
ಕವಿತೆ
ನಶೀಬದಲ್ಲಿದ್ದಂತೆ ನಡೆಯಲೆಂದು
ಉತ್ತರಕ್ಕೆ ಹೆಜ್ಜೆಹಾಕಿ ಗಿರಿ ತೊರೆ ಕಂದರವ ವಾಲಾಡಿ
ಠೋಳಿ ಕಟ್ಟಿಕೊಂಡು ತಿರುಗುವ
ನರಿ ನಾಯಿಗಳ ಕೋರೆಹಲ್ಲುಗಳ ಅಂದಚಂದಕ್ಕೆ
ಧಕ್ಕೆ ತಗುಲಿಸಿ
ತಿರುಗಿ
ಹುಲ್ಲು ಹುಪ್ಪಡಿಗಳ ತಿಂದು
ಮಿಳ್ಳೆ ಹುಳಿಹೆಂಡಕ್ಕೆ ಢರ‍್ರೆಂದು ತೇಗಿ
ಒಂದಾವರ್ತಿ ಧನ್ಯತೆ ಪಡೆದು
ಬರುತ್ತಿರುವಾಗ ಊರು ಕೇರಿಯ ಜನಜಾತ್ರೆಯ
ಭೂಡಿ ಬಾಬಾಗಳ ಧೂಮ್ರಲೀಲೆಯೂ ಅವರ
ಒಣಕಲು ಕೈ ಕಾಲುಗಳ ಗೃಧ್ರ ಉಗುರೂ
ನೆನಪಾಗಿ ಛೇ..! ಛೇ..! ಅನ್ನಿಸಿ
ಮತ್ತೆ ಬಂದಲ್ಲಿಗೇ ಹೋಗಲು ಹೊರಟು ನಿಂತ
ವೇಳೆ ಪೌಳಿ ಹಾರಿ ಬಂದು ನಿಂತುಬಿಟ್ಟ ಬೆಕ್ಕಿನ ಮರಿಯ
ಚಿತ್ರಸ್ಥ ಚಂದಕ್ಕೆ ಹಳಹಳಿಸಿ
ಮನಸ್ಸು ಬದಲಾಯಿತು
ಯಾವ ಫಾಯಿದೆ ಇಲ್ಲ ಲುಕ್ಸಾನೂ ಇಲ್ಲ
ಬರೇ ಇದ್ದು ಹೋಗಲು ಬಂದ ಎವ್ಡಾಸಿನಂಥವರು ಇಲ್ಲಿ ಎಲ್ಲರು
ಪುಂಗಿ ಊದಿ ಒಂದೇ ಒಂದು ಕೋಳಿಮೊಟ್ಟೆಗೆ
ಕಾದಿರುವ ನೆರಿಗೆ ಬಿದ್ದ ಬಡಕಲು ಹಾವ ಆಡಿಸಿ
ಹೆಡೆ ಮಡಚುವ ಮೊದಲೇ ಟಪ್ಪನೆ ಬುಟ್ಟಿ ಮುಚ್ಚಿ
ಮುಂಡುವ ಕಾಲಸಂಧಿಗೆ ಹೆಟ್ಟಿ
ಎದ್ದು ನಡೆದುಬಿಡುವ ಅವನೂ ನನ್ನಂಥದೇ ಒಬ್ಬ ಬಿಕನಾಸಿ
ಕೈ ಖರ್ಚಿನ ಬಾಬತ್ತು ಕೂಡಿದರೆ
ಗೋಡೆಗೆ ಬೆನ್ನು ಚಾಚಿ ಧರ್ಮಶಾಲೆಯಲ್ಲಿ
ಹಾಡುಗುನುಗುತ್ತ ಕಳೆದು ಕಾಲ
ಕ್ರಮೇಣ
ಆರಿಹೋಗಬಲ್ಲ ಈ ಪ್ರಕಾರವಾಗಿ
ಎದೆಯಲ್ಲಿ ನೀರಿದ್ದವನಾದರೆ ಎಂಜಲು ನುಂಗುವ
ಕೆಲಸ ಒಂದು ಕಮ್ಮಿ
ಬಾಕಿ ಎಲ್ಲ ಯಥಾ ರಾಜಾ ತಥಾ ಪ್ರಜಾ
ರಾಜನೆಂದಾಗ ಮುನ್ನೆಲೆಗೆ ಬರುತ್ತದೆ
ಯುದ್ಧ...
