ADVERTISEMENT

ಕಾಣಿಸುವ ಕನ್ನಡಿ

ಡಾ.ಲೋಕೇಶ ಅಗಸನಕಟ್ಟೆ
Published 1 ಸೆಪ್ಟೆಂಬರ್ 2018, 19:30 IST
Last Updated 1 ಸೆಪ್ಟೆಂಬರ್ 2018, 19:30 IST
ಚಿತ್ರ: ಮದನ್‌ ಸಿ.ಪಿ.
ಚಿತ್ರ: ಮದನ್‌ ಸಿ.ಪಿ.   

ಷಟುಸ್ಥಲದ ಕೊನೆ ಮೆಟ್ಟಿಲು ಇನ್ನೆಷ್ಟು ದೂರವೋ?

ರಣರಣ ಬಿಸಿಲು: ಮುಳ್ಳೊತ್ತುವ ಕಾಡುಹಾದಿ

ಹಣೆಗೆ ಕೈ ಹಚ್ಚಿ ಕೀಲಿಸಿದ ಕಣ್ಣಿಗೆ ಕಂಡದ್ದು ತೂಗಾಡುವ

ADVERTISEMENT

ಮಂಜು ಮುಸುಕಿನ ಬಟ್ಟಂಬಯಲು; ನಿರಾಳ ಗಾಳಿ ಬೆಳಕಿನ ಮನೆ.

ನೆಲದ ಕಣ್ಣಿಗೆ ಮೋಕ್ಷ ಪಕ್ಷಿ ರೆಕ್ಕೆಯಾದರೂ ಕಂಡೀತೆ ಬಸವಾ..?

ಬರಿದೆಗಣ್ಣಾಗ ಬಯಲಾಚೆಯಾಲಯದ ಮೇಲೆ ಗೋಪುರವೆದ್ದು

ಗಂಟಾನಾದ ಘಳಿಲು ಘಳಿಲೆಂದು ಷಟುಸ್ಥಲದ ಹಾದಿ ಕಂಡೀತು

ನಾಗರಗಳೆದ್ದು ನಮಿಸಿ ಹಾದಿ ಬಿಟ್ಟಾವು ಕಲ್ಯಾಣಕೆ."

ನಕ್ಕು ನುಡಿದ ನಗೆ ಅಪರಿಚಿತವಲ್ಲ: ಕೇಳೇ ಕೇಳಿದ್ದು|

ಮಹಾಮನೆಯ ಕೈ ಸಾಲೆಯಲಿ, ಕಸದ ರಾಶಿಯ ನಡುವೆ

ಶೂನ್ಯವೆಂದು ಕರೆದ ಸಿಂಹಾಸದ ಮೇಲೆ ವಿರಾಜಮಾನವಾ;

ಮಂಟಪದ ತೊಲೆಸಾಲುಗಳ ಗುಂಭಗಳ ಬಳಿ ನಗೆ ಹಾರಿದ್ದು

ನಗೆ ಬಂದ ದಿಕ್ಕು ದಿಕ್ಕುಗಳಲಿ ಬರಿದೇ ಆಡುವ ಗಾಳಿಯುಯ್ಯಾಲೆ

ನಿರಾಕಾರ ನಿರ್ದೇಹ ನಿರ್ಮೋಹದ ಮೋಡಿ

ದೃಶ್ಯಾದೃಶ್ಯಗಳ ತಲೆ ಹೊಯ್ಲು ಕಡೆತ ಕಡಲು

ಶಬ್ದ ನಿಶ್ಯಬ್ದ ಸೂತಕದ ಗಾಳಿ ಮರ್ಮಾಘಾತಗೊಳಿಸಿದೆ.

ಕುದುರೆಯಿಂದಿಳಿದು ಆಲಿಸಿದ ಬಸವನಿಗೆ ಮದ್ದಲೆಯ ಇನಿದನಿ

ನಿಂದರಿಯದ ಕುದುರಿ ಹಿಂದೆ ಮುಂದೆ ತಿರುಗುತಿದೆ ರಣ ರಣ

ಯಾವ ಮಾಯಕಾರನ ಮೋಡಿಯೋ..?

