ADVERTISEMENT

PV Web Exclusive | ಸಂಗೀತ ಸಮಯ:‘ಸಂವಾದಿನಿ’ಯಲ್ಲಿ ಸ್ವರಸಂಗಮ!

ಸಾಥಿ, ಸೋಲೊಗಳಿಗೆ ಒಗ್ಗಿಕೊಂಡ ‘ಸಂವಾದಿನಿ’

ಉಮಾ ಅನಂತ್
Published 30 ಸೆಪ್ಟೆಂಬರ್ 2020, 2:45 IST
Last Updated 30 ಸೆಪ್ಟೆಂಬರ್ 2020, 2:45 IST
ಹಾರ್ಮೋನಿಯಂ ದಿಗ್ಗಜ ಪಂ. ರಾಮಬಾವು ಬಿಜಾಪುರೆ ಸೋಲೊ ಕಛೇರಿ ನೀಡುತ್ತಿರುವುದು (ಸಂಗ್ರಹ ಚಿತ್ರ)
ಹಾರ್ಮೋನಿಯಂ ದಿಗ್ಗಜ ಪಂ. ರಾಮಬಾವು ಬಿಜಾಪುರೆ ಸೋಲೊ ಕಛೇರಿ ನೀಡುತ್ತಿರುವುದು (ಸಂಗ್ರಹ ಚಿತ್ರ)   

ಈ ವಾದ್ಯದ ಜನಪ್ರಿಯ ಹೆಸರು ಪೇಟಿ. ಉತ್ತರಾದಿಗೆ ಇದು ಪ್ರಮುಖ ಸಾಥಿ. ದಕ್ಷಿಣಾದಿಯನ್ನೂ ಒಗ್ಗಿಸಿಕೊಂಡಿರುವ ಈ ‘ಸಂವಾದಿನಿ’ ಯಲ್ಲಿ ಮೊಳಗುವ ಸ್ವರಸಂಗಮ ಮಾತ್ರ ಅತ್ಯದ್ಭುತ. ಗಾಯನಕ್ಕೆ ಅತ್ಯಂತ ಸನಿಹವಾದ ಸಂವಾದಿನಿಯಲ್ಲಿ ಹಿಂದೂಸ್ತಾನಿ, ಕರ್ನಾಟಕ ಎರಡೂ ಶೈಲಿಯ ರಾಗ ದರ್ಶನ ಅತ್ಯಂತ ಆಪ್ಯಾಯಮಾನ.

ಹಾಗೆ ನೋಡಿದರೆ ಹಾರ್ಮೋನಿಯಂ ಮೊದಲಿಗೆ ಜಾನಪದ ಸಂಗೀತದ ಜೊತೆಗೆ ನಂಟು ಬೆಳೆಸಿಕೊಂಡಿತ್ತು. ಮುಂದೆ ಕವ್ವಾಲಿ, ಗಜಲ್‌ ಠುಮ್ರಿಗಳಲ್ಲಿ ಬಳಕೆಯಾಗತೊಡಗಿತು. ಅಲ್ಲಿಂದ ಶಾಸ್ತ್ರೀಯ ಸಂಗೀತದ ಕಡೆ ಸಂಬಂಧ ಬೆಳೆಸಿಕೊಂಡು ಇದೀಗ ಹಿಂದೂಸ್ತಾನಿ ಸಂಗೀತ ಹಾರ್ಮೋನಿಯಂ ಸಾಥಿ ಇಲ್ಲದೆ ಅಪೂರ್ಣ ಎಂಬಷ್ಟರಮಟ್ಟಿಗೆ ಬೆಳೆದಿದೆ.

