ಮೂಲತಃ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದವರಾದ ಶಶಾಂಕ್, ಬಿದಿರಿನಿಂದ ಮಾಡಿದ ಹಗುರ ವಾದ್ಯದಲ್ಲಿ ಸ್ವರ ಸಂಚಾರ ಆರಂಭಿಸಿದರೆಂದರೆ ಕೇಳುಗರು ನಾದ ಸಮ್ಮೋಹನಕ್ಕೊಳಗಾಗುತ್ತಾರೆ. ಸುಷಿರ ವಾದ್ಯದಲ್ಲಿ ಅವರು ಮೂಡಿಸುವ ಚಮತ್ಕಾರ ಅತ್ಯಂತ ಶ್ರವಣಾನಂದಕರ. ಮಧುರಾತಿಮಧುರ ನಾದ ಕೊಡುವ ಈ ವಾದ್ಯದಲ್ಲಿ ಶಶಾಂಕ್ ನುಡಿಸುವ ರಾಗ–ತಾನ–ಪಲ್ಲವಿ ಕೇಳುವುದು ಅದ್ಭುತ, ಅನನ್ಯ ಅನುಭವ ನೀಡುತ್ತದೆ. ಬೆಂಗಳೂರಿನ ‘ಭಾರತೀಯ ಸಾಮಗಾನ ಸಂಗೀತ ಸಭಾ’ ನೀಡುವ ಪ್ರತಿಷ್ಠಿತ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ 2025’, ಅವರಿಗೆ ಲಭಿಸಿದೆ. ಫೆ. 23 ರಂದು ಸಂಜೆ ಚೌಡಯ್ಯ ಹಾಲ್‌ನಲ್ಲಿ ನಡೆಯುವ ಸಾಮಗಾನ ಸಂಗೀತೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ಅವರೊಂದಿಗಿನ ಮಾತುಕತೆ ಇಲ್ಲಿದೆ.
ಗಾಯನವಿರಲಿ, ವಾದನವಿರಲಿ ಕಲಿಕೆಯ ಜೊತೆಗೆ ಕೇಳ್ಮೆ ಕೂಡ ಬಹಳ ಮುಖ್ಯ. ಇದರಿಂದ ಸಂಗೀತದಲ್ಲಿ ಯಶ ಸಾಧಿಸಬಹುದು. ನಿಮ್ಮ ಅನಿಸಿಕೆಯೇನು?
ಯಾವುದೇ ಕಲಾವಿದನ ಗಾಯನ ಅಥವಾ ವಾದನ ಶೈಲಿ ಅವರವರ ಗುರುಗಳ ಅನುಕರಣೆಯೇ ಆಗಿರುತ್ತದೆ. ಕಲಾವಿದ ಪ್ರಬುದ್ಧನಾದಂತೆ ತನ್ನದೇ ಆದ ಶೈಲಿ ರೂಢಿಸಿಕೊಳ್ಳಲಾರಂಭಿಸುತ್ತಾನೆ. ನಾನು ನನ್ನ ಗಾಯನ ಗುರು ಕೆ.ವಿ. ನಾರಾಯಣಸ್ವಾಮಿ ಅವರನ್ನು ಅನುಸರಿಸುತ್ತಿದ್ದೆ. ಮುಂದೆ ಪಂ. ಜಸರಾಜ್ ಅವರು ಹಾಡೋದನ್ನು ಕೇಳುತ್ತಾ ಹಾಗೇ ಕೊಳಲಿನಲ್ಲಿ ಅದನ್ನು ಕರ್ನಾಟಕ ಸಂಗೀತ ಶೈಲಿಗೆ ಅಳವಡಿಸಿಕೊಂಡು ನುಡಿಸಲಾರಂಭಿಸಿದೆ. ಗಾಯನವನ್ನು ಕಲಿತ ಕಾರಣ ನನಗೆ ವಾದನ ಕಷ್ಟವೇ ಅನಿಸಲಿಲ್ಲ. ನನ್ನ ಸಂಗೀತದ ಅಡಿಪಾಯ ಭದ್ರವಾಗಿದ್ದುದರಿಂದ ನಾನು ಬೇಗನೆ ಈ ಕಲೆಯನ್ನು ಕರಗತ ಮಾಡಿಕೊಂಡೆ. ಕೊಳಲು ನುಡಿಸುವವರೆಲ್ಲರೂ ಗಾಯನ ಕಲಿತರೆ ಬಹಳ ಬೇಗನೆ ವಾದನದಲ್ಲಿ ಸಿದ್ಧಿ ಸಾಧಿಸಲು ಸಾಧ್ಯ.
