ADVERTISEMENT

ಕವಿತೆ | ಕವಿಯೆಂಬುವವಳು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 0:30 IST
Last Updated 9 ಮಾರ್ಚ್ 2025, 0:30 IST
   

ಮೂರು ಗುದ್ದಲಿ ಮಣ್ಣು ಅಗೆದು

ಗುಳಿ ತೆಗೆದು

ಎರಡು ಬೊಗಸೆ ಗೊಬ್ಬರ

ADVERTISEMENT

ಒಂದಿಷ್ಟು ನಾರು ಸತ್ತೆ ತುಂಬಿ 

ಟೊಂಗೆ ಸಗಣಿಗೆ ಅದ್ದಿ

ನೆಡುವ ಹೊತ್ತಿಗೆ

ನಾನು ತುಂಬಿದ ಬಿಮ್ಮನಸಿ


ಊರುವ ಮುನ್ನ ಉಸುರುತ್ತೇನೆ

ಹಡೆಯಲಿರುವ ಗಿಡದ ಕಿವಿಯಲ್ಲಿ

ತಾಯಾಗುವುದೆಂದರೆ 

ಎಲೆಯನ್ನು ಹುಳುವಾಗಿಸಿ

ಬೇರನ್ನು ಹೇನಾಗಿಸಿ

ಹರೆಯಲ್ಲಿ ಇರುವೆ ಬಾಳಿಸಿ

ಹೂವನ್ನು ಚಿಟ್ಟೆ ಮಾಡಿ

ಹಣ್ಣನ್ನು ಹಕ್ಕಿಯಾಗಿಸುವುದು

ಎಂದು


ಸೋಜಿಗದಲ್ಲಿ ಮಾತಾಡುತ್ತದೆ ಟೊಂಗೆ


ಮಕ್ಕಳುಮರಿ ಮೈನೋಯುವಂತೆ ಎಳೆದರೆ

ಸುಮ್ಮನಾದರೂ ಹರಿದರೆ ಎಲೆ

ಬಿಡಿಸಿದರೆ ಮೊಗ್ಗು

ಮೈಯುಜ್ಜಿದರೆ ಎಮ್ಮೆ

ಕಡಿದರೆ ಕೊಂಬೆ

ಮುರಿದರೆ ಚಿಗುರು

ಬೀರಿದರೆ ಕಲ್ಲು ದೋರೆಗಾಯಿಗೆ?


ಮರಕ್ಕೂ ನೋವಿರುತ್ತವೆ ಅಸಲಿಗೆ

ಮನುಷ್ಯರಿಗಲ್ಲದೆ ಮರಕ್ಕಾ ಎನ್ನುವುದು

ಸುಮ್ಮನೇ ಸಲೀಸಲ್ಲ.


ಹೂವಿಂದ ಬೆಳಕು

ಹಸಿರಲ್ಲಿ ಮೌನ 

ಋತುವಿಗೊಂದು ಷರತ್ತು

ಹಸಿದ ಹಕ್ಕಿಗೆ ಪಸೆ

ಮುಂಗಲೂರಿದ ದುಂಬಿಗೆ

ಮಧುಗುಂಭ

ಓಡುವ ಮೋಡಕ್ಕೆ ಆಸರ

ಉರಿವ ಸೂರ್ಯನಿಗೆ ಅರೆಘಳಿಗೆ ನೆರಳು

ಗಾಳಿಗೆ ನೀವು ಕೈಕಾಲು

ಒಡಲುಗೊಂಡಾದ ಮೇಲೆ

ತಿಳಿಯುತ್ತದೆ ಮುಗುದೆ

ತಾಯಾಗುವುದು ತನ್ನಿಂತಾನೇ

ಎರಡು ಮುತ್ತುಗಳ ಮೀಸಲಿಡು

ದಳದ ತುದಿಯಲ್ಲಿ ಸದಾ

ನೋಡಿಕೊ ಖರ್ಚಾಗದಂತೆ  

ಬರುತ್ತಾನೆ ಸೂಕ್ತ ವಾರಸುದಾರ 


ಸುತ್ತೂ ಜಗತ್ತು ನಸುನಕ್ಕಿತು

ಕವಿಯೆಂಬುವವಳು ಈ ಲೋಕಕ್ಕೆ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.