ಯೂರೋಪ್‌ನಿಂದ ಅಮೆರಿಕಕ್ಕೆ ಹಬ್ಬಿತು ಹಾರ್ಮೋನಿಯಂ ನಾದ. ಶ್ರೀಮಂತ ಸಂಸ್ಕೃತಿಯ ಭಾಗವಾಗಿದ್ದ ಹಾರ್ಮೋನಿಯಂ ಅನ್ನು ಅಮೆರಿಕದ ಸಂಗೀತಜ್ಞರು ವ್ಯಾಪಕವಾಗಿ ಬಳಸಲಾರಂಭಿಸಿದರು. ಕ್ರಮೇಣ ಭಕ್ತಿಗೀತೆಗಳಿಗೂ ಹಾರ್ಮೋನಿಯಂ ಬೇಕಾಯಿತು. ರವೀಂದ್ರನಾಥ ಟಾಗೂರರಿಗೆ ಹಾರ್ಮೋನಿಯಂ ಎಂದರೆ ಬಹಳ ಅಚ್ಚುಮೆಚ್ಚಾಗಿತ್ತು. ಹಲವು ಹಾಡುಗಳನ್ನು ಸಂಯೋಜಿಸಲು ಅವರು ಹಾರ್ಮೋನಿಯಂ ಬಳಸುತ್ತಿದ್ದರು. ಶಾಸ್ತ್ರೀಯ ಸಂಗೀತಕ್ಕೂ ಇದು ಸೂಕ್ತ ಎಂಬ ಕಾರಣಕ್ಕೆ ಉಸ್ತಾದ್‌ ಬಡೆ ಗುಲಾಂ ಅಲಿಖಾನ್‌, ಬೇಗಂ ಅಖ್ತರ್‌, ಪಂ. ಭೀಮಸೇನ ಜೋಶಿ ಇದನ್ನು ಬಳಸಿದರು. ಇದಕ್ಕೆ ಕಾರಣ ಸಂಗೀತದ ಸ್ವರ ಹಾಗೂ ಲಯಕ್ಕೆ ಇದನ್ನು ಹೊಂದಿಸಿಕೊಳ್ಳಲು ಅವಕಾಶವಿದೆ ಎಂಬುದು. ಈ ಸುಷಿರ ವಾದ್ಯವನ್ನು ಕಲಿಯಲು ಸಾರಂಗಿ, ಪಿಟೀಲುಗಳಷ್ಟು ಶ್ರಮವನ್ನೂ ಪಡಬೇಕಿಲ್ಲ ಎಂಬುದು ಮನವರಿಕೆಯಾಯಿತು.

ADVERTISEMENT

ಸಮೂಹಗಾನಕ್ಕೆ ಹೇಳಿ ಮಾಡಿಸಿದ ವಾದ್ಯ. ಇದರ ನಾದ ಜೋರು. ಸಿಖ್‌ ಸಮುದಾಯದವರು ಭಜನ್‌, ಧುನ್‌, ಕೀರ್ತನೆ, ಶಬಾದ್‌ಗಳಿಗೆ ಬಳಸಿಕೊಳ್ಳಲಾರಂಭಿಸಿದರು. ಅಚ್ಚರಿಯ ಸಂಗತಿ ಎಂದರೆ ಹಾರ್ಮೋನಿಯಂನ್ನು ನಿರ್ಮಿಸಿದ್ದು ಸಂಗೀತಜ್ಞ ಅಲ್ಲ. ಕೋಪನ್‌ ಹೇಗನ್‌ ವಿಶ್ವವಿದ್ಯಾಲಯದ ಭೌತಶಾಸ್ತ್ರಜ್ಞ ಗೊತ್ತಿಲಿಬ್‌ ಕ್ರಜೆನ್‌ಸ್ಟೀನ್‌ ಎಂಬ ಶಿಕ್ಷಣ ತಜ್ಞ.
ಕರ್ನಾಟಕ ಶಾಸ್ತ್ರೀಯ ಸಂಗೀತದ ನಾಟ, ಆರಭಿ, ವರಾಳಿ ಶ್ರೀ ಮುಂತಾದ ಪಂಚರತ್ನ ಕೃತಿಗಳ ರಾಗಗಳು ಹಾರ್ಮೋನಿಯಂನಲ್ಲಿ ದಳದಳವಾಗಿ ಅರಳುತ್ತವೆ. ದಕ್ಷಿಣಾದಿಯ ರಾಗಗಳನ್ನು ಸುಲಲಿತವಾಗಿ ಪೇಟಿಯಲ್ಲಿ ನುಡಿಸಿ ಅನೇಕ ಸೋಲೊ ಕಛೇರಿ ನೀಡಿದವರು ವಿದ್ವಾನ್‌ ರಾಮದಾಸ್‌.

ಪಂ. ಬಿಜಾಪುರೆ ಕೊಡುಗೆ

ಹಿಂದೂಸ್ತಾನಿ ಸಂಗೀತದ ಪ್ರಮುಖ ಸಾಥಿ ವಾದ್ಯವಾದ ಇದನ್ನು ಸೋಲೊ ಆಗಿಯೂ ನುಡಿಸಬಹುದು ಎಂದು ತೋರಿಸಿಕೊಟ್ಟು ಇದರಲ್ಲಿ ಅನೇಕ ಪ್ರಯೋಗಗಳನ್ನೂ ಮಾಡಿದವರು ಹಾರ್ಮೋನಿಯಂ ದಿಗ್ಗಜ ಪಂ. ರಾಮಬಾವು ಬಿಜಾಪುರೆ. ಪಂ. ವಸಂತ ಕನಕಾಪುರೆ ಅವರೂ ಹಾರ್ಮೋನಿಯಂನಲ್ಲಿ ಮೇರು ಶಿಖರವೇ ಆಗಿದ್ದವರು. ಹಲವಾರು ಕಛೇರಿಗಳ ಮೂಲಕ ಈ ವಾದ್ಯದ ನಿನಾದವನ್ನು ಪಸರಿಸಿದವರು ಪಂ. ಕನಕಾಪುರೆ.