ಉಸಿರು ನಿಯಂತ್ರಣ ಸಾಮರ್ಥ್ಯವನ್ನು ಬಹುವಾಗಿ ಬೇಡುವ ಕೊಳಲು ವಾದನ, ವಾದಕನಿಂದ ಹೆಚ್ಚಿನ ಪರಿಶ್ರಮ, ಸಮಯ, ತಾಳ್ಮೆ ಹಾಗೂ ಸತತ ಅಭ್ಯಾಸವನ್ನು ಬೇಡುತ್ತದೆ. ಇಂದಿನ ಧಾವಂತದ ದಿನಗಳಲ್ಲಿ ಯುವ ಕಲಾವಿದರಿಂದ ಇದನ್ನು ನಿರೀಕ್ಷಿಸಲು ಸಾಧ್ಯವೇ?
ಸಾಮಾನ್ಯವಾಗಿ ಎಲ್ಲ ಸಂಗೀತ ಪ್ರಕಾರಗಳಲ್ಲೂ ಯಶ ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಸಾಧನೆ, ಸತತ ಅಭ್ಯಾಸ ಅತ್ಯಗತ್ಯ. ಕೊಳಲಿಗೂ ಇದು ಹೊರತಲ್ಲ. ಅಲ್ಲದೆ ಕೊಳಲು ವಿಶೇಷವಾಗಿ ಉಸಿರು ನಿಯಂತ್ರಣ ಸಾಮರ್ಥ್ಯ ಹಾಗೂ ತಂತ್ರಗಾರಿಕೆಯನ್ನು ಬಯಸುತ್ತದೆ. ಆದರೆ ಕೊಳಲಿನಲ್ಲಿ ನೈಪುಣ್ಯ ಸಾಧಿಸಲು ಯಾವುದೇ ಅಡ್ಡದಾರಿಗಳಿಲ್ಲ ಎಂಬುದನ್ನು ಎಲ್ಲ ಕಲಾವಿದರೂ ಗಮನದಲ್ಲಿಡಬೇಕು.
ನನ್ನ ಹಾಗೂ ಹಿಂದಿನ ಪೀಳಿಗೆಯ ಸಂಗೀತಗಾರರಿಗೆ ಗುರುಮುಖೇನ ಕಲಿಯುವ ಅವಕಾಶ ಇತ್ತು. ದಿಗ್ಗಜರ ಒಡನಾಟ ಇತ್ತು. ವಿದ್ವಾಂಸರ ಸಂಗೀತವನ್ನು ತಾಸುಗಟ್ಟಲೆ ಕುಳಿತು ಕೇಳುವ ವ್ಯವಧಾನವೂ ಇತ್ತು. ಅವರೊಂದಿಗೆ ಸಂಗೀತದ ಬಗ್ಗೆ ಚರ್ಚಿಸುವ, ಸಂವಾದ ನಡೆಸುವ, ಜ್ಞಾನ ಹೆಚ್ಚಿಸುವ ಅನುಕೂಲವೂ ಇತ್ತು. ರಿಯಾಲಿಟಿ ಶೋ, ಸೋಷಿಯಲ್ ಮೀಡಿಯಾ ಮುಖಾಂತರ ದಿಢೀರ್ ಖ್ಯಾತಿ ಗಳಿಸುವ ಹುಚ್ಚುತನ ಇರಲಿಲ್ಲ. ಆದರೆ ಈಗ ಸಂಗೀತ ಕಲಿಕೆಯ ವಿಧಾನವೇ ಬದಲಾಗಿದೆ. ಹೆಚ್ಚಿನ ಮಕ್ಕಳಲ್ಲಿ ವ್ಯವಧಾನ ಇಲ್ಲ, ದೀರ್ಘ ಅವಧಿಯ ಅಭ್ಯಾಸ ಮಾಡುವ ಪರಿಪಾಟವಿಲ್ಲ. ಸಾಧನೆಯ ಛಲ ಕಡಿಮೆಯಾಗಿದೆ. ಸತತ ಅಭ್ಯಾಸ, ಪರಿಶ್ರಮಕ್ಕೆ ಸಮಯವೇ ಇಲ್ಲ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ, ಸೋಷಿಯಲ್ ಮೀಡಿಯಾಗಳಲ್ಲಿ ಮಿಂಚುವ ಸಾಹಸವೇ ಹೆಚ್ಚಾಗಿದೆ. ಇದಕ್ಕೆ ಪೋಷಕರೂ ಪ್ರಮುಖ ಕಾರಣ. ಇದರಿಂದ ಸಂಗೀತದ ಗುಣಮಟ್ಟ ಕಳಪೆಯಾಗುತ್ತಿದೆ. ಗಾಯನವನ್ನೇ ಆಲಿಸಲು ತಾಳ್ಮೆ ಇಲ್ಲ. ಇನ್ನು ವಾದ್ಯ ಸಂಗೀತ ಕೇಳುವವರೂ ಕಡಿಮೆಯಾಗಿದ್ದಾರೆ. ಹೀಗಾದರೆ ಸಂಗೀತದ ಭವಿಷ್ಯತ್ ಎಲ್ಲಿಗೆ ತಲುಪಬಹುದು ಎಂಬ ಆತಂಕವಿದೆ.
