ADVERTISEMENT

Zakir Hussain | ಪ್ರತಿ ಕಛೇರಿಗೆ ಮುನ್ನ ಅಧೀರರಾಗುತ್ತಿದ್ದ ಹುಸೇನ್

ಪಿಟಿಐ
Published 17 ಡಿಸೆಂಬರ್ 2024, 2:01 IST
Last Updated 17 ಡಿಸೆಂಬರ್ 2024, 2:01 IST
ಮಂಗಳೂರಿನಲ್ಲಿ 2007ರ ಡಿಸೆಂಬರ್‌ 1ರಂದು ಕರಾವಳಿ ಉತ್ಸವದಲ್ಲಿ ಸಾಂತೂರ್‌ ದಂತಕತೆ ಪಂಡಿತ್‌ ಶಿವಕುಮಾರ್‌ ಶರ್ಮಾ ಅವರೊಂದಿಗೆ ಜಾಕಿರ್‌ ಹುಸೇನ್‌  ಅವರ‌ ಜುಗಲ್‌ಬಂದಿ ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌
ಮಂಗಳೂರಿನಲ್ಲಿ 2007ರ ಡಿಸೆಂಬರ್‌ 1ರಂದು ಕರಾವಳಿ ಉತ್ಸವದಲ್ಲಿ ಸಾಂತೂರ್‌ ದಂತಕತೆ ಪಂಡಿತ್‌ ಶಿವಕುಮಾರ್‌ ಶರ್ಮಾ ಅವರೊಂದಿಗೆ ಜಾಕಿರ್‌ ಹುಸೇನ್‌  ಅವರ‌ ಜುಗಲ್‌ಬಂದಿ ಚಿತ್ರ: ಪ್ರಜಾವಾಣಿ ಆರ್ಕೈವ್ಸ್‌    

ನವದೆಹಲಿ: ಜಾಕೀರ್ ಹುಸೇನ್ ತಮ್ಮ ಏಳನೇ ವಯಸ್ಸಿನಲ್ಲಿ ಮೊದಲ ಸಂಗೀತ ಕಛೇರಿ ನೀಡಿದವರು. ಆರು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಲೋಕದಲ್ಲಿ ಸಾಮ್ರಾಟನಂತೆ ಮೆರೆದವರು. ಅವರ ಬೆರಳುಗಳು ತಬಲಾ ಮೇಲೆ ನರ್ತಿಸುತ್ತಿದ್ದರೆ, ಕೇಳುಗರು ಮಂತ್ರಮುಗ್ಧರಾಗುತ್ತಿದ್ದರು. ತಬಲಾ ಅನ್ನು ಜನಪ್ರಿಯಗೊಳಿಸಿದವರು, ಪಶ್ಚಿಮದಲ್ಲಿಯೂ ಅದಕ್ಕೆ ಮನ್ನಣೆ ತಂದುಕೊಟ್ಟವರು ಜಾಕೀರ್ ಹುಸೇನ್. ‘ಶಕ್ತಿ’ ಎನ್ನುವ ಫ್ಯೂಷನ್ ಗುಂಪನ್ನು ಅವರು ಸ್ಥಾಪಿಸಿದ್ದರು. ಇಷ್ಟಾದರೂ ಅವರು ಪ್ರತಿ ಸಂಗೀತ ಕಛೇರಿಗೆ ಹೋಗುವ ಮುನ್ನ ಅಧೀರರಾಗುತ್ತಿದ್ದರು. 

ಈ ವರ್ಷದ ಆರಂಭದಲ್ಲಿ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಅವರು ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದರು. ‘ನಾನು ಅಧೀರನಾಗದಿದ್ದರೆ ನನ್ನ ಕಛೇರಿ ಬಗ್ಗೆ ಚಿಂತೆ ಆರಂಭವಾಗುತ್ತಿತ್ತು’ ಎಂದು ಪಂಡಿತ್ ರವಿಶಂಕರ್ ಹೇಳಿದ್ದನ್ನು ಅವರು ಉಲ್ಲೇಖಿಸಿದ್ದರು. ಸಂಗೀತಗಾರನ ಗಮನ ಶೇ 100ರಷ್ಟು ಕಛೇರಿ ಮೇಲೇ ಇಲ್ಲದಿದ್ದರೆ, ಹೇಗೋ ನಡೆಯುತ್ತದೆ ಎನ್ನುವ ಭಾವನೆ ಹೊಂದಿದ್ದರೆ ಮಾತ್ರ ಸಂಗೀತಗಾರ ಅಧೀರನಾಗದೇ ಇರಲು ಸಾಧ್ಯ ಎನ್ನುವುದು ಜಾಕೀರ್ ಹುಸೇನ್ ಅವರ ಅಭಿಪ್ರಾಯ. 