ಅದೇ ಯುದ್ಧವೆಂದರೆ ಹಾಣೆಗೆಂಡೆ ಆಟವಲ್ಲ
ನೆನಪಿಟ್ಟುಕೊಳ್ಳಿ ಇವರ ಮನೆ ಅವರ ಮನೆ ಎಲ್ಲವೂ
ಕಾದುಹೋಗುತ್ತದೆ
ಹಳೆಯ ಕೋಟೆ ಕೊತ್ತಲವ ಮುಚ್ಚಿ ಮೇಲೆದ್ದ
ಎಲೆ ಹಸಿರು ಗಿಡಗಂಟಿ ಕಾಡು ಮೇಡೇ
ಬರೆದಿಟ್ಟುಕೊಳ್ಳಿ
ಕೈ ಕಾಲು ಇರದ ಮಕ್ಕಳು ಬೀದಿಯಲ್ಲಿ
ಮುಷ್ಟಿ ಅನ್ನ ಬೇಡುವಾಗ
ನಿಮಗೆ
ಕಣ್ಣು ಮುಚ್ಚಿಕೊಂಡಿರಬೇಕಾಗುತ್ತದೆ
ಮತ್ತು
ಗೋಲಿಬಾರು, ಗರ್ದಿಗಮ್ಮತ್ತು ಎಂಬ ಪದಗಳ
ಜೀವನಪರ್ಯಂತ ನಿಷೇಧಿಸಿ
ಡಂಗುರಹೊಡೆಸಬೇಕಾಗುತ್ತದೆ
ಗೂಡು ಕಟ್ಟುವ ಹಕ್ಕಿ ಐನು ಮನೆ ಬಾಗಿಲಿಗೇ
ಬಂದಿರುವಾಗ ಬಂದೂಕು ಹುಗಿಸಿಟ್ಟು
ಅಂಗಳದ ಗಿಡಗಂಟಿ ಗುಬಲವ ಬೋಳಿಸಿ
ಈಗ ಹೇಗಾಯಿತು? ಎಂದು ಹಿಕ್ಮತಿ ನಗು ನಗುವ ಚಂಡಾಲ
ತಾಯಿ ಮೊಲೆವಾಲು ಕುಡಿದವನಲ್ಲ
ಬಳಿಕ ಯಾರಲ್ಲಿ...? ಎನ್ನುತ್ತ ಒಳಬಂದರೆ
ಇದುವರೆಗೆ
ಎದೆಯ ಮೇಲೆ ಕಲ್ಲು ಜಡಿದುಕೊಂಡು ಕೂತ
ಹೆಂಡತಿ, ಎರಡು ಮಕ್ಕಳು ಒಳಗಿಲ್ಲ
ಭಳಿರೇ..! ಕಂಠೀರವ ರಾಜಮಾರ್ತಾಂಡ ಭೋಪರಾಕ್ !
ಬಲ್ಲಿರಾ ಯಾರೆಂದು...
ಹೇಳಲಿಕ್ಕೆ ಇನ್ನು ಜನವಿಲ್ಲ
ಇದೋ ದೀಪ ಹಚ್ಚುವ ಹೊತ್ತು
ಉಳಿದ ಮಾತು ಸಾಕು
ಗದ್ದೆಬಯಲ ಕಡೆಗಿಂದ ಬಂದರಲ್ಲ ಆಚೆ ಊರಿನವರೊಬ್ಬರು
ತಂದದ್ದು ಸಾವ ಸುದ್ದಿ
ಹೊರಟುಹೋದರು ಒಳಗೆ ಬರದೇ.. ಕೂರಿ ಚಹಾ ಮಾಡುತ್ತೇನೆ.
