ADVERTISEMENT

ಭಾಗ್ಯ ವಸು ಅವರ ಕವನ: ಲೋಕದ ಜೀವಾಂತಃಕರಣ ಬಟ್ಟಲು ಖಾಲಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 23:49 IST
Last Updated 6 ಡಿಸೆಂಬರ್ 2025, 23:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನಿರ್ಜನ ಬೀದಿಯ ಕೊನೆಯ ಆ ಮೋಟು ಗೋಡೆ
ವಿಕಾರವಾಗಿ ಕೂದಲು ಕೆದರಿಕೊಂಡು ಕೂತ ಅವಳಂತಿದೆ
ಮಾತಿಲ್ಲ ಕತೆಯಿಲ್ಲ ಯಾವ ರಾಗೋದ್ವೇಗವಿಲ್ಲ
ಇಂಚಿಂಚು ಗುದ್ದಲಿ ಹಾರೆಯಿಂದಗೆದ ಆಳ
ಕೆತ್ತಿಸಿಕೊಂಡ ಯಾತನೆಯ ಪುಟಗಳು
ಕುಡಿದು ಬೀಸಾಡಿದ ಸಾರಾಯಿ ಸೀಸೆಗಳು
ಸಿಗಾರಿನ ಪೊಟ್ಟಣಗಳು ಹೊಗೆ ಧೂಳು ಕಸಕಡ್ಡಿ
ಚೂರುಚೂರಾದ ಬಟ್ಟೆ ಬಳಸಿಯೆಸೆದ ಕಾಂಡೋಮ್
ಅಲ್ಲಿ ನೆಲ ಬಗೆದರೆ ಸಿಕ್ಕುತ್ತಿತ್ತು ರೋದನದ ಬೇರುಗಳು
ಅವಳ ಎದೆ ಅಗೆದರೆ ಸಿಗುತ್ತಿತ್ತು ಅವನ ಕಾಮೋದ್ರಿಕ್ತ ಭಂಗಿಗಳು
ಚೀತ್ಕಾರ ಮುಲುಗು ಹರಿದ ಕೋಡಿ ಹೆಪ್ಪುಗಟ್ಟಿದ ನಾಡಿ
ಬೆತ್ತಲ ಬಯಲಿಗೆ ತುಂಡು ಬೇಲಿಯ ಗೋಡೆ
ತಾನು ಕರಗಿಸಿಕೊಂಡ ವ್ಯಥೆಯ ಹಾಡದೇ ಹಾಡುವುದು

ಮೆದುಕಂಗಳಲಿ ಅಟ್ಟಹಾಸದ ರೂಪ ಚಿತ್ರಿಸಿದ್ದಾಳೆ
ಆದರದು ಸಾಕ್ಷ್ಯವಲ್ಲ
ಚಿಂದಿಯಾದ ದೇಹವನ್ನೇ ಎತ್ತಿಹಿಡಿದಳಾದ್ದರದು
ಸತ್ಯದ ಗಾಯಗಳಲ್ಲ ನೋವಿನ ಎಳೆಗಳಲ್ಲ
ಕಿತ್ತೆಸೆದ ಹೆರಳು ದವಡೆಹಲ್ಲು ಉಟ್ಟುಡುಗೆ
ಅದಾವುದೂ ಕಕ್ಷಿದಾರನಿಗೆ ಒದಗದು
ಸಂಗ್ರಹಿಸಿದ ಪುರಾವೆಗಳೆಲ್ಲಾ ಆಮಿಷಕ್ಕೆ ಮಾರುಹೋಗುವವು
ಎದೆಗೀರಿನ ನಡುವೆ ಆವಿಯಾದ ನಶೆಯ ನೆರಳು
ಬದುಕು ಹಾಸಿದ ಹೆಜ್ಜೆಗಳ ಭಾಕಿಮೊತ್ತಕ್ಕೆ
ತೆತ್ತ ಸುಂಕವನ್ನು ಹೊತ್ತೇ ಬದುಕ ಪೊರೆಯಬೇಕು
ಗುರುತುಗಳ ಸಾಕಿಕೊಂಡೇ ನಾವೆ ಹಾಯಬೇಕು
ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವುದು
ಇವರಿಗೆ ಸಲೀಸು

ADVERTISEMENT

ಸುರಿದ ಸ್ಖಲನದ ಕುರುಹು
ಹೊಲೆಯಲಾಗದ ಚೂರುಗಳು
ಕತ್ತರಿಸಿದ ಅಂಗಾಂಗಗಳ ನೋವು
ಕೆಂಬಣ್ಣದ ಗೀರುಗಳಲಿ ಒಣಗಿದ ಪಕಳೆ
ಕಿತ್ತುತಿಂದ ತುಟಿದವಡೆ ಎದೆತೊಟ್ಟು
ಛಿದ್ರವಾದ ತೊಡೆಸಂದಿಯ ಮಾಂಸಖಂಡ
ಛೇದವಾದ ನಾಳಗಳ ಮಾರ್ಗ
ಮುರಿದ ಕೀಲುಗಳು ಹಿಂಡಿದ ನಡು ಬೆನ್ನು
ಜಜ್ಜಿಸಿಕೊಂಡ ಪಾದ ಹಸ್ತ
ಅಲ್ಲಲ್ಲಿ ಹಲ್ಲು ಉಗುರು ತುಟಿ ಇಳಿಸಿದ ಕಲೆಗಳು
ಕಾಲುನೆಟ್ಟ ಹಾದಿ ತುಂಬಾ ಸಹಿಸಿದ ನೆನಪುಗಳು
ಕಣ್ಣಂಗಳದಲ್ಲಿ ಸತ್ತ ನಾಳೆಯ ಕಳೇಬೇರ
ಬೆನ್ನಿಗೆ ಕಟ್ಟಿಕೊಂಡೇ ಊರಬೇಕು ಹೆಜ್ಜೆ

