ಗಾಲಿಬ್,
ಹೀಗೆ
ದಗಲುಬಾಜಿ ಬದುಕಿನ ಬಗ್ಗೆ
ಪುಟಗಟ್ಟಲೆ ದೂರು
-ಗಳ ದಾಖಲಿಸಬೇಕಿದೆ
ಗುಜರಿಯವನೆನಾದರೂ ಸಿಕ್ಕರೆ
ನೆನಪುಗಳನು ಕಿಲೋ
ಲೆಕ್ಕದಲಿ ಮಾರಬೇಕಿದೆ
ಹರಿದು ಹೋದ ಕನಸುಗಳ
ಕೌದಿಗೆ ತೇಪೆಹಾಕಿ
ಹೊದ್ದು ಮಲಗಬೇಕಿದೆ
ಏಕಾಂತದ ಮೆಹೆಫಿಲಿಗೆ
ಬರಿದಾಗದ ಶರಾಬಿನ
ಬಟ್ಟಲು ಬೇಕಿದೆ
ಸಾವು ಕೂಗಿ ಕರೆದರೆ ನಾಳೆಗೆ
ಮೊಹಬ್ಬತಿನ ಮೊಹರು
ಹೃದಯದ ಮೇಲಿದೆ
ಗಾಲಿಬ್ :
ಈ ಸಂಜೆಗೆ ಅವಳ
ನೆನಪ ಬೆರೆಸದೆ
ಕುಡಿದ ಮದಿರೆ
ರುಚಿಸುವುದಾದರೂ ಹೇಗೆ
ಒಲವ ಹುಡುಕುತ್ತ
ಒಂದು ಭೂಮಿ
ಏಳು ಸ್ವರ್ಗ
ನಾಲ್ಕು ನರಕಗಳನ್ನು
ಅಲೆಯದಿರಲಿ ಹೇಗೆ
ಮೊಹೊಬ್ಬತ್ತಿನ ರಿವಾಜುಗಳಿಗೆ
ನಾನು ಹೊಸಬ
ನೋವು ಕಂಬನಿಯ
ಲೆಕ್ಕವಿಡಲಿ ಹೇಗೆ
ದರ್ವೇಶಿಯೊಬ್ಬ ದೂರದಲಿ
ನಿಂತು ಹಾಡುತ್ತಿದ್ದಾನೆ
ಹೃದಯ ಅವಳನ್ನೇ
ಕೂಗಿ ಕರೆಯುವುದ
ತಡೆಯುವುದಾದರೂ ಹೇಗೆ
ಅವಳಿಗೆ ಸೋತು
ಸಾಯುವ ಮೊದಲು
ಕಾಣದ ಕರ್ತನನ್ನು
ಗೆದ್ದು ಅವಳ
ಪಡೆಯುವುದಾದರೂ ಹೇಗೆ?
ಗಾಲಿಬ್,
ಇಲ್ಲಿ
ಗೋರಿಗಳ ಮೇಲೆ
ತಾಜ-ಮಹಲುಗಳನು ಕಟ್ಟಲಾಗುತ್ತದೆ
ಒಲವನು ಜೀವಂತ
ದಫನಿಸಿ ನಿರ್ಜೀವ ಕಥೆ ಹೇಳಲಾಗುತ್ತದೆ
ಸಂಬಂಧಗಳನ್ನು ಬಳಸಿ
ಬಿಸಾಕಿ ವಸ್ತುಗಳನ್ನು
ಕಾಪಿಟ್ಟು ಕೊಳ್ಳಲಾಗುತ್ತದೆ
ಬದುಕು ದ್ವೇಷಕ್ಕೆ
ಮತ್ತು ಸಾವು ಪ್ರೀತಿಗೆ
ಮಾತ್ರ ಬಳಕೆಯಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.