ADVERTISEMENT

ಪ್ರಜಾವಾಣಿ ಕವನ ಸ್ಪರ್ಧೆ |ಸದಾಶಿವ ಸೊರಟೂರು ಅವರ ಕವನ: ವ್ಯಾಕರಣ ಸುಳ್ಳು ಹೇಳಬಾರದು

ಸದಾಶಿವ ಸೊರಟೂರು
Published 15 ನವೆಂಬರ್ 2025, 23:30 IST
Last Updated 15 ನವೆಂಬರ್ 2025, 23:30 IST
   

1

ನಾನು ನಾವು ನಮಗೆ..‌

ಉತ್ತಮ ಪುರುಷ 

ADVERTISEMENT

ಎಂದಾಗ 

ಮಕ್ಕಳ ಕಣ್ಣ ಬೊಗಸೆಯಲಿ

ಬೆಳಕು

ನೀನು ನೀವು ನಿನ್ನದು ನಿನಗೆ..

ಮಧ್ಯಮ ಪುರುಷ

ಹೇಳು ಹೇಳುತ್ತಿದ್ದಂತೆ ಕಿಟಕಿಯಿಂದ

ಒಳಬಂದು ಕೂತ ಮಂದ ಗಾಳಿ

ಅವನು ಅವಳು ಅವರು ಅದು..

ಪ್ರಥಮ ಪರುಷ

ಅನ್ನುವಾಗಲೇ ಎದ್ದು ನಿಂತಳು

ಪೋರಿ

‘ಎಲ್ಲವೂ ಪುರುಷವೇ ಆದಮೇಲೆ

ಇಲ್ಲಿ ವ್ಯಾಕರಣದೊಳಗೆ 

ಹೆಣ್ಣಿಗೇನು ಸರ್ ಕೆಲಸ? 


2

ಜಾಣಗೆ ಇದೆ ಜಾಣೆ ಎಂಬುದೊಂದು

ಅವಳ ಪಾಲಿನ ಪದ

ರಾಜಗೆ ರಾಣಿ

ಶರಣಗೆ ಶರಣೆ

ಗೌಡಗೂ ಗೌಡತಿ..

ಆದರೆ ಸೂಳೆಗೆ..?

ಕೈಯೆತ್ತಿ ನೋಡುವ ಯಾರಿಗೆ ಗೊತ್ತು..?

ಬಹುಶಃ ನೀವೀಗ ಎತ್ತಿಕೊಳ್ಳುವಿರಿ ಮೊಬೈಲು

ತಡಕಾಡುವಿರಿ ಶಬ್ದಕೋಶ

ಅವರಿವರನ್ನೂ ಕೇಳುವಿರಿ..


ಇರುವ ಪದವನು ಯಾಕೆ 

ಯಾರು ಅಡಗಿಸಿದ್ದು?

ಯಾಕೆ ಆಚೆಗೆ ತಂದು ಕೆಡವಲಿಲ್ಲ

ಜನರಿಗೆ ಬಾಯಿಗೆ..? 


ಅವಳಿಗಿವೆ ಕೈ ಕಾಲು ಮೂಗು ಬಾಯಿ

ಅವನಿಗೂ ಇವೆ  ಕೈ ಕಾಲು ಮೂಗು ಬಾಯಿ

ಅವಳಿಗಿದೆ ತೊಡೆ ಸಂದು

ಅವನಿಗೂ ತೊಡೆಯೂ ಸಂದುವೂ

ಅವನೂ ಮಲಗುತ್ತಾನೆ

ಅವಳೂ ಮುಲುಕುತ್ತಾಳೆ..

ಅದೆಲ್ಲಿ ಅಡಗಿ ಕೂತಿದೆಯೊ

ಆ ಪದ

ಮುಖ ಮುಚ್ಚಿಕೊಂಡು..

3

‘ಅವಳು ಸೂಳೆಯಾದಳು..

ಈ ವಾಕ್ಯ ತಪ್ಪಿದೆ..

ಅಂದಳು ಆಕೆ

ಕತೃವಿದೆ ಕರ್ಮವಿದೆ

ಇದಕ್ಕೊಂದು ಅರ್ಥವೂ

ಮತ್ತೆ ಮತ್ತೆ ನೋಡಿಕೊಂಡ

ಮೇಷ್ಟ್ರಿಗೆ ಗಾಬರಿ..

‘ಸೂಳೆ ಆಗೋದಲ್ಲ

ಸೂಳೆಯನ್ನು ಮಾಡುವುದು

ವ್ಯಾಕರಣ ಸುಳ್ಳು ಹೇಳಬಾರದು ಸರ್..’

ಅವಳಿಗೆ ವ್ಯಾಕರಣದಲ್ಲೂ ಜಾಗವಿಲ್ಲ

ಶತಮಾನದ ಪ್ರಶ್ನೆಗೆ

ಇಂದಿಗೂ ಉತ್ತರವಿಲ್ಲ..


ಎದೆಯಲ್ಲೊಂದು ಸರಿಯಾದ

ಸ್ವರ ವ್ಯಂಜನವಿಲ್ಲದೆ

ಎತ್ತುವ ದನಿಯಲ್ಲಿ ಪಸೆಯೂ ಇಲ್ಲ..  

ಸದಾಶಿವ ಸೊರಟೂರು

ಸರ್ಕಾರಿ ಪದವಿಪೂರ್ವ ಕಾಲೇಜು ಮಲೇಬೆನ್ನೂರಿನಲ್ಲಿ ಪ್ರೌಢಶಾಲಾ ಸಹಶಿಕ್ಷಕನಾಗಿ ಕೆಲಸ. ನಾಲ್ಕು ಕವನ ಸಂಕಲನ, ಎರಡು ಕಥಾ ಸಂಕಲನ ಪ್ರಕಟವಾಗಿವೆ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ಹರಿಹರಶ್ರೀ ಪ್ರಶಸ್ತಿ, ‘ಗಾಯಗೊಂಡ ಸಾಲುಗಳು’ ಕವನಸಂಕಲನಕ್ಕೆ ಬಳ್ಳಾರಿ ಗವಿಸಿದ್ದ ಕಾವ್ಯ ಪುರಸ್ಕಾರ, ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಕವನ ಸಂಕಲನಕ್ಕೆ ಕಾವ್ಯ ಸಂಜೆ ಕಾವ್ಯ ಪುರಸ್ಕಾರ, ‘ನಿನ್ನ ಬೆರಳು ತಾಕಿ’ ಕವನ ಸಂಕಲನಕ್ಕೆ ಮಂಗಳೂರಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರ ಲಭಿಸಿವೆ. ‘ಅರ್ಧ ಬಿಸಿಲು ಅರ್ಧ ಮಳೆ’ ಕಥಾಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ, ‘ಧ್ಯಾನಕ್ಕೆ ಕೂತ ನದಿ’ ಕಥಾಸಂಕಲನಕ್ಕೆ ಈ ಹೊತ್ತಿಗೆ ಕಥಾ ಪ್ರಶಸ್ತಿಗಳು ಸಂದಿವೆ. ದಿನಕರ ದೇಸಾಯಿ ಸಾಹಿತ್ಯ ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಇವರಿಗೆ ಲಭಿಸಿವೆ.