ADVERTISEMENT

ಆಹಾ! ದೆಹಲೀ ನೋಡಾ...

ಸುಬ್ರಾಯ ಚೊಕ್ಕಾಡಿ
Published 10 ಆಗಸ್ಟ್ 2019, 19:30 IST
Last Updated 10 ಆಗಸ್ಟ್ 2019, 19:30 IST
ಕಲೆ: ಸಂಜೀವ್ ಕಾಳೆ
ಕಲೆ: ಸಂಜೀವ್ ಕಾಳೆ   

ನೆರೂಡಾ ಹೇಳಿದ ಕತೆಯೊಂದರಲ್ಲಿ

ಅರ್ಧ ಬಿಳಿ, ಅರ್ಧ ಕಪ್ಪಿರುವ

ಮುಖದಂತೆ, ಈ ದೆಹಲಿಗೂ

ADVERTISEMENT

ಅರ್ಧ ಬಿಳಿ, ಅರ್ಧ ಕಪ್ಪಿರುವ ಮುಖ

ಬಿಳಿಯಿರುವ ದೆಹಲಿ ಆಶಿಸುತ್ತದೆ:

ಇಡಿ ದೆಹಲಿಯೇ ಬಿಳಿ

ಕಪ್ಪಿರುವ ದೆಹಲಿ ಆಶಿಸುತ್ತದೆ:

ಇಡಿ ದೆಹಲಿಯೇ ಕಪ್ಪು

ಹಾಗೆಂದೇ ಬಿಳಿ ದೆಹಲಿಗೆ

ವಿಸ್ತರಿಸಿಕೊಂಡು, ಕಪ್ಪು ದೆಹಲಿಯ ಆವರಿಸಿಕೊಳ್ಳುವ ತವಕ

ಅದೇ ಕಪ್ಪು ದೆಹಲಿಗೆ

ವಿಸ್ತರಿಸಿಕೊಂಡು, ಬಿಳಿ ದೆಹಲಿಯನೂ ತನ್ನ

ತೆಕ್ಕೆಗೊಗ್ಗಿಸುವ ತವಕ

ಬಿಳಿ ದೆಹಲಿಯ ಶಿಸ್ತು, ಸ್ವಚ್ಛತೆಯ ಸೋಗು

ಕಪ್ಪು ದೆಹಲಿಯ ಅಶಿಸ್ತು, ಗಲೀಜಿನ ಸೊರಗು

ಮುಖಾಮುಖಿಯಾದಾಗ

ಒಂದು ಇನ್ನೊಂದಾಗುವ ಪವಾಡ

ನಡೆಯುವ ಕ್ಷಣ

ಇಡಿ ದೆಹಲಿಯನ್ನು ಕವಿಯುತ್ತದೆ

ಹೊಗೆ ಮಂಜು

ಉಸಿರು ಕಟ್ಟುವ ಸ್ಥಿತಿಯಲ್ಲಿ

ದೆಹಲಿಯೀಗ

ಕಪ್ಪೆಂದವರಿಗೆ ಬಿಳಿ

ಬಿಳಿಯೆಂದವರಿಗೆ ಕಪ್ಪು-ಎನ್ನುವ ಭಾಸ

ಅಂತಿಮವಾಗಿ

ಯಾವುದು ಬಿಳುಪು ಯಾವುದು ಕಪ್ಪು

ಎಂಬುದೇ ಅರಿಯದೇ ಆ ಭಾಸ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.