ಮಳೆಗಾಲದಲ್ಲಿ ಬಿಸಿಲು
ಬೇಸಿಗೆಯಲ್ಲಿ ಮಳೆ
ಇವೆರಡರ ಬಿಡುವಲ್ಲಿ ತಣ್ಣಗೆ
ತೇಲಿ ಹೋಗುವ ಚಳಿ
ಹೊಂದಾಣಿಕೆಯಿಲ್ಲದ ಹವಾಮಾನದ
ವೈಪರೀತ್ಯದ ನಡುವೆ ಬೀಸುವ ಹೊಸ ಗಾಳಿ
ಯಾವ ಕಾಲಕ್ಕೆ ಯಾವ ಬೆಳೆ
ಕರಾರುವಾಕ್ಕಾಗಿ ತಿಳಿದಿದೆ
ರೂಢಿಯಂತೆ ಬಿತ್ತುವ ಕೆಲಸವಷ್ಟೆ ಕೈಗಳಿಗೆ
ಅನುಮಾನಿಸುತ್ತಲೇ ಮೊಳೆಕೆಯೊಡೆಯವ ಬೀಜ
ಫಸಲಿನ ಹೊಣೆ ಕಾಲದ ಕರುಣೆ
ಆಗಿದ್ದನ್ನು ಈಗಿನವರು
ಈಗಿದ್ದನ್ನು ಆಗಿನವರು
ಅವರಿಗೆ ಇವರು, ಇವರಿಗೆ
ಅವರು
ಕರುಬುವುದು ಕೊಂಡಾಡುವುದು
ಹಿಂಜುವುದು ಹಳಿಯುವುದು
ಅನುಕೂಲಕ್ಕೆ ತಕ್ಕಂತೆ ಕಾಲವನ್ನು
ತಿರುಗಿಸಿಕೊಳ್ಳುವುದು ಹೊಸತೇನಲ್ಲ.
ಮೊಮ್ಮಗಳ ಮೊಣಕಾಲ ಮೇಲಿನ ಧಿರಿಸಿಗೆ
‘ಸಿವನೇ ಇದೇನ್ ಕಾಲನಪ್ಪ! ‘ ಅಂತ
ಸಿಡಿಮಿಡಿಗೊಳ್ಳುವ ಅಜ್ಜಿ
‘ಈಗ ಎಷ್ಟು ಆರಾಮ! ‘ಅನ್ನುತ್ತಾ
ಚೂಡಿದಾರ್ ಕೋಸುತ್ತಾ ವಾಕಿಂಗ್ ಹೋಗುತ್ತಾಳೆ.
‘ಇದರಷ್ಟು ಕಂಪರ್ಟ್ ಇನ್ನೊಂದಿಲ್ಲ’ ವೆನ್ನುತ್ತಾ
ಅವಳಮ್ಮ ಜೀನ್ಸ್ ತೊಟ್ಟು
ಸಿಟಿ ಬಸ್ಸು ಹತ್ತುತ್ತಾಳೆ.
ಪಾರಿವಾಳ ಸಂದೇಶ ಹೊತ್ತು ತರುವ
ಬರಿಗಾಲಿನ ನಡೆಯುವ ಕಾಲದ ಕರುಣಾಜನಕ
ವ್ಯಥೆಯ ಉಪದೇಶ ಅವಳತ್ತೆಗೆ ಸರಾಗ
ಎ ಸಿ ಕಾರಿನೊಳಗೆ ಕುಂತೇ
ಮೊಬೈಲು ಕುಟ್ಟುತ್ತಾ ಅದೇ ಕತೆಯನ್ನು
ಹೊಸ ಬಗೆಯಲ್ಲಿ ಕಟ್ಟುತ್ತಾಳೆ
ಸೊಸೆ ಬರಿದೇ ಹ್ಮೂಂ ಗುಟ್ಟುತ್ತಾಳೆ.
ಒಂದೇ ಸೂರಿನಡಿಯಲ್ಲಿ
ಒಂದೇ ಮಡಕೆಯ ಅನ್ನ ಉಂಡು
ಅಪರಿಚಿತ ಭಾವವೊಂದನ್ನ ಹೊದ್ದುಕೊಂಡೇ
ಹಗಲು ಸವೆಯುತ್ತದೆ; ಇರಳು ನವೆಯುತ್ತದೆ
ದೂರದಲ್ಲಿ ಕೇಳುವ ಭಾವಗೀತೆಯೊಂದು
ಬದುಕ ಸಹ್ಯಗೊಳಿಸುತ್ತದೆ.
ಆಗೀಗೊಮ್ಮೆಯಾದರೂ
ಅವರ ಮನಸು ಇವರೊಳಗೆ
ಇವರದ್ದು ಅವರೊಳಗೆ ಕ್ಷಣಕ್ಕಾದರೂ
ಕನಲಿಕೊಂಡಿದ್ದರೆ..? ತೊಡಿಸಬಹುದಿತ್ತು
ಜಗತ್ತಿಗೇ ಒಂದೇ ಧಿರಿಸು .
ಅದಲು ಬದಲಾಗುವುದು
ಲೋಕಕ್ಕೆ ಒಂದು ನಿದ್ರೆಯ ಹೊರಳು
ಯಾವ ಜಾವದ ನಿದ್ರೆ
ನನ್ನೊಳಗೆ ನಿನ್ನ ನಿನ್ನೊಳಗೆ ನನ್ನ ಬಿಂಬಕ್ಕೆ
ಬೆಳಕು ತೊಡಿಸ ಬಹುದು?!
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.