ADVERTISEMENT

ಕವನ: ಮೇಣದ ರೆಕ್ಕೆ

ಯಶಸ್ವಿನಿ ಎಂ.ಎನ್‌.
Published 29 ಡಿಸೆಂಬರ್ 2024, 0:00 IST
Last Updated 29 ಡಿಸೆಂಬರ್ 2024, 0:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಇಕಾರಸ್‌ನಂತೆ ಮೇಣದ ರೆಕ್ಕೆಗಳ ಧರಿಸಿ
ಮನೆಯ ತಾರಸಿಗೆ ಬಂದೆ
ಕಾಲುಗಳು ಅದುರುತಿದ್ದವು
ದೂರದ ನಗರಕ್ಕೆ ಹಾರಿ ನನ್ನನ್ನು ನಾನು ಕಂಡುಕೊಳ್ಳುವ ಯತ್ನ

ಛೆ.. ಛೆ ..ಈ ಉಪಾಯ ನನ್ನದಲ್ಲ ಚಾಚು ತಪ್ಪದೆ ತನ್ನ ಕಾಯಕ ಪಾಲಿಸುತ್ತಿರುವ ಗೆಳೆಯ ಸಿಸಿಪಸ್‌ನದ್ದು

ADVERTISEMENT

ಸುತ್ತಲೂ ಪಾಯದೊಳಗಂಟಿನಿಂತ ಮಹಡಿಗಳಲ್ಲಿಯೂ ನನ್ನಂತೆ ರೆಕ್ಕೆಗಳ ಕಟ್ಟಿಕೊಂಡು ಆಂತರಿಕ್ಷಯಾನಕ್ಕೆ ಸಜ್ಜಾಗುತ್ತಿದ್ದಾರೆ
ಟೋಕನ್ ಸಂಖ್ಯೆ ನನಗೆ ನೆನಪಿಲ್ಲವಾದರೂ
ಹಾಕಿಕೊಟ್ಟ ನಕ್ಷೆಯ ಜೋಪಾನವಾಗಿ ಕೈಯಲ್ಲಿ ಹಿಡಿದಿರುವೆ

ತುತ್ತ ತುದಿಗೆ ಬಂದು ಕಣ್ಮುಚ್ಚಿ ಎತ್ತರಕ್ಕೆ ಹಾರಿದೇನಾದರು
ಯಾರೋ ಕಂಚಿನ ಪಂಜರದೊಳಗೆ ಬಂಧಿಸಿದ ಹಾಗಾಯ್ತು
ಪ್ರತಿ ಸರಳುಗಳಲ್ಲಿಯೂ ಐಲು ರುಜು
ಸುತ್ತಮುತ್ತಲು ನೂರು ಶವಪೆಟ್ಟಿಗೆಗಳು
ಒಂದು ಪೆಟ್ಟಿಗೆಯಲ್ಲಿ ಕ್ಲಾರಿಸಾ ಮತ್ತೊಂದರಲ್ಲಿ ಮ್ಯಾಕ್ಬೆತ್ ಒಂದರಲಿ ಕ್ರೌರ್ಯ ಮತ್ತೊಂದರಲ್ಲಿ ಔದಾರ್ಯ

ಚಿತ್ರಗುಪ್ತರ ಮುಂದೆ ಹರಡಿಕೊಂಡ ಒಂದೊಂದು ಲಕೋಟೆಗಳಲ್ಲಿಯೂ ವಿಚಿತ್ರ ದಾವೆ
ಅತ್ತ ನ್ಯಾಯದೇವತೆಯ ತಕ್ಕಡಿ ತುಕ್ಕು ಹಿಡಿದಿರುವ ಮಾಹಿತಿ ಬಿತ್ತರವಾಗುತ್ತಲಿತ್ತು
ಇತ್ತ ಸಲ್ಲಿಸಿದ ಅಫಿಡವಿಟ್ ಕೂಡ ವಸ್ತಿ ಹಿಡಿದಿತ್ತು

ಗುಯಿಗುಟ್ಟುತ್ತಿದ್ದ ಗೊಡವೆಗಳ ಪಕ್ಕಕ್ಕೆ ಸರಿಸಿ ಹಿಂದೆ ಸರಿದೆ ಶೀಘ್ರವೇ ಕೈಗೆ ಸಿಕ್ಕ ಪಂಜು ಹಿಡಿದು ಹುಡುಕಲೊರಟೆ ಪಂಜರದ ಕಿಲಿಕೈ...

ಅರೆ! ವಾಸ್ತವದಲ್ಲಿ ಹೆಜ್ಜೆ ಮುಂದಿರಿಸಿ ಇಲ್ಲವಲ್ಲ
ಹಾರುವ ಮುನ್ನವೇ ಮೇಣ ಕರಗಿ ಕೆರೆಯಾಯ್ತಲ್ಲ !
ಒಂದು ಹೂವ ಕೈಗಿತ್ತು ಕೊಠಡಿಯ ಬಳಿ ಬಿಟ್ಟೋದ ದೇವತೆ ಎಲ್ಪಿಸ್ ಯಾವ ಕಡೆ ಹೋದರು
ಹುಡುಕುತ್ತಿರುವೆ
ಇನ್ನು ಹುಡುಕುತ್ತಿರುವೆ!

( ಗ್ರೀಕ್ ಪುರಾಣದಲ್ಲಿ ಬರುವ ಪಾತ್ರಗಳು -ಇಕಾರಸ್, ಸಿಸಿಫಸ್, ಎಲ್ಪಿಸ್(ಭರವಸೆಯ ದೇವತೆ) ವಿಲಿಯಂ ಷೇಕ್ಸ್‌ಪಿಯರ್ ನಾಟಕದಲ್ಲಿ ಬರುವ ಪಾತ್ರ -ಮ್ಯಾಕ್ ಬೆತ್‌ ಸ್ಯಾಮ್ಯುಯೆಲ್ ರಿಚರ್ಡ್‌ಸನ್‌ ಬರೆದ ಕಾದಂಬರಿ ಪಾತ್ರ- ಕ್ಲಾರಿಸ್ಸಾ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.