ಸಾಂದರ್ಭಿಕ ಚಿತ್ರ
ಅಭಿಸಾರಿಕೆ ಭಗವತಿಯ..
ಉವಾಚವಿದು..!
ಯಾರಿಲ್ಲಿ ವ್ಯಭಿ..?
ಮಹಲ ವಿಲಾಸದಲಿ ಮೈಯ ಮಾರುವವಳೇ.!?
ಹಾಗಿದ್ದರೆ..!
ಬುದ್ಧಿಯ ಮಥಿಸಿ ಮನ ಮಾರುವವರನ್ನು ಏನೆನ್ನ ಬಹುದು..!
ತಡವೇಕೆ ಮಣ್ಣ ವಿಷವಾಗಿಸುವ..
ಗಡಿಯ ಗೌಪ್ಯವ ಮಾರಿ ಉಣ್ಣುವವರ..
ಏನೆನ್ನಬೇಕು..!?
ಸತ್ಯ ಸ್ಥಾವರದಲಿ ನಿತ್ಯ ಕಪ್ಪು ಪಟ್ಟಿಯ ಕಟ್ಟಿ
ಸುಳ್ಳ ಕಿಚ್ಚಾಯಿಸಿ ಸತ್ಯ ಮರೆಮಾಚುವ ನೀಚ ಬುದ್ದಿಗಿಲ್ಲದ ವ್ಯಭಿತನ
ನನಗೇಕೆ ..? ಅಂಟಿಹುದು..!
ಲಘುತನದಿ ಗುರುವು..
ಗುರು ಕಾಯ ಮರೆತು
ಚೀಟಿ ಬಡ್ಡಿಯ ಚಟದಿ ಲೋಕ ತಿರುಗುತಿಹನು..!
ನೀತಿ ರೂಪಕನು ಅನೀತಿಯ ದಾರಿಯಲಿ ನಿತ್ಯ ಸ್ವಚ್ಛಂದದಲಿ ಸಾಗುತಿಹನು..!
ಸತ್ಯ ಶೋಧಕನು ಸುಳ್ಳ ಕಟ್ಟೆ ಕಟ್ಟಿ ವಿರಾಜಮಾನನಾಗಿಹನು..!
ಗುಣವು ಅವಗುಣದಿ ಅಗುಣದ ಕೋಟೆಯ ಗುಂಪ ಕಟ್ಟಿ ತಿರುಗುತಿಹುದು..!
ತಂದೆ ಮಕ್ಕಳ..ಮಕ್ಕಳು ತಾಯ್ತಂದೆಯ ಕೊಲ್ಲಲೇಸದಿಹರು..!
ಇವರಿಗಂಟದ ವ್ಯಭಿತನ..
ತುತ್ತು ಅನ್ನಕ್ಕೆ..ತುಂಡು ಬಟ್ಟೆಗೆ
ಮೈ ಮಾರುತಿಹ ನನಗಂಟಿಹುದು..!
ಯಾರಿಲ್ಲಿ ವ್ಯಭಿ...!? ನಾನು ನನಗಿಹುದ ಮಾರುತಿಹೆನು..!
ಲೋಕವನಲ್ಲ...!
ಲೋಕ ಮಾರುವ ಮಂದಿಗಿಲ್ಲದ ವ್ಯಭಿತನ ನನಗೇಕೆ..?
ಯಾರಿಲ್ಲಿ ವ್ಯಭಿ..! ? ಯಾರು..?
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.