ಅಗ್ಗಿಷ್ಟಿಕೆಯಂತಹ ಕಣ್ಣುಗಳಲ್ಲಿ
ಉರಿಯ ತಾಪ
ಬಿಸಿಲು ಬೆಂಕಿ ನಡುಗದ್ದೆಯಲಿ
ನೆಲ ಬಿರಿದ ವಾಸನೆ
ಮುಷ್ಟಿ ಕಟ್ಟಿದ ಕೈ
ಮುಳ್ಳಿನ ಪೊದೆಯ ಮೇಲೆ ನಿಂತ
ಮೆಟಾಲಿಕ್ ಕಾಲುಗಳು
ವಿಶ್ವರೂಪದ ಅನಾವರಣ
ಮೂರ್ತಿಯ ಇಕ್ಕೆಲಕ್ಕೆ
ತೊಟ್ಟಿಕ್ಕುವ ತುಪ್ಪ
ವಿವಸ್ತ್ರಧಾರಿ ಸ್ವರೂಪ
ಗಟ್ಟಿಗೊಂಡ ವೃಷಣದಲಿ
ಸೋರುವ ವೀರ್ಯದ ತುಂತುರು
ಜಗ ಸೋತ ಜಾತ್ರೆಯಲಿ
ವೈರಾಗ್ಯ ರೂಪ
sex determination is
prohibited
ಕಪ್ಪು ಹಲಗೆಯ ಮೇಲೆ ದೊಡ್ಡ ಬರಹ
ಹುಟ್ಟುವವ ಗಂಡಾಗದಿರಲಿ ಎನ್ನುವ
ನೂರು ಹರಕೆಯ ಅವ್ವಂದಿರು
ಎಲ್ಲವೂ ವಿರಹಕ್ಕೆ ಬೀಳುವುದಿಲ್ಲ
ಹುಟ್ಟಲಿ ಗಂಡಂತ ಭ್ರೂಣಗಳು
ಗಂಡಂದಿರ ಅಳಲು
ಬಳ್ಳಿ ಹಬ್ಬಲಿ ನೆಲ ತಬ್ಬಲಿ
ಉಸಿರಿಗಂಟಿಕೊಂಡ ಮಜ್ಜನದ ನೀರು
ಅಂಗುಷ್ಟ ಮುಟ್ಟಲಿ
ಮುನಿ ಹಚ್ಚಿದ ದೀಪದ ಬುಡದಲ್ಲಿ
ಕತ್ತಲು ಕರಗಿ
ಬೆತ್ತಲಿನ ನೆರಳು ಜಗಕೆ ಮುಟ್ಟಲಿ
ಬೆಂಕಿಯಲಿ ಬೀಳದ ಪತಂಗ
ಹೊಕ್ಕುಳ ಮೇಲೆ ಹಾರಿ
ತೊಟ್ಟಿಕ್ಕುವ ಭುಜದ ಬೆಣ್ಣೆಗೆ
ತರಂಗಗಳ ಅಂಟಿಸಿ
ಕೂಗು ಹಾಕುತ್ತದೆ
ಮುಳುಗದ ಪ್ರಪಂಚ
ಉಸಿರಾಡುವುದೆಂದು
ಪಾಪದ ವೇದನೆ ಪಾಪಿಯ ಶೋಧನೆ
ಪಾವನನಾಗುತ್ತಾನೆ ಅಂತರ್ಮುಖಿ
ಬಹಿರಂಗದ ಬೆನ್ನೆಲುಬಿನಲಿ
ಲೋಕದ ನಿಂದನೆಗಳ ಕುರುಹುಗಳು
ಅಚ್ಚೆ ಹಾಕಿದಂತೆ
ಬಟ್ಟೆಗಂಟಿದ ಬೆತ್ತಲು ಜಗದ
ಕಣ್ಣು ತೆರೆವಾಗ
ಬೆಳಗೊಳದಲಿ ಹಚ್ಚಿದ ಬೆಂಕಿಯ
ಉರಿನಾಲಿಗೆ ಬೆಳಕು ಸುರಿವಾಗ
ಜಗದ ತುಂಬಾ ಉರಿಗದ್ದುಗೆಯ ಕತ್ತಲು
ಮೆಲ್ಲನೆ ಮಾಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.