ನೀರಿನಲ್ಲಿ ಕಾಗದದ ದೋಣಿ ತೇಲಿಬಿಟ್ಟು ಖುಷಿಪಡುತ್ತಿರುವ ಬಾಲಕ ಪ್ರಜಾವಾಣಿ ಚಿತ್ರ/ಬನೇಶ ಕುಲಕರ್ಣಿ
ದಿನಪತ್ರಿಕೆಯ ಮೊದಲ
ಪುಟದಲ್ಲಿ ಈಗ ಕದನದ ಸುದ್ದಿ
ಕೊನೆಯ ಪುಟದಲ್ಲಿ ಕ್ರೀಡಾ ವರದಿ
ಅಷ್ಟೇನೂ ಫರಕು ಇಲ್ಲ ಬಿಡಿ ಈಗ
ಕ್ರಿಕೆಟ್ಟಿಗೂ ಕದನಕೂ ಬಾಜಿ
ಕಟ್ಟುತ್ತಾರೆ ಎರಡೂ ಬದಿ ಈಗ
ನಡುಪುಟದಲ್ಲಿ ಅಷ್ಟಿಷ್ಟು ಜಾಗ ಪಡೆದ
ಬಲು ಸಂಕೋಚದಲ್ಲೆ ಪ್ರಕಟಗೊಳ್ಳುವ
ಕವಿತೆ.
ಗಡಿಗಳಲ್ಲಿ ಸುಡು ಸುಡುವ ಸುದ್ದಿ ಸಿಡಿ
ಮದ್ದಿನ ಸದ್ದು
ಪಾದವೂರುವಲ್ಲೆಲ್ಲಾ ಉರಿ ಉರಿ ನೆಲ
ಕೈವೂರುವಲ್ಲೆಲ್ಲಾ ತಾಗುವ ಕಿಡಿ
ಹುಡುಗಿ ಕಾಲಡಿಯ ಮದರಂಗಿ
ಬೆಂಕಿ-ಕಿಡಿ ಹೂ
ತೀಡಿ ಬಂದ ನೋವ ಗಾಳಿ ತಾಗಿ ಹಾ !
ಪರಿಚಿತ ದಾರಿಯಲ್ಲೇ ಮತ್ತೆ ಮತ್ತೆ
ಎಡವಿ ಬೀಳುವ ತಾಯಿ
ಹಿಡಿಯನ್ನಕ್ಕೆ ಹಂಬಲಿಸಿ ಮರು ಮರುಗಿ ಮಲಗುವ ಕರುಳ ಕುಡಿ
ಹಳೆಯ ರೂಪಕಗಳ ಧಿಕ್ಕರಿಸಿ
ಹೊಸ ವೇಷದಲಿ ಹರಿವ ನೆತ್ತರ ಹೊಳೆ
ಹಗೆ ಹಗೆಯ ಹೊಗೆ ಕುಹುಕ ನಗೆ
ಗಡಿ ದಾಟಿ ಊರ ಬೀದಿ ಬೀದಿಗೆ
ಬಿದ್ದ ಕದನ ಈಗ ಎಲ್ಲರ ಈಟಿ ನೋಟದೊಳಗೆ
ಎದೆಯ ಮಣ್ಣಿನಲಿ ಹರಿತ ಕತ್ತಿ ಗುರಾಣಿ ಬೆಳೆ
ಕವಿಗಳು ಕವಿತೆ ಬರೆಯಲಿ
ಯೋಧರು ಕತ್ತಿ ಹಿಡಿಯಲಿ
ಕವಿತೆ ಮೊದಲೋ ಕತ್ತಿ ಮೊದಲೋ
ಬೆಂಕಿ ನಾಲಿಗೆ ಬಿಸಿ ಬಿಸಿ ಚರ್ಚೆ ಕಾವು
ಸದನದಲ್ಲೂ ಕದನ ಮುಂದುವರೆದು
ಪುಟ ಪುಟದಲ್ಲೂ ಅದೇ ವರದಿ
ಗಂಧಕದ ಗಾಳಿ ಕುಡಿ ಕುಡಿದು
ಹಸಿದ ಹೊಟ್ಟೆಯಲಿ ಎದ್ದ ಮಕ್ಕಳು
ಸಂಜೆ ಬಿದ್ದ ಮಳೆಗೆ ಸುದ್ದಿ ಪತ್ರಿಕೆಯ
ಮಡಚಿ ಕಾಗದದ ದೋಣಿ ಮಾಡಿ ತೇಲಿ ಬಿಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.