ಪಂ. ಬಿಜಾಪುರೆ ಅನೇಕ ಸೋಲೊ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ ಅನೇಕ ಶಿಷ್ಯಂದಿರನ್ನೂ ತಯಾರು ಮಾಡಿದ್ದಾರೆ. ಬೆಂಗಳೂರಿನ ಪಂ. ರವೀಂದ್ರ ಕಾಟೋಟಿ ಬಿಜಾಪುರೆ ಅವರ ಶಿಷ್ಯರು ಹಾಗೂ ಅವರ ಪರಂಪರೆಯನ್ನೇ ಮುಂದುವರಿಸಿ ಹಾರ್ಮೋನಿಯಂನಲ್ಲಿ ಇನ್ನಷ್ಟು ಪ್ರಯೋಗಗಳನ್ನು ಮಾಡಿದ್ದಾರೆ. ತಮ್ಮ ಗುರುಗಳ ಹೆಸರಿನಲ್ಲಿ ‘ಬಿಜಾಪುರೆ ಹಾರ್ಮೋನಿಯಂ ಫೌಂಡೇಷನ್‌’ ಸ್ಥಾಪಿಸಿ ಪ್ರತಿವರ್ಷ ಹಾರ್ಮೋನಿಯಂ ಹಬ್ಬ ನಡೆಸಿ ಈ ಸುಷಿರ ವಾದ್ಯವನ್ನು ಸಾಕಷ್ಟು ಪ್ರಚಾರಗೊಳಿಸುತ್ತಿದ್ದಾರೆ.

ಸಂವಾದಿನಿಯಲ್ಲಿ ಪ್ರಯೋಗಶೀಲತೆನ್ನು ರೂಢಿಸಿಕೊಳ್ಳುವುದರ ಜೊತೆಗೆ ‘ಲೆಗ್‌ ಹಾರ್ಮೋನಿಯಂ’ ಎಂಬ ವಿಶಿಷ್ಟ ಪರಿಕಲ್ಪನೆಯನ್ನೂ ಜನಪ್ರಿಯಗೊಳಿಸಿದವರು ಪಂ. ಕಾಟೋಟಿ. ಹಾರ್ಮೋನಿಯಂನಲ್ಲಿ ‘ಸಮರಸ ಸಂವಾದಿನಿ’ ಎಂಬ ಕಾರ್ಯಕ್ರಮ ರೂಪಿಸಿದ್ದರು. ‘ದ್ವಾದಶ ಸ್ವರ ಸಂಭ್ರಮ’ ಎಂಬ ಮತ್ತೊಂದು ವಿಶಿಷ್ಟ ಕಾರ್ಯಕ್ರಮವನ್ನೂ ನಡೆಸಿಕೊಟ್ಟಿದ್ದು ಬಹಳ ಜನಮನ್ನಣೆ ಪಡೆದಿತ್ತು.

ಹಾರ್ಮೋನಿಯಂ ಅನ್ನು ಹಿಂದೂಸ್ತಾನಿ ಸಂಗೀತದ ಸಾಥಿ ವಾದ್ಯವಾಗಿ ಬಳಸುವ ಮುನ್ನ ಸಾರಂಗಿಯನ್ನು ಬಳಸಲಾಗುತ್ತಿತ್ತು. ಆಗ ಹಾರ್ಮೋನಿಯಂ ನುಡಿಸುವ ಕಲಾವಿದರೂ ಇರಲಿಲ್ಲ. ಕ್ರಮೇಣ ಸಾರಂಗಿ ಜಾಗವನ್ನು ಹಾರ್ಮೋನಿಯಂ ಆವರಿಸಿ ಇದೀಗ ಸಂವಾದಿನಿ ಇಲ್ಲದೇ ಹೋದರೆ ಸಂಗೀತವೇ ಅಪೂರ್ಣ ಎನ್ನುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ ಈ ಪೇಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.