ಹಪ್ಪಳ ಸುಡುತ್ತೇನೆ ಎಂದವರಿಲ್ಲದೇ..
ಸಣ್ಣಗೆ ಅಳುವ ಸದ್ದು ತಾಯಿಯಿಲ್ಲದ ಮಗಳದ್ದು
ಅರಳಿ ಮರದ ಅಳಿಲುಗಳಿಗೂ ಅನ್ನವಿಡುತ್ತಿದ್ದ ಅವ್ವ
ಹೋಗಿಬಿಟ್ಟಳಂತೆ
ನಿನಗಾದರೂ ಯಾರೀಗ..
ಮಾಡಿದ್ದು ತಿಂದು ತಿರುಗುವ ಗಂಡ..? ಈ ಮಕ್ಕಳು...?
ಹ್ಹ ಹ್ಹ ಏನು ಹೇಳಲಿ
ಜವ್ವನಕ್ಕೆ ಅಡುಗೆಯದಷ್ಟೇ ಅಲ್ಲ ಕಸ ಮುಸುರೆಯ ಹುಚ್ಚು
ಸದಾ ಮನೆ ಒಪ್ಪವಾಗಿಡುವ ತೆವಲು
ಕೈಲಾಗದ ಮುದುಕಿಯರ ಒಯ್ದು
ತುಂಬು ಚಳಿಯ ದಿನ ನಟ್ಟನಡುವಿರುಳು
ರಸ್ತೆಯಂಚಿನಲ್ಲಿ ಮಲಗಿಸಿ ಬಂದರಾಗದೇ ಯಾರಾದರೊಬ್ಬರು
ಒಲೆಯ ಮುಂದಣ ಬೆಳಕು ಆರಿದ ಮೂರೇ ಘಳಿಗೆಗೆ
ಶ್ರಾವಣ ಶುಕ್ರವಾರ ರಾತ್ರಿ ಊಟಕ್ಕೆ ಹೋಳಿಗೆ
ದೈವದಲ್ಲಿ ಹೊಸ ಹುಡುಗಿಯ ತುಲಾಭಾರ
ಅಕ್ಕಾ ಕೇಳೇ
ರೊಟ್ಟಿ, ಮೂರು ತರದ ಪಲ್ಲೇ
ಗುರೆಳ್ಳು ಪುಡಿ, ಮಸರು ಬರೇ ಮೂವತ್ತು ರೂಪಾಯಿಗೆ
ಮಾರಿಕೊಂಡು ಬಂದ ದಿನ
ಠರಾವು ಪಾಸಾಗಿ ನಾವು ನಾಲ್ವರು ಬದುಕಿಕೊಂಡೆವು
ಆಹಾ.. ಎಂಥಾ ಆರಾಮ..! ಎಂಥ ಸುಖ..!
ಎಂದು ಬನಶಂಕರಿಯಲ್ಲಿ ಸುಳ್ಳು ಹೇಳಿ ಕನಸಿನಲ್ಲಿ
ತುಳಿಯಬಂದವರ ರುಂಡ ಹಾರಿಸಿ ಕೊಂದೆವು
ರೇಣುಕಾ ರಮಾನಂದ
ಉತ್ತರ ಕನ್ನಡ ಜಿಲ್ಲೆಯ ಅಂಕೋಲದವರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಾಲಾ ಶಿಕ್ಷಕಿ. ‘ಮೀನುಪೇಟೆಯ ತಿರುವು’ ಹಾಗೂ ‘ಸಂಬಾರಬಟ್ಟಲ ಕೊಡಿಸು’ ಇವರ ಕವನ ಸಂಕಲನ. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ವಿಭಾ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮುಡಿಗೇರಿವೆ. ಮೈಸೂರು ಮಂಗಳೂರು ಬೆಂಗಳೂರು ಧಾರವಾಡ ವಿಶ್ವವಿದ್ಯಾಲಯಗಳಿಗೆ ಇವರ ಲೇಖನ ಹಾಗೂ ಕವಿತೆಗಳು ಪಠ್ಯವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.