‘ನಿಮ್ಮ ಜೀವನದಲ್ಲಿ ನೀವು ಒಂದು ಘಟ್ಟ ಮುಟ್ಟುತ್ತೀರಿ. ಜನಪ್ರಿಯತೆ ಗಳಿಸುತ್ತೀರಿ, ಒಂದು ಸ್ಥಾನಕ್ಕೆ ಏರುತ್ತೀರಿ. ನೀವು ಹೀಗೆ ಮೇಲೇರಿದಂತೆಲ್ಲ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಜನರ ನಿರೀಕ್ಷೆಯ ಮಟ್ಟವನ್ನು ನೀವು ಮುಟ್ಟಬೇಕಾಗುತ್ತದೆ. ಸಣ್ಣ ಆತಂಕ ಅಥವಾ ಅಧೀರತೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗುತ್ತದೆ’ ಎನ್ನುವುದು ಅವರ ಅನಿಸಿಕೆ.       

ADVERTISEMENT

‘ಸಂಗೀತ ಕಛೇರಿ ನೀಡುವುದನ್ನು ಅವರು ಭಾರತದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಕ್ಕೆ ಹೋಲಿಸುತ್ತಿದ್ದರು. ಭಾರತ ಕ್ರಿಕೆಟ್ ತಂಡವು ಸ್ವದೇಶದಲ್ಲಿ ಕ್ರಿಕೆಟ್ ಪಂದ್ಯ ಆಡುವಾಗ ಪ್ರತಿಸ್ಪರ್ಧಿ ತಂಡಕ್ಕಿಂತಲೂ 100 ಪಟ್ಟು ಹೆಚ್ಚು ಒತ್ತಡ ಅವರ ಮೇಲಿರುತ್ತದೆ. ಈಗಲೂ ನನಗೆ ಕಛೇರಿ ನೀಡುವ ಮುಂಚೆ ಸಣ್ಣ ಆತಂಕ ಅಥವಾ ಅಧೀರತೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿ ನಾನು ನನ್ನ ಅದೃಷ್ಟದ ತಾರೆಗಳಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದಿದ್ದರು.

ಪ್ರಖ್ಯಾತ ತಬಲಾ ವಾದಕ ಅಲ್ಲಾ ರಖಾ ಹುಸೇನ್ ಅವರ ಮಗನಾದ ಜಾಕೀರ್ ಹುಸೇನ್ ಅವರಿಗೆ ಸಹಜವಾಗಿಯೇ ಚಿಕ್ಕಂದಿನಿಂದಲೇ ಸಂಗೀತದ ಸಂಸ್ಕಾರ ಸಿಕ್ಕಿತು. ಏಳು ಅಥವಾ ಎಂಟನೆಯ ವಯಸ್ಸಿನಿಂದಲೆ ಅವರು ತಮ್ಮ ತಂದೆಯೊಂದಿಗೆ ಆಶಾ ಬೋಂಸ್ಲೆ, ಲತಾ ಮಂಗೇಷ್ಕರ್, ಮಹಮ್ಮದ್ ರಫಿ ಅವರ ಧ್ವನಿಮುದ್ರಣದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತಂದೆ ಮಗನಿಗೆ ಖಂಜರ ನೀಡುತ್ತಿದ್ದರು. ಇದು ಅವರಲ್ಲಿ ಮಿಶ್ರ ಸಂಗೀತದ ಪ್ರಜ್ಞೆ ಬೆಳೆಯಲು ಕಾರಣವಾಯಿತು.  

‘ಸಂಗೀತ ಎಂದರೆ ಸಂಗೀತ. ಅದು ಭಾರತೀಯ ಸಂಗೀತ, ಇನ್ನೊಂದು ಬೇರೆ ಸಂಗೀತ ಇದೆಲ್ಲ ಇರಲ್ಲ. ಮುಂದೆ ನಾನು ಭಾರತದ ಹೊರಗಿನ ಸಂಗೀತಗಾರರೊಂದಿಗೆ ಕೆಲಸ ಮಾಡಲು ಆರಂಭಿಸಿದಾಗ ಅದು ಅಸಹಜ ಅನ್ನಿಸಲೇ ಇಲ್ಲ’ ಎಂದು ಹೇಳಿದ್ದರು.

