ADVERTISEMENT

ಚಾಂದ್ ಪಾಷ ಬರೆದ ಕವಿತೆ: ಮುನಿಸನಷ್ಟೆ ದಾಖಲಿಸುತ್ತಿರುವೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 19:30 IST
Last Updated 27 ನವೆಂಬರ್ 2021, 19:30 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ತುಂಬು ತುರುಬಿನ ನಡುವೆ ನಗದೆ ಸತಾಯಿಸುವ ಮಲ್ಲಿಗೆ ಮೊಗ್ಗಿಗೆ

ತುಟಿ ಬರೆಯಲು ಎಷ್ಟು ಪ್ರಯತ್ನಿಸಿದರೂ ಮುಂಗೋಪದ ಮುಂಗುರಳು ಕಿಚಾಯಿಸುತ್ತಲೇ ಇದೆ.
ಹಾದಿ ಹಿಡಿದು ಹೊರಡುವ ಜೋಡಿ ಕಂಗಳಲಿ
ಜೋಕಾಲಿ ಕಟ್ಟಿ ತೂಗುವಷ್ಟರಲ್ಲಿ ಮಳೆ ಬಂದು ಬಿಡುತ್ತಿದೆ!

ಪ್ರತಿ ಮಾತಿಗೂ ಲಯ ಹಿಡಿದು ಲಗೋರಿ ಆಡುವ ಅವಳ ಮೌನದಲ್ಲಿ ಎಷ್ಟೊಂದು ಸ್ವರಗಳಿವೆ?
ಲೆಕ್ಕ ಬರೆದಿಡುವಷ್ಟರಲ್ಲಿ ರಾತ್ರಿ ಕಳದೇ ಹೋಯಿತು.
ನಕ್ಷತ್ರಗಳು ನದಿಗೆ ಹಾರಿವೆ ಮುಂಜಾನೆಯಾಗುವಷ್ಟರಲ್ಲಿ!
ಹೂವಿನದೆಯಲ್ಲಿ ಹುಟ್ಟಿದ ಕೋಪದ ಕೆನ್ನೆಗೂ ಬಣ್ಣ ಬಂದಿದೆ,
ಇವಳದೇ ಮುನಿಸಿನ ನಕಲಿರಬೇಕು.

ADVERTISEMENT

ದೀಪದ ನಾಲಿಗೆಯ ಉರಿಗೆ ಇವಳ ಉಸಿರು ತಾಕಿ,
ಕತ್ತಲೆ ಕಣ್ಣಾಮುಚ್ಚಾಲೆ ಆಡುತ್ತಿರಬೇಕು
ಅವಳೆದುರು ಕರಗುವ ಮೊಂಬತ್ತಿಯ ಮೈಯಾಗಿದ್ದರೆ
ಉರಿದು ಬಿಡುತ್ತಿದ್ದೆ, ಅವಳು ಉಸಿರು ಊದುವವರೆಗೆ!
ಸ್ಪರ್ಶ ಸುಖಗಳೆಲ್ಲ ಹಳೆ ಸಂಸಾರದ ಸರಕಾಗಿರುವಾಗ
ವಿರಹದ ವಿನೂತನ ಸುಖದಲ್ಲೇ ಕರಗುತ್ತಿದ್ದೆ
ಕರಗದಿದ್ದರೆ ಕೊರಗುತ್ತಿದ್ದೆ!

ಹೀಗೆ ದಾರಿ ತಪ್ಪಿದ ತಪ್ಪಿದಸ್ತ ಪ್ರೇಮಿಯಾಗಿ ಅಲೆಯುತ್ತಿರುವೆ,
ಕಳೆದು ಹೋದ ಅಲೆಮಾರಿಯ ವಿಳಾಸವ ಅವಳಲ್ಲೇ ಹುಡುಕುತ್ತಿರುವೆ
ಈ ಹುಡುಕಾಟದ ಹೊಂಬಿಸಿಲಲಿ ನೆರಳೆ ಬೇಡ ಎನಿಸುವಾಗ
ಬರಿ ಅವಳ ಮುನಿಸನಷ್ಟೆ ದಾಖಲಿಸುತ್ತಿರುವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.