ಜುಗಲಬಂದಿ ಕಛೇರಿಗೂ ಕೊಳಲು ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ನೀವು ದಿಗ್ಗಜರೊಂದಿಗೆ ಜುಗಲಬಂದಿ ನೀಡಿದ್ದೀರಿ...
ಖಂಡಿತಾ, ಸುಷಿರ ವಾದ್ಯ ಕೊಳಲಿನ ಸಮ್ಮೋಹನ ಶಕ್ತಿಯೇ ಅಂಥದ್ದು. ಯಾವುದೇ ವಾದ್ಯವಿರಲಿ, ನಾದ ಬೇಗನೆ ಬೆರೆಯುತ್ತದೆ, ಸ್ವರಗಳೊಂದಿಗೆ ಸ್ಪಂದಿಸುತ್ತದೆ. ನಾನು ನೂರಾರು ಜುಗಲಬಂದಿ ಕಛೇರಿ ನಡೆಸಿಕೊಟ್ಟಿದ್ದೇನೆ. ಸಿತಾರ್‌ನ ಸುಜತ್‌ಹುಸೇನ್ ಖಾನ್, ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್, ಮೋಹನ ವೀಣೆಯ ಪಂ. ವಿಶ್ವಮೋಹನ ಭಟ್, ಹಿಂದೂಸ್ತಾನಿ ಗಾಯಕ ಅಜೇಯ ಚಕ್ರವರ್ತಿ... ಹೀಗೆ ಹಲವು ವಿದ್ವಾಂಸರ ಜೊತೆಗೆ ನುಡಿಸಿದ್ದು, ಹೊಂದಾಣಿಕೆಯಿಂದಲೇ ನುಡಿಸಿದ್ದೇವೆ, ಕೇಳುಗರನ್ನೂ ಇಂಥ ಕಛೇರಿಗಳು ಬೇಗನೆ ಸೆಳೆಯುತ್ತವೆ.
‘ಸಾಮಗಾನ ಮಾತಂಗ’ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದೀರಿ...
ಒಬ್ಬ ಕಲಾವಿದನ ಸಾಧನೆಯನ್ನು ಗಮನಿಸಿ ಪ್ರಶಸ್ತಿ ಪುರಸ್ಕೃತರಾಗುವುದು ನಿಜಕ್ಕೂ ಪುಳಕದ ವಿಚಾರವೇ. ಬೆಂಗಳೂರಿನ ’ಸಾಮಗಾನ ಸಂಗೀತ ಸಭಾ’ದಿಂದ ಈ ಪ್ರಶಸ್ತಿ ಪಡೆಯುವುದು ಸಂತಸ ತಂದಿದೆ. ನಾನು ಬೆಳೆದ ಊರಿನಲ್ಲಿ ಸಂಘ ಸಂಸ್ಥೆಗಳಿಂದ ಪಡೆಯುವ ಮೊದಲ ಗೌರವ ಇದು. ಹೀಗಾಗಿ ಇದು ಬಹಳ ವಿಶೇಷದ್ದು ಎಂಬುದು ನನ್ನ ಭಾವನೆ. ಈಗಾಗಲೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಫೆಲೊಶಿಪ್ (2017), ತಮಿಳುನಾಡು ಸರ್ಕಾರದ ಕಲೈಮಾಮಣಿ, (2001), ಗ್ರ್ಯಾಮಿ ನಾಮನಿರ್ದೇಶಕ 2009, ಫ್ರಾನ್ಸ್ ಸರ್ಕಾರದ ಚೆವಲಿಯರ್ ನೈಟ್‌ಹುಡ್ ಪ್ರಶಸ್ತಿ (2022), ಶೃಂಗೇರಿ ಮಠದ ಆಸ್ಥಾನ ವಿದ್ವಾನ್ ಬಿರುದು 2000... ಇವೆಲ್ಲವನ್ನೂ ಪಡೆದಿದ್ದರೂ ಸಂಗೀತಕ್ಕೇ ಮೀಸಲಾದ ಸಂಸ್ಥೆಯೊಂದರಿಂದ ತವರು ರಾಜ್ಯದಲ್ಲಿ ಸನ್ಮಾನಿತನಾಗುವುದು ಹೆಮ್ಮೆಯ ಸಂಗತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.