ.

ಶಮಿತಾ ಅವರು, ‘ಮೆಟ್ರೊ’ ಜೊತೆ ತಮ್ಮ ಯೋಜನೆಯ ರೂಪುರೇಷೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

‘ಇತ್ತೀಚೆಗೆ ಆದಿಚುಂಚನಗಿರಿ ಮಠದ ಸಹಯೋಗದಲ್ಲಿ ಕೊಡಗು ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ಅರಮನೆ ಮೈದಾನದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದೆವು. ₹75 ಲಕ್ಷದಷ್ಟು ಹಣ ಸಂಗ್ರಹವಾಗಿತ್ತು. ಈ ನಿಟ್ಟಿನಲ್ಲಿ ಯೋಚಿಸಿದಾಗ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ಶಾಶ್ವತ ನೆರವಿನ ಯೋಜನೆಯೊಂದನ್ನು ರೂಪಿಸುವ ಯೋಚನೆ ಬಂತು’ ಎಂದು ಶಮಿತಾ ಹೇಳುತ್ತಾರೆ.

‘ಕಲಾವಿದರು ಹಣವನ್ನೇ ಪಡೆಯದೆ ಕಾರ್ಯಕ್ರಮ ನೀಡಿ ಪ್ರೋತ್ಸಾಹಿಸಲು ಮುಂದೆ ಬಂದಿದ್ದಾರೆ. ಪ್ರತಿ ತಿಂಗಳು ಕನಿಷ್ಠ ಹತ್ತು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಆರ್ಥಿಕ ನೆರವು ನೀಡುವುದು ಗುರಿ. ಕ್ಯಾನ್ಸರ್‌ ಪೀಡಿತ ಮಕ್ಕಳ ಹೆತ್ತವರಿಗೆ ಆಪ್ತಸಮಾಲೋಚನೆ ಆಯೋಜಿಸುವ ಉದ್ದೇಶವೂ ಇದೆ. ಇದೇ ಏಪ್ರಿಲ್‌ನಲ್ಲಿ ಅಮೆರಿಕದಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ನಿಧಿ ಸಂಗ್ರಹ ಮಾಡಲಿದ್ದೇವೆ. ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ.ರಾಮಚಂದ್ರ ನಮ್ಮೊಂದಿಗಿದ್ದಾರೆ. ಶಾಶ್ವತ ನಿಧಿಯ ಕುರಿತಂತೆ ಅವರೇ ಯೋಜನೆ ರೂಪಿಸಲಿದ್ದಾರೆ’ ಎಂದರು.

ಸ್ವರಸನ್ನಿಧಿ ಟ್ರಸ್ಟ್‌ನ ಒಂದು ಸಹ ಸಂಸ್ಥೆಯಾಗಿ ಸೇವ್‌ ಕ್ಯಾನ್ಸರ್‌ ಕಿಡ್ಸ್‌ ಅಭಿಯಾನ ಕಾರ್ಯನಿರ್ವಹಿಸಲಿದೆ. ಈ ಕಾರ್ಯಕ್ಕೆ ಕೈ ಜೋಡಿಸುವ ಮನಸ್ಸಿರುವ ದಾನಿಗಳನ್ನು ಸದಸ್ಯರನ್ನಾಗಿ ನೋಂದಣಿ ಮಾಡಿಕೊಳ್ಳಲಿದ್ದೇವೆ. ಅವರು ಪ್ರತಿ ತಿಂಗಳು ನಿಧಿಗೆ ಹಣ ನೀಡಲಿದ್ದಾರೆ. ನೂರು ರೂಪಾಯಿಯಿಂದ ಗರಿಷ್ಠ ಎಷ್ಟಾದರೂ ನೀಡಬಹುದು. ಈ ಹಣವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಕ್ಯಾನ್ಸರ್‌ ಮಕ್ಕಳ ಚಿಕಿತ್ಸೆಗೆ ಶಾಶ್ವತ ಯೋಜನೆ ರೂಪಿಸಲಾಗುವುದು’ ಎಂದು ವಿವರಿಸಿದರು.

ಸೇವ್‌ ಕ್ಯಾನ್ಸರ್‌ ಕಿಡ್ಸ್‌ ಅಭಿಯಾನ ಉದ್ಘಾಟನೆ: ಅಧ್ಯಕ್ಷತೆ– ಪ್ಯಾರಾಮೌಂಟ್‌ ನ್ಯೂಟ್ರೀಷಿಯನ್ಸ್‌ ಇಂಡಿಯಾ ಅಧ್ಯಕ್ಷ ಕೃಷ್ಣಪ್ಪ, ಉದ್ಘಾಟನೆ– ಕೃಷ್ಣೇಗೌಡ, ನೀಲಕಂಠ ಆರ್‌. ಗೌಡ, ಗೌರವಾರ್ಪಣೆ – ಡಾ.ಸಿ. ರಾಮಚಂದ್ರ ಮತ್ತು ಡಾ.ಎಲ್‌. ಅಪ್ಪಾಜಿ ಗೌಡ, ಅತಿಥಿ– ಡಾ.ಬಿ.ಕೃಷ್ಣ, ವಾಣಿ ಹಿರೇಮಠ್, ವಿಶೇಷ ಉಪಸ್ಥಿತಿ– ಅನಿರುದ್ಧ್‌ ಜಮದಗ್ನಿ, ವಿಶೇಷ ಅತಿಥಿ– ನಟ ವಿನೋದ್‌ ಪ್ರಭಾಕರ್, ಗಾಯನ– ಶಮಿತಾ ಮಲ್ನಾಡ್‌, ಸಂತೋಷ್‌ ದೇವ್, ಹೇಮಂತ್‌, ಅದ್ವೈತ್‌ ಹೆಗ್ಡೆ, ಷಡ್ಜ ಹೆಗ್ಡೆ, ಸಂಜೆ 5.30, ಕಿದ್ವಾಯಿ ಕ್ಯಾನ್ಸರ್‌ ಸಂಸ್ಥೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.