ADVERTISEMENT

ಕೋಗಿಲೆ ಕಂಠದ ಗಾಯಕಿ ರಕ್ಷಿತಾ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:30 IST
Last Updated 1 ಫೆಬ್ರುವರಿ 2020, 19:30 IST
ರಕ್ಷಿತಾ ಸುರೇಶ್‌
ರಕ್ಷಿತಾ ಸುರೇಶ್‌   

ಕೋಗಿಲೆಯಂತಹ ಸುಮಧುರ ಕಂಠ ಹೊಂದಿರುವ ರಕ್ಷಿತಾ ಸುರೇಶ್‌ ಅವರ ಗಾಯನಕ್ಕೆ ತಲೆದೂಗದ ಸಂಗೀತ ರಸಿಕರಿಲ್ಲ. ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಎ.ಆರ್‌.ರೆಹಮಾನ್‌ ಅಂತಹ ದಿಗ್ಗಜರೊಟ್ಟಿಗೆ ಕೆಲಸ ಮಾಡಿರುವ ರಕ್ಷಿತಾ,ತಮಿಳು, ಕನ್ನಡ ಹಾಗೂ ತೆಲುಗು ಚಲನಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಸದ್ಯ, ಚೆನ್ನೈನಲ್ಲಿ ನೆಲೆಸಿರುವ ಅವರು ಮೈಸೂರಿನ ಹುಡುಗಿ ಎಂಬುದು ವಿಶೇಷ.‌

ಸುರೇಶ್‌ ವಿಶ್ವನಾಥನ್ ಹಾಗೂ ಅನಿತಾ ಸುರೇಶ್‌ ಅವರ ಪುತ್ರಿ ರಕ್ಷಿತಾ. 2018ರವರೆಗೆ ಸರಸ್ವತಿಪುರಂನ 7ನೇ ಮುಖ್ಯರಸ್ತೆಯಲ್ಲಿ ವಾಸವಾಗಿದ್ದರು. ತಾಯಿ ಸಾಫ್ಟ್‌ವೇರ್‌ ಎಂಜಿನಿಯರ್‌. ರಕ್ಷಿತಾ 4ನೇ ವಯಸ್ಸಿನಲ್ಲಿದ್ದಾಗಲೇ ಸಂಗೀತದ ಮೇಲೆ ಒಲವು ಬೆಳೆಸಿಕೊಂಡಿದ್ದಳು. ಮಗಳ ಆಸಕ್ತಿಯನ್ನು ಗಮನಿಸಿದ್ದ ಪೋಷಕರು ಸುಗಮ ಸಂಗೀತದಲ್ಲಿ ಹೆಸರು ಮಾಡಿರುವ ಡಾ.ಸುನೀತಾ ಚಂದ್ರಕುಮಾರ್‌ ಅವರ ಬಳಿ ಸಂಗೀತಾಭ್ಯಾಸಕ್ಕೆ ಕಳುಹಿಸಿದ್ದರು. ಗುರುಗಳಿಂದ ಸಂಗೀತದ ಪಟ್ಟುಗಳನ್ನು ಕರಗತ ಮಾಡಿಕೊಂಡಳು.

ರೋಟರಿ ಪಶ್ಚಿಮ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಮುಗಿಸಿದ ಅವರು, ಸದ್ವಿದ್ಯಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿದ್ದರು. 2008ರಲ್ಲಿ ಸುವರ್ಣ ವಾಹಿನಿಯಲ್ಲಿ ನಡೆದ ‘ಲಿಟಲ್‌ ಸ್ಟಾರ್‌ ಸಿಂಗರ್‌’ ಹಾಗೂ 2009ರಲ್ಲಿ ಈಟಿವಿ ಕನ್ನಡದ ‘ರಿದಂ ತಧೀಂ’ ಶೋಗಳಲ್ಲಿ ಗೆಲುವು ಸಾಧಿಸಿದ್ದರು. ಸರಸ್ವತಿಪುರಂನ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದ ವೇಳೆ, ತಮಿಳಿನ ವಿಜಯ ಟಿ.ವಿ.ಯಲ್ಲಿ 2018ರಲ್ಲಿ ಪ್ರಸಾರವಾದ ‘ಸೂಪರ್‌ ಸಿಂಗರ್‌–6’ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಎ.ಆರ್‌.ರೆಹಮಾನ್‌ ಪಾಲ್ಗೊಂಡಿದ್ದರು. ಎಲ್ಲ ಸ್ಪರ್ಧಿಗಳನ್ನು ಸರಿಗಟ್ಟಿದ್ದ ರಕ್ಷಿತಾ, ಈ ಶೋನಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿದ್ದರು.

ADVERTISEMENT

ಇದಕ್ಕೂ ಮುನ್ನ 2015ರಲ್ಲಿ ತೆರೆಕಂಡ ತೆಲುಗಿನ ‘ಯವಡೇ ಸುಬ್ರಹ್ಮಣ್ಯಂ’ ಚಿತ್ರದ ಗೀತೆಯೊಂದಕ್ಕೆ ರಕ್ಷಿತಾ ಧ್ವನಿಯಾಗಿದ್ದರು. ಈ ಚಿತ್ರಕ್ಕೆ ಇಳಯರಾಜ ಸಂಗೀತ ನಿರ್ದೇಶಕರು. ಇದಲ್ಲದೆ, ಅನೇಕ ಆಲ್ಬಮ್‌ಗಳಿಗೆ ಹಾಡಿದ್ದರು. ರಿಯಾಲಿಟಿ ಶೋನಲ್ಲಿ ದ್ವಿತೀಯ ಸ್ಥಾನ ಪಡೆಯುತ್ತಿದ್ದಂತೆ ಮತ್ತಷ್ಟು ಅವಕಾಶಗಳು ಅರಸಿ ಬಂದವು.

ಅನೇಕ ಲೈವ್‌ ಶೋ ಹಾಗೂ ಆಲ್ಬಮ್‌ಗಳಲ್ಲಿ ಹಾಡಲು ಅವಕಾಶ ಬಂದಿದ್ದರಿಂದ ಮೈಸೂರಿನಿಂದ ಚೆನ್ನೈಗೆ ಪ್ರಯಾಣ ಮಾಡುವುದು ಕಷ್ಟವಾದ್ದರಿಂದ ಇಡೀ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತು.

‘ಮಗಳ ಭವಿಷ್ಯದ ದೃಷ್ಟಿಯಿಂದ ಚೆನ್ನೈಗೆ ಸ್ಥಳಾಂತರ ಗೊಂಡಿದ್ದೇವೆ. ಇಲ್ಲಿ ಆಕೆಯ ಬೆಳವಣಿಗೆಗೆ ಪೂರಕ ವಾತಾವರಣ ಇದೆ. 2019ರಲ್ಲಿ ಚೆನ್ನೈನಲ್ಲಿ ನಡೆದ ಎ.ಆರ್‌.ರೆಹಮಾನ್‌ ಅವರ ಸಂಗೀತ ಕಛೇರಿಯಲ್ಲಿ ಸಹ ಹಾಡಿದ್ದಾಳೆ. ಸದ್ಯ, ಐದಾರು ಚಿತ್ರಗಳಲ್ಲಿ ಹಾಡಿದ್ದಾಳೆ’ ಎನ್ನುತ್ತಾರೆ ರಕ್ಷಿತಾ ತಾಯಿ ಅನಿತಾ ಸುರೇಶ್‌.

ರಕ್ಷಿತಾ ಕನ್ನಡ, ತಮಿಳು, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ‘ನಮ್ಮದು ಅಯ್ಯರ್‌ ಕುಟುಂಬ. ಹೀಗಾಗಿ, ಮನೆಯಲ್ಲಿ ತಮಿಳು, ಕನ್ನಡ ಮಾತನಾಡುತ್ತಿದ್ದರು. ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯನ್ನೂ ಕಲಿತುಕೊಂಡೆ. ಹೀಗಾಗಿ, ತಮಿಳು ಟಿ.ವಿ ಶೋನಲ್ಲಿ ಭಾಗವಹಿಸಲು ಕಷ್ಟವಾಗಲಿಲ್ಲ’ ಎನ್ನುತ್ತಾರೆ ರಕ್ಷಿತಾ.

‘ಎ.ಆರ್‌.ರೆಹಮಾನ್‌, ಇಳಯರಾಜ, ಆಶಾ ಭೋಸ್ಲೆ, ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಎಸ್‌.ಜಾನಕಿ, ಪಿ.ಬಿ.ಶ್ರೀನಿವಾಸ್‌, ಬಾಲಮುರಳಿಕೃಷ್ಣ, ಕೆ.ಎಸ್‌.ಚಿತ್ರ, ಶಂಕರ್‌ ಮಹಾದೇವನ್‌, ಕಮಲ್‌ ಹಾಸನ್‌ ಸೇರಿದಂತೆ ಅನೇಕ ಪ್ರಸಿದ್ಧ ಗಾಯಕರು ಹಾಗೂ ಚಿತ್ರ ನಟರ ಸಮ್ಮುಖದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು, ನನ್ನ ಜೀವನದ ಮರೆಯಲಾಗದ ಕ್ಷಣಗಳು’ ಎಂದು ಸ್ಮರಿಸುತ್ತಾರೆ.

25 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ

ರಕ್ಷಿತಾ ಅವರು ದೇಶದ ಅನೇಕ ನಗರಗಳಲ್ಲಿ ಅಲ್ಲದೆ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಕೆನಡಾ, ಯುಎಇ, ಫ್ರಾನ್ಸ್‌, ದಕ್ಷಿಣ ಆಫ್ರಿಕಾ, ಸಿಂಗಪುರ, ಕುವೈತ್‌, ಶ್ರೀಲಂಕಾ, ಅಬುಧಾಬಿ, ಮಲೇಷ್ಯಾ ಸೇರಿದಂತೆ 25 ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಇದಲ್ಲದೆ, ತಮಿಳಿನ ‘ವಂತಾ ರಾಜವಧಾನ್‌ ವರುವೆನ್‌’, ಕನ್ನಡದ ‌‘ಮೇಘಾ ಅಲಿಯಾಸ್‌ ಮ್ಯಾಗಿ’ ಚಿತ್ರಗಳ ಹಾಡುಗಳಿಗೂ ಹಿನ್ನೆಲೆ ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.