ಎದೆಕುಡಿಕೆಯೊಸರು ಆವಿಯಾದ ನಂತರವೂ
ಸಂಕಟದ ಏದುಸಿರು
ಬಸಿರು ಗರ್ಭಪಾತಗಳ ನಿರ್ಭಾವುಕ ಹೆಸರು
ಹುಟ್ಟುತ್ತಲೇ ಮೊಳೆವ ಅಂಗಾಂಗಳಿಗೆ
ಪೂರ್ವಪೀಡನೆಯ ಕೊಸರು
ಬೆಳೆಯುತ್ತಾ ಊರತುಂಬಾ ಕಣ್ಣಮುಳ್ಳುಗಳ ನಿಟ್ಟುಸಿರು
ನಡು ಲಾಸ್ಯ ಕಲಿತು ಹೆಜ್ಜೆಗಳ ಊರಿದೆಡೆಯೆಲ್ಲಾ
ಮೋಹಬಳ್ಳಿಯ ಅಡರಿಗೆ ಮೆತ್ತನೆಯ ಹಾಸು
ಮುಂಗುರುಳು ನಾಚಿಕೆಯ ಉಟ್ಟಂತೆಲ್ಲಾ
ಬೆಳವ ಚಿಗುರು ರಸಬಳ್ಳಿ ತೊನೆದೆನೆ
ಹದಬೆದೆಗೆ ಕಾಯುವ ನೇಗಿಲದುಟಿ ನೆಲದ ಹಸಿ
ಕೊಸರಿಕೊಳ್ಳುವಿಕೆಗೆ ಇಲ್ಲದ ಬಿಡುಗಡೆ
ಹಿಡಿಂಬ ಹಿಡಿತಕ್ಕೆ ಉಸಿರುಚೆಲ್ಲಿದ ಕನಸುಗಳು

ದುಂಬಿ ಹೂವೆದೆಯ ಹೀರದೆ ಮಕರಂದವಿರದು
ತೊಟ್ಟಿಕ್ಕುವ ಹಿಮ ಎಳೆದಳಿರ ನೇವರಿಸದೆ ಧರೆಗಿಳಿಯದು
ತಕ್ಕ ತೊಡೆಗೆ ಧಾತುವ ಕರುಣೆಯಿಲ್ಲದೆ
ಜೀವಕಣವೊಂದೂ ಉತ್ಪತ್ತಿಯಾಗದು
ಪ್ರೇಮದ ಸಾರವಿಲ್ಲದೆ ದಾಹದ ದಾರಿ ಇಂಗದು
ಹಸಿವಿನ ಗುರಿ ಗಮ್ಯ ತಲುಪದು
ಇಳೆಗೆ ಗಾಳಿ ಬೆಳಕು ಮಳೆಯ ಮಿಲನವಿಲ್ಲದೆ ಸಂತತಿಗಳಿರವು
ಇರುವ ನಡುವೆ ಬೇಡದ ಹಲವೂ ಇದ್ದುಬಿಡುತ್ತಿವೆ ಇರಲುಬಿಡುತ್ತಿದ್ದೇವೆ

ಕೃಷ್ಣನಂತ ಮನಸ್ಸಿಗಷ್ಟೇ ಪೂತನಿಯ ಮೊಲೆಹೀರು ಸ್ವೀಕೃತ
ಭರವಸೆಗಳೆಲ್ಲಾ ಬಿರುಕುಗಳಲಿ ಜಾರಿ ಕಣ್ಣಂಗಳದಲಿ
ಕೊಳೆತು ನಿಲ್ಲುವ ನೀರು
ಇಂದ್ರಿಯಗಳ ಹವಿಸ್ಸಿಗೆ ಬಿದ್ದು ಸತ್ತು ಬದುಕುವ
ಬದುಕಿ ಸಾಯುವ ಬಾಳ ಅಸ್ಪೃಶ್ಯಯಾನ
ಅವಳ ಅಶಾಂತ ಶಯ್ಯೆಗೆ ತಣ್ಣಿರುಳು ವಿರಮಿಸದು
ಲೋಕದ ಜೀವಾಂತಃಕರಣದ ಬಟ್ಟಲ ಖಾಲಿಯಾಗುವಿಕೆಗೆ
ಮೋಟು ಗೋಡೆಗಳು ನಿದ್ರಿಸವು
ಥೇಟ್ ಅಕ್ಕನಂತೆ.. ಬುದ್ಧನಂತೆ..
ನಾವು ನೀವು ಪರಮಸುಖಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.