ADVERTISEMENT

ಕಲ್ಪನೆ ಕಾವ್ಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 11:12 IST
Last Updated 17 ಜುಲೈ 2018, 11:12 IST

ಮತ್ತೆ ಬರುವೆಯಾ ರಾಮ?

ಯಾವ ಮೋಹಕ ಸೆಳತ
ನನ್ನ ಕರೆದಿದ್ದು ಮೇಲಿಂದ ಕೆಳಗೆ
ವಸುಂಧರೆಯ ಕಡೆಗೆ–
ರಾಮನ ಮೇಲಿನ ಭಕ್ತಿಯೇ

ಈ ಅಂಗೈಯೊಳಗಿನ ಕಾಳಿಗಿಂತ
ಅಂದು ನನ್ನ ಬೆನ್ನ ಮೇಲೆಳದ ಮೂರು ಗೆರೆಯ
ನಿನ್ನ ಕೈಯ ಕಂಪು ತಂಪಾಗಿ
ಮನದಾಳದಲ್ಲೆಲ್ಲೋ ಹೆಪ್ಪುಗಟ್ಟಿದೆ ರಾಮ

ADVERTISEMENT

ಮತ್ತೆ ಬರುವೆಯಾ ರಾಮ ಕಾಡಿಗೆ
ಇನ್ನೊಬ್ಬ ದಶರಥ ಸಿಕ್ಕರೂ ಸಿಕ್ಕಾನು
ನಿನ್ನ ಕಾಡಿಗೆ ಅಟ್ಟಲು
ಭರತನಿಗೆ ಪಟ್ಟಕಟ್ಟಲು
ಬಂದರೂ ಬಂದಾಳು
ನಿನ್ನ ಜೊತೆ
ಸೀತಾಮಾತೆ

ಆದರೆ ಎಲ್ಲಿದೆ ರಾಮ ಆ ದಟ್ಟ ಕಾಡು
ಎಲ್ಲ ನಾಡಾಗಿದೆ
ನರಕದ ಬೀಡಾಗಿದೆ
ನಿನ್ನ ನವಿರಾದ ಆ ಕೈಯ ಸ್ಪರ್ಶಸುಖ
ಮತ್ತೆ ಸಿಗಲಾರದೇನೋ?
ನನಗೆ ದಕ್ಕಲಾರದೇನೋ?
ಮತ್ತೆ ಬರುವೆಯಾ ರಾಮ ಕಾಡಿಗೆ?

-ಕಮಲಾಕರ ಕೆ.ಆರ್.

ಕೆನರಾ ಬ್ಯಾಂಕ್, ರಿಕವರಿ ವಿಭಾಗ.
112,ಜೆ ಸಿ ರಸ್ತೆ,ಬೆಂಗಳೂರು-2
ಮೊ. 9448343367
kamalakarakr@gmail.com

***

ಅಳಿಲು ಸೇವೆ

ನಾನಿಟ್ಟ ಕಾಳುಗಳನು ಪಟ್ಟನೆ
ಪುಟ್ಟ ಕೈಗಳಿರಿಸಿಕೊಂಡು
ಚಂಗನೆ ಮಾಯವಾಯಿತೊಂದು
ಕೆಂಬಣ್ಣದ ಚೆಂದದ ಇಣಚಿ

ಮತ್ತದೇ ಮರದಿಂದಿಳಿದು
ಆಕಡೆ ಈಕಡೆ ಇಣುಕುತ
ಬರುತಿತ್ತು ಮರಿಗಳಿಗೆ
ತನ್ನವರಿಗೆ ಕಾಳುಗಳನು ಹಂಚಿ

ರಾಮ ಸೇತುವೆ ಕಟ್ಟುವಾಗ
ಸೇವೆ ಮಾಡಿದ ಸಣ್ಣ ಅಳಿಲು
ತನ್ನ ಪುಟ್ಟ ಕರಗಳಲಿ
ತಂದಿತ್ತಾಗ ಹೊಳೆವ ಮಳಲು

ಅದೆಷ್ಟು ಹೊತ್ತು ಕಾದೆನು
ಹಸ್ತಗಳಲಿ ಕಾಳುಗಳನಿಡಿದು
ಆದರೆ ಬರಲೇ ಇಲ್ಲ
ಶ್ರೀರಾಮನಿಂದ ಬೆನ್ನೊಳು ಮೂರು
ಬಂಗಾರದ ಗೆರೆಗಳನೆಳೆಸಿಕೊಂಡ
ಪುಟ್ಟ ಇಣಚಿ ಮತ್ತೆಂದು.

ರಂಜಿತಾ ಎಂ.
ಕೊಪ್ಪ ತಾಲೂಕು
ಚಿಕ್ಕಮಗಳೂರು ಜಿಲ್ಲೆ
ಬಸರಿಕಟ್ಟೆ ಅಂಚೆ
577114


***
ಇಣಚಿಯ ಇಣುಕು

ಇಣಚಿಯೊಂದು ಇಣುಕುತಲಿ
ಬೊಗಸೆಯಲಿ ಕಾಳ ಕಂಡಿದೆ

ಮೆಲ್ಲ-ಮೆಲ್ಲ ತೆವಳಿ ಬಂದು
ತನ್ನಾಹಾರವ ಪಡೆದಿದೆ..
ತನ್ನ ಪುಟ್ಟ-ಪುಟ್ಟ ಕೈಗಳಲಿ
ಧನ್ಯವಾದ ಅರ್ಪಿಸಿದೆ

ಮೇಲಿನಿಂದ ಕೆಳಗೆ ಬರಲಿ
ಮರದಲಿ ನೇತುಕೊಂಡಿದೆ
ಕೈ ತುಂಬ ಊಟ ತುಂಬಿಕೊಂಡು
ಓಡಿ ಹೋಗೋ ತುರ್ತಿನಲ್ಲಿದೆ

ಮಳಲ ಭಕ್ತಿ ತೋರಿ ತಾನು
ಅಳಿಲ ಸೇವೆ ಸಲ್ಲಿಸಿದೆ...
ಅದರ ಸಹಾಯ ನೆನೆದು
ಅಳಿಲಿಗೆ ಊಟ ನೀಡುತಿರುವೆ

~ವಿಭಾ ವಿಶ್ವನಾಥ್, ಹಾಸನ


ಮಯೂರ: ಜೂನ್‌, 2018ರ ಸಂಚಿಕೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.