‘ನಾನು ತಬಲಾ ಕೊಟ್ಟೆ, ಅವರು ಜೀವನ ಕೊಟ್ಟರು’

ಮುಂಬೈ: ‘ಹಿಂದಿನಂತೆ ನಾನು ಇನ್ನು ತಬಲಾ ಮಾಡಲಾರೆ’

ಹೀಗೆಂದವರು ಹರಿದಾಸ್ ವಟ್ಕರ್. ಉಸ್ತಾದ್ ಜಾಕಿರ್ ಹುಸೇನ್ ಅವರಿಗೆ ತಬಲಾ ಮಾಡಿಕೊಡುತ್ತಿದ್ದವರು ಹರಿದಾಸ್.

ಮುಂಬೈನ ಕಂಜುರ್‌ಮಾರ್ಗ್‌ನಲ್ಲಿ ತಮ್ಮ ವರ್ಕ್‌ಶಾಪ್‌ನಲ್ಲಿ ಮಾತನಾಡಿದ ಅವರು, ‘ಜಾಕಿರ್ ಅವರ ಸಾವಿಗೆ ಕಂಬನಿ ಮಿಡಿದರು. ‘ನಾನು ಉಸ್ತಾದ್ ಅಲ್ಲಾ ರಖಾ ಅವರಿಗೆ ತಬಲಾ ಮಾಡಿಕೊಡಲು ಆರಂಭಿಸಿದೆ. 1998ರಿಂದ ಜಾಕಿರ್ ಹುಸೇನ್ ಅವರಿಗೆ ತಬಲಾ ಮಾಡಿಕೊಡತೊಡಗಿದೆ. ತಮಗೆ ಯಾವ ರೀತಿಯ ತಬಲಾ ಬೇಕು, ಯಾವಾಗ ಬೇಕು ಎನ್ನುವ ಬಗ್ಗೆ ಅವರು ಬಹಳ ಖಚಿತತೆ ಹೊಂದಿದ್ದರು. ವಾದ್ಯದ ಶ್ರುತಿಯ ಬಗ್ಗೆ ಅವರು ಹೆಚ್ಚು ಗಮನ ಹರಿಸುತ್ತಿದ್ದರು’ ಎಂದರು.

ತಾವು ಜಾಕಿರ್ ಅವರಿಗೆ ಲೆಕ್ಕವಿಲ್ಲದಷ್ಟು ತಬಲಾಗಳನ್ನು ಮಾಡಿಕೊಟ್ಟಿದ್ದಾಗಿ ಹೇಳಿದರು. ಜಾಕಿರ್ ಬಳಿ ಇದ್ದ ಹಳೆಯ ತಬಲಾಗಳನ್ನು ಹರಿದಾಸ್ ರಿಪೇರಿ ಮಾಡಿಕೊಡುತ್ತಿದ್ದರು.

ಈ ವರ್ಷದ ಆಗಸ್ಟ್‌ನಲ್ಲಿ ಗುರು ಪೂರ್ಣಿಮೆಯ ದಿನ ಹರಿದಾಸ್ ಜಾಕಿರ್ ಅವರನ್ನು ಭೇಟಿ ಮಾಡಿದ್ದರು. ಅದೇ ಅವರ ಕೊನೆಯ ಭೇಟಿ ಆಯಿತು. ‘ನಾನು ಅವರಿಗೆ ತಬಲಾ ಕೊಟ್ಟೆ. ಅವರು ನನಗೆ ಜೀವನ ಕೊಟ್ಟರು’ ಎಂದು ಕೃತಜ್ಞತೆಯಿಂದ ಜಾಕಿರ್ ಅವರನ್ನು ಸ್ಮರಿಸಿದರು ಹರಿದಾಸ್.

ಮಗುವಿನ ಕಿವಿಗೆ ‘ಭೋಲ್‌’

ತಮ್ಮ ತಂದೆ ಅಲ್ಲಾ ರಖಾ ತಮಗೆ ಹಸುಗೂಸು ಆಗಿದ್ದಾಗಲೇ ಹೇಗೆ ತಬಲಾದ ತಾಳವನ್ನು ಬೋಧಿಸಿದ್ದರು ಎನ್ನುವುದನ್ನು ಎಂಟು ವರ್ಷದ ಹಿಂದೆ ಜಾಕಿರ್ ಹುಸೇನ್ ಹೇಳಿಕೊಂಡಿದ್ದರು.

‘ಹುಟ್ಟಿದ ನಂತರ ನನ್ನನ್ನು ಮನೆಗೆ ಕರೆತರಲಾಯಿತು. ಮಗುವಿನ ಕಿವಿಯಲ್ಲಿ ತಂದೆ ಪ್ರಾರ್ಥನೆ ಮಾಡುವುದು ಸಂಪ್ರದಾಯ. ತಂದೆ ನನ್ನನ್ನು ತಮ್ಮ ತೋಳಿನಲ್ಲಿ ತೆಗೆದುಕೊಂಡರು. ನನ್ನ ಕಿವಿಯ ಬಳಿ ತಮ್ಮ ಬಾಯಿ ಇಟ್ಟು, ಪ್ರಾರ್ಥನೆ ಮಾಡುವ ಬದಲು ತಬಲಾ ಭೋಲ್‌ಗಳನ್ನು (ತಾಳಾಕ್ಷರ) ಉಸುರಿದರು. ಕೋಪಗೊಂಡ ನನ್ನ ತಾಯಿ, ಇದೇನು ಮಾಡುತ್ತಿರುವಿರಿ, ನೀವು ಮಗುವಿನ ಕಿವಿಯಲ್ಲಿ ಹೇಳಬೇಕಿರುವುದು ಮಂತ್ರ ಎಂದರು. ಅದಕ್ಕೆ ತಂದೆ, ಇದೇ ನನ್ನ ಮಂತ್ರ, ನಾನು ಪ್ರಾರ್ಥಿಸುವುದು ಹೀಗೇ ಎಂದಿದ್ದರು’ ಎಂದು ಸ್ಮರಿಸಿದ್ದರು ಜಾಕಿರ್ ಹುಸೇನ್.

ಶ್ರದ್ಧಾವಂತ ಮುಸ್ಲಿಂ ಆಗಿದ್ದ ಜಾಕಿರ್ ಹುಸೇನ್, ತಾನು ಸರಸ್ವತಿ ಮತ್ತು ಗಣೇಶನ ಆರಾಧಕ ಎಂದಿದ್ದರು.

ಬೆಲೆ ಕಟ್ಟಲಾಗದ ₹5
12 ವರ್ಷದವರಿದ್ದಾಗ ಜಾಕಿರ್ ಹುಸೇನ್ ಅವರು ತಂದೆ ಜತೆ ಒಂದು ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದರು. ಪಂಡಿತ್ ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್, ಬಿಸ್ಮಿಲ್ಲಾ ಖಾನ್, ಪಂಡಿತ್ ಶಾಂತಪ್ರಸಾದ್, ಪಂಡಿತ್ ಕಿಶನ್ ಮಹಾರಾಜ್ ಮುಂತಾದ ದಿಗ್ಗಜರು ಭಾಗವಹಿಸಿದ್ದ ಕಛೇರಿ ಅದು. ಆ ಕಾರ್ಯಕ್ರಮದ ಸಂಭಾವನೆಯಾಗಿ ಜಾಕಿರ್ ಅವರಿಗೆ ₹5 ಸಿಕ್ಕಿತ್ತು. ಅದರ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ‘ನಾನು ನನ್ನ ಜೀವನದಲ್ಲಿ ಸಾಕಷ್ಟು ದುಡಿದಿದ್ದೇನೆ. ಆದರೆ, ಆ ₹5 ನನಗೆ ಬಹಳ ಮೌಲ್ಯಯುತವಾದದ್ದು’ ಎಂದು ತಬಲಾ ಮಾಂತ್ರಿಕ ನುಡಿದಿದ್ದರು.

ಸಿತಾರ್‌ ಮಾಂತ್ರಿಕ ಪಂಡಿತ್‌ ರವಿಶಂಕರ್‌  ಅವರೊಂದಿಗೆ ನವದೆಹಲಿಯಲ್ಲಿ 1995ರ ಫೆಬ್ರುವರಿ 27ರಂದು ಜಾಕಿರ್‌ ಹುಸೇನ್‌ ಅವರು ಕಛೇರಿ ನೀಡಿದ್ದ ಸಂದರ್ಭ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.