ADVERTISEMENT

ಸ್ಮಿತಾ ಅಮೃತರಾಜ್ ಸಂಪಾಜೆ ಅವರ ಕವಿತೆ: ಒಂದು ನಂಬುಗೆಯ ಮೇಲೆ

ಸ್ಮಿತಾ ಅಮೃತರಾಜ್
Published 29 ಮಾರ್ಚ್ 2025, 23:31 IST
Last Updated 29 ಮಾರ್ಚ್ 2025, 23:31 IST
ಸಾಂದರ್ಭಿಕ ಕಲೆ
ಸಾಂದರ್ಭಿಕ ಕಲೆ   

ನಂಬಿ ಕೆಟ್ಟವರಿಲ್ಲ ಅಂತ

 ದಾಸರೇ ಹೇಳಿದ್ದಾರೆ

ನಂಬಿ ಕೆಡಬಾರದು ಅಂತ ಅವಳು

ADVERTISEMENT

ಹೇಳುತ್ತಲೇ ಇರುತ್ತಾಳೆ

ನಂಬುಗೆ ಅತಿಯೂ ಆಗಬಾರದು

ಅನ್ನುವವರೂ ಇದ್ದಾರೆ

ನಂಬಿದರೆ ನಂಬಿ ನಿಮ್ಮಿಷ್ಟ ಅಂತ

ಮುಂದೆ ಹೋಗುವವರೂ ಇದ್ದಾರೆ.


ಇಷ್ಟೆಲ್ಲಾ ಆದದ್ದು ಒಂದು

 ನಂಬುಗೆಯ ಮೇಲೆಯೇ

ಗೆದ್ದದ್ದು,ಬಿದ್ದದ್ದು

ಎದೆ ಮಿಡಿದದ್ದು,ಒಡಲು ಬಗೆದದ್ದು

ಹಳ್ಳ ಹಿಡಿದದ್ದು, ದಡ ಸೇರಿದ್ದು

ಒಂದು ಆರಂಭ ;ಇಲ್ಲವೇ ಅಂತ್ಯ

 ನಂಬಿಯೇ

 ಅಹಲ್ಯೆ ಕಲ್ಲಾದಳು

ಶಕುಂತಳೆ ಬಸುರಾದಳು

ಸೀತೆ ಲಂಕೆ ಪಾಲಾದಳು

ಅದೇ ಹಳೇ ಪ್ರತಿಮೆ ಅಂತ

ಗೊಣಗದಿರಿ

ಇಲ್ಲಿ ಶಕ್ಕು,ಲೀಲಾ,ಲೋಲರದ್ದು

ಪುರಾಣದ ಮುಂದುವರಿಕೆಯ ಕತೆಯೇ

ನಂಬಿಕೆ ಕಾಲಾತೀತವಾದದ್ದು


ಅವಳು ಕಳಕೊಂಡದ್ದು

ಅವನು ಪಡಕೊಂಡದ್ದು

ಎಲ್ಲಾ ಸೂರೆ ಹೋದ ಮೇಲೂ

ಬದುಕು ಚಿಗುರಿ ನಿಂತದ್ದು

ಒಂದು ನಂಬಿಕೆಯ ಚಿಗುರೆಲೆಯ 

ಮೇಲೆಯೇ


ನಂಬುಗೆ ಗಾಢವಾದಷ್ಟು ಬಳ್ಳಿ 

ಮರವನ್ನು ಆಧರಿಸಿ ಜಿಗಿಯುತ್ತದೆ

ಕಾಲ ಮಿಂಚಿದಾಗ ಮರ ಬಳ್ಳಿಯಾಗುತ್ತದೆ

ಬಳ್ಳಿ ಮರವಾಗುತ್ತದೆ

ಅಸ್ತಿತ್ವದ ಪ್ರಶ್ನೆಯೇ ಒಗಟಾಗುತ್ತದೆ

ನಂಬುಗೆಯ ಛಾವಣಿಯಡಿಯಲ್ಲಿ

ತಪ್ಪು -ಒಪ್ಪುಗಳು ಅಪ್ಪಿಕೊಳ್ಳುತ್ತವೆ

ಉಪ್ಪು ಹುಳಿ ಖಾರ ಒಗರು

ಹದದ ಮೇಲೆ ಬದುಕು ಒಗ್ಗಿಕೊಳ್ಳುತ್ತದೆ


ನಂಬಲಾಗದೆ, ನಂಬದೆಯೂ ಇರಲಾಗದೆ

ಅವಳು ತೊಳಲಾಡುವಾಗ

ನಂಬಿಕೆಯೇ ‘ದೇವರು’ಅಂತ ಅವನು 

ತಣ್ಣಗೆ ಉತ್ತರಿಸುತ್ತಾನೆ


ನಂಬಿಕೆ ಎಷ್ಟು ತೂಕದ ಪದ!

ಎಷ್ಟು ತೂಗಿದರೂ ಅಳತೆಗೆ

 ದಕ್ಕುವುದಿಲ್ಲವಲ್ಲ?!

ಅವಳ ದ್ವಂದ್ವ ನಿಲ್ಲುವುದಿಲ್ಲ

ಶರಣಾಗಿಬಿಡು ಅಷ್ಟೆ.

ಉಳಿದದ್ದು ಕಾಲವಶ

ಒಳಗೇನೋ ಪಿಸುಕು ದನಿ

ದೂರದಲ್ಲೆಲ್ಲೋ  ಕೇಳಿಸುವ ಆಲಾಪದ

 ಆಲನೆಯಲ್ಲಿ…

 ಅವಳು ಮುಂದಡಿಯಿಡುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.