ಮಾದಯ್ಯ ಮಲ್ಲಯ್ಯ ಸಂಗಯ್ಯ ಮಂಟೇದಯ್ಯಾ?

ದುಗುಡವೆಂಬ ಸಂತೆಗೆ ಚಿಂತೆಯೆಂಬ ಸರಕಿನ ಸಾಲು ಸಾಲು

ಧಡಕ್ಕನೆ ಕದಳಿ ಕಂಬಗಳ ಗುಹಾಂತರದಿಂದ ಹಾವ ಹೆಡೆಯಾಡಿಸಿ

ಕಪಾಲ ಕೈ ಹಿಡಿದು ಕೌಪಿನ ತೊಟ್ಟ ಜೋಗಿ...

ಅಂಗೈ ಮುಂಗೈ ಹಿಂಗೈಗಳ ಮೇಲೆ ಘೋರ ಸರ್ಪಗಳ ಲೀಲೆ

ಬೆಳೆದೇ ಬೆಳೆದ ಬೆಟ್ಟದೆತ್ತರದ ಹುತ್ತಗಳ ಸಾಲು

ಭೋರ್ಗರೆವೆ ಸರ್ಪಸಾವಿರ ಸುಪ್ತ ಸಾಸಿರ

ಹುತ್ತಕೆ ಕೈ ಇಕ್ಕಿ ಸೆಳೆವ ನಾಗರಗಳ ಕೈ ಚಳಕದ ಜೋಗಿ

ಬಸವಳಿದ ಬಸವನ ಮುಂದೆ ಅದೇ ನಗುವನ ಕೈವಾರಿ.

ಹುತ್ತಕ್ಕೆ ಹೀಗೆ ಕೈ ಇಕ್ಕಿ ಸರ್ಪವ ಸೆಳೆಯ ಬಲ್ಲೆಯಾದರೆ

ಷಟುಸ್ಥಲದ ದಾರಿ ಕಂಡೀಯ ಇಲ್ಲವಾದರೆ ಇದ್ದೇ ಇದೆ ನಿನಗೆ

ಪ್ರಸಾದ, ಇಷ್ಟಲಿಂಗ ದಾಸೋಹ ತಾಳಲಾರದ ಕಿರೀಟದ ವಜ್ಜೆ

ಕ್ಷಿತಿಜಗಳಲಿ ಲಯವಾಗುವ ಪರಿಗೆ ಲೋಕ ನಿಬ್ಬೆರಗು.

ಕುದುರೆಯ ಕೈ ಬಿಟ್ಟನು ಹಾವುಗೆಯ ಕೈ ಬಿಡುವನು

ಕಿರೀಟದ ಹೊನ್ನಿನೊಂದೊಂದು ಎಳೆಯ ಬೀಸಾಡುವನು ಹೀಗೆ

ಹುತ್ತಕ್ಕೆ ಕೈ ನಿರಿಸುವನು... ಬಾಲಸಂಗಯ್ಯ ನೀಲವ್ವ

ಗಂಗಮಾಯಿ; ಓಂ ನಮಃ ಶಿವಾಯ ಮಂತ್ರಕ್ಕೂ ಓಸರಿಸಲಾಗದು.

ಶತಕಗಳುದ್ದಕ್ಕೂ ಸಾಗಿದ ಹಾದಿಯಲ್ಲಿ ಸವೆದದ್ದು ನರಮಾನವ

ಮಾಂಸಮಜ್ಜೆ: ಕಾಲು ಚಾಚಿ ಮಲಗಿದೆ ಹಾದಿ ಬೀದಿ ನಿರಾಳ

ಸತ್ಯ ಸೂತಕಗಳ ಪತ್ಯ ಅಪತ್ಯಗಳಲ್ಲಿ ಕಾಣುವುದಷ್ಟೆ ಬಿಂಬ

ಕನ್ನಡಿಗೆ ಕಾಣಿಸುವುದಷ್ಟೆ ಗೊತ